ತುಳುನಾಡಿನ ಆರಾಧ್ಯ ಗುಳಿಗ ದೈವದ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರರಿಂದ ಅವಹೇಳನಕಾರಿ ಹೇಳಿಕೆ: ದೈವ ಸನ್ನಿಧಿಗೆ ಬಂದು ಕ್ಷಮೆ ಕೇಳದಿದ್ದರೆ ಘೇರಾವ್ ಹಾಕುವ ಎಚ್ಚರಿಕೆ ನೀಡಿದ ನಲಿಕೆಯವರ ಸಮಾಜ ಸೇವಾ ಸಂಘ
ಮಂಗಳೂರು: ತುಳುನಾಡಿನ ಆರಾಧ್ಯ ಗುಳಿಗ ದೈವದ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ ನೀಡಿರುವ ಅವಹೇಳನಕಾರಿ ಹೇಳಿಕೆ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಗೃಹಸಚಿವರು ಕರಾವಳಿಯ ದೈವ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು ಎಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಪ್ರಭಾಕರ ಶಾಂತಿಕೋಡಿ ಒತ್ತಾಯಿಸಿದ್ದಾರೆ.
ತೀರ್ಥಹಳ್ಳಿಯ ಸಭೆಯೊಂದರಲ್ಲಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ತುಳುನಾಡಿನ ಆರಾಧ್ಯ ದೈವವಾದ ಗುಳಿಗಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು, ಅವ್ರು ಮಾತನಾಡಿರುವ ವೀಡಿಯೋವೊಂದು ವೈರಲ್ ಆಗುತ್ತಿದ್ದಂತೆಯೇ ಸಚಿವರ ವಿರುದ್ಧ ಕರಾವಳಿ ಭಾಗದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಫ್ಲೆಕ್ಸ್ ನೋಡಿ ಗುಳಿಗೆ-ಗುಳಿಗೆ ಎಂದು ಹೇಳಿದ್ದು, ನಮ್ಮ ದೈವವನ್ನು ಒಂದು ಮಾತ್ರೆಗೆ ಹೋಲಿಸಿದ್ದಾರೆ. ನಮ್ಮ ದೈವವೇ ಅವರಿಗೆ ಉತ್ತರ ಕೊಡಬೇಕು, ಎಲ್ಲಾ ಗುಳಿಗ ಶಕ್ತಿಗಳು ಒಟ್ಟು ಸೇರಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕು, ದೈವ-ದೇವರ ಸನ್ನಿಧಿಯಲ್ಲಿ ಬಂದು ಆರಗ ಜ್ಞಾನೇಂದ್ರ ಅವರು ಕ್ಷಮೆ ಯಾಚಿಸಬೇಕು ಎಂದು ಪ್ರಭಾಕರ ಶಾಂತಿಕೋಡಿ ಅಗ್ರಗಿಸಿದ್ದಾರೆ.
ಮುಂದಿನ ಒಂದು ವಾರದ ಗಡುವು ನೀಡುತ್ತಿದ್ದೇವೆ, 1 ವಾರದಲ್ಲಿ ಬರದೆ ಇದ್ದರೆ ಮಂಗಳೂರು ಭೇಟಿ ಕಾರ್ಯಕ್ರಮದಲ್ಲಿ ಸಚಿವರಿಗೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿರುವ ಅವರು, ಇನ್ನು ಮುಂದೆ ದೈವಾರಾಧನೆಯನ್ನು ನಾಟಕ, ಯಕ್ಷಗಾನದಲ್ಲಿ ಬಳಕೆ ಮಾಡಬೇಡಿ ಎಂದರು.
ದೈವರಾಧನೆಗೆ ಈ ರೀತಿ ನಡೆಯುವ ಅಪಚಾರ ತಪ್ಪಿಸಲು ದೈವರಾಧಕರ ಸಮಾವೇಶ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಪ್ರಭಾಕರ ಶಾಂತಿಕೋಡಿ ಹೇಳಿದ್ದಾರೆ.