ಝಕಾತ್ ಕೊಡುವಾಗ ಇವರನ್ನು ಖಂಡಿತ ಗಮನದಲ್ಲಿಡಿ!
- ಡಿ. ಐ. ಅಬೂಬಕರ್ ಕೈರಂಗಳ
ಪವಿತ್ರ ರಮಳಾನಿನ ಹೊಸ್ತಿಲಲ್ಲಿ ನಾವಿದ್ದೇವೆ. ಕೆಲವು ಶ್ರೀಮಂತರು ರಮಳಾನಿನಲ್ಲಿ ಝಕಾತ್ ಕೊಡುತ್ತಾರೆ. ಸೊತ್ತು ಕೈವಶವಾದ, ಅಥವಾ ವ್ಯಾಪಾರ ಆರಂಭವಾದ ದಿನದಿಂದ ಒಂದು ವರ್ಷ ಪೂರ್ತಿಯಾದರೆ ಝಕಾತ್ ಕಡ್ಡಾಯವಾಗುತ್ತದೆ. ಹೆಚ್ಚಿನವರ ಸೊತ್ತು ಕೈವಶವಾದುದು ಅಥವಾ ವ್ಯಾಪಾರ ಆರಂಭವಾದುದು ರಮಳಾನ್ ತಿಂಗಳಲ್ಲೇನೂ ಅಲ್ಲ. ಕೆಲವರಿಗೆ ಅದಕ್ಕೆ ಮೊದಲೇ ವರ್ಷಾಂತ್ಯವಾಗಿ ಝಕಾತ್ ಕಡ್ಡಾಯವಾಗಿರಬಹುದು. ಝಕಾತ್ ಕಡ್ಡಾಯವಾದ ನಂತರ ಕೊಡದೆ ಮುಂದೂಡುವುದು ಹರಾಮ್. ಆದರೆ ಮುಂದೂಡಿದರೂ ಬಾಧ್ಯತೆ ತೆರವಾಗುವುದಿಲ್ಲ. ಕೊಡುವುದನ್ನು ಕೊಡಲೇ ಬೇಕು.
ಈ ವಿಷಯದಲ್ಲಿ ಹೆಚ್ಚಿಗೆ ಹೇಳಲು ನಾನು ಅರ್ಹನಲ್ಲ. ಅದಕ್ಕೆ ಇಲ್ಲಿ ಉಲಮಾಗಳಿದ್ದಾರೆ. ಈ ವಿಷಯದಲ್ಲಿ ಅವರು ಸೂಕ್ತ ಮಾಹಿತಿ ನೀಡುವರು.
ನಾನು ಹೇಳಹೊರಟಿರುವುದು ಅದಲ್ಲ. ಒಂದು ವಿಭಾದವರು ನಮ್ಮ ಸಮಾಜದಲ್ಲಿ ಬಹಳ ಕಷ್ಟದಲ್ಲಿರುತ್ತಾರೆ. ಶ್ರೀಮಂತರಾಗಿ, ಮಧ್ಯಮ ವರ್ಗದವರಾಗಿ ಸಮಾಜದಲ್ಲಿ ಗೌರವದಿಂದ ಬಾಳಿದವರು. ಆದರೆ ಕೊರೋನಾದಂತಹ ಮಹಾಮಾರಿಯ ಪಲವಾಗಿ ಅಥವಾ ಇನ್ಯಾವುದೋ ಕಾರಣದಿಂದ ಆದಾಯ ನಷ್ಟವಾಗಿ ಬಹಳ ಕಷ್ಟದಿಂದ ಜೀವನ ಸಾಗಿಸುವವರು ಧಾರಾಳ ಇದ್ದಾರೆ. ಫ್ಲಾಟ್ ಗಳಲ್ಲಿ ವಾಸಿಸುತ್ತಿರುವ ಕೆಲವು ಕುಟುಂಬಗಳು ದಿನವೆಚ್ಚಕ್ಕೆ ಗತಿಯಿಲ್ಲದೆ ಫ್ರಿಡ್ಜ್ ಮುಂತಾದ ಅವಶ್ಯಕ ಉಪಕರಣಗಳನ್ನು ಮಾರುತ್ತಿರುವಂತಹ ವಿಷಯ ಕೂಡಾ ನನ್ನ ಗಮನಕ್ಕೆ ಬಂದಿದೆ. ಒಂದು ಕಾಲದಲ್ಲಿ ಉತ್ತಮ ಗುಣಮಟ್ಟದ ಜೀವನ ಸಾಗಿಸುತ್ತಾ ಮರ್ಯಾದೆಯಿಂದ
ಬಾಳಿದ್ದ ಇಂತಹವರು ಇದೀಗ ತಮ್ಮ ಪರಿಸ್ಥಿತಿಯನ್ನು ಯಾರಲ್ಲೂ ಹೇಳುವಂತಿಲ್ಲ. ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂಬಂತಹ ಅವಸ್ಥೆಯಲ್ಲಿರುತ್ತಾರೆ. ಬಡವರಾಗಿಯೇ ಗುರುತಿಸಲ್ಪಡುವವರು ಝಕಾತ್ , ಸದಕಾ ಸಿಗುವಲ್ಲಿಗೆ ನಿಸ್ಸಂಕೋಚವಾಗಿ ಹೋಗಿ ಪಡಕೊಂಡು ಬರುತ್ತಾರೆ. ಅವರು ಏನಾದರೊಂದು ಕೆಲಸ ಮಾಡಿಯೂ ಸಂಪಾದಿಸುತ್ತಾರೆ. ರಮಝಾನ್ ಕಿಟ್ ಕೂಡಾ ಅವರಿಗೇ ಸಿಗುತ್ತದೆ. ಬಡವರಿಗೆ ಕಿಟ್ ಸಿಗುವುದು ಕಾಣುವಾಗ ನಮಗೂ ಒಂದು ಕಿಟ್ ಸಿಕ್ಕಿದ್ದರೆ ಉಪಕಾರವಾಗುತ್ತಿತ್ತು ಎಂದು ಇವರು ಆಸೆಪಡುತ್ತಾರೆ. ಆದರೆ ಕಿಟ್ ಕೊಡುವವರ ದೃಷ್ಟಿಯಲ್ಲಿ ಅವರು ಸ್ಥಿತಿವಂತರಾಗಿರುವುದರಿಂದ ಅವರಿಗೆ ಕಿಟ್ ಕೊಡುವುದೂ ಇಲ್ಲ. ಝಕಾತೂ ಸಿಗುವುದಿಲ್ಲ, ದಾನವೂ ಸಿಗುವುದಿಲ್ಲ! ನಗುಮುಖದ ಮರೆಯಲ್ಲಿ ದುಖ ಅನುಭವಿಸುತ್ತಾ ಪ್ರತಿಷ್ಠಿತ ರೆಂಬ ಹಣೆಪಟ್ಟಿಯ ಅಂತರ್ಯದಲ್ಲಿ ಪಡಬಾರದ ಪಡಿಪಾಟಲು ಪಡುತ್ತಾ ಜೀವಿಸುತ್ತಿರುವ ನತದೃಷ್ಟ ಕುಟುಂಬಗಳು ಇಂದು ಧಾರಾಳ ಇದ್ದಾರೆ. ಮಂಗಳೂರು ನಗರ ಮತ್ತು ಆಸುಪಾಸಿನ ಪ್ಲಾಟುಗಳಲ್ಲಿ ಇಂತಹವರು ಧಾರಾಳ. ಅನುಕೂಲಸ್ಥರಾಗಿ ಊರಲ್ಲಿ ಜೀವಿಸಿದ್ದವರು ಈಗಿನ ಕಷ್ಟವನ್ನು ಊರವರು ಕಾಣದೆ ಇರಲಿ ಎಂಬ ಉದ್ದೇಶದಿಂದಲೂ ಊರಿಂದ ದೂರದ ಪ್ಲಾಟ್ ಗಳಲ್ಲಿ ವಾಸಿಸುವವರೂ ಇದ್ದಾರೆ. ಇವರ ನೋವನ್ನು ಗುರುತಿಸುವವರಿಲ್ಲ. ಇವರ ನಿಟ್ಟುಸಿರು ಯಾರಿಗೂ ಕೇಳಿಸದೆ ಶೂನ್ಯದಲ್ಲಿ ಮಾಯವಾಗುತ್ತದೆ.
ಈ ವಿಷಯವನ್ನು ಓರ್ವ ಉಸ್ತಾದರಲ್ಲಿ ನಾನು ಚರ್ಚಿಸಿದಾಗ ಅವರು ಇದು ಬಹಳ ಗಂಭೀರವಾದ ವಿಷಯ, ಈ ಬಗ್ಗೆ ಖುರ್ ಆನ್ ಸ್ಪಷ್ಟವಾಗಿ ಹೇಳಿದೆ, ಆದರೆ ಜನರು ಈ ಬಗ್ಗೆ ಗಮನಹರಿಸುವುದು ಕಡಿಮೆ ಎಂದರು. ಖುರ್ ಆನಿನ ಪ್ರಸ್ತುತ ಆಯತನ್ನು ಬರೆದು ಕೊಟ್ಟರು. ಅದು ಹೀಗಿದೆ;
"ಸ್ವರ್ಗಕ್ಕೆ ಹೋಗುವ ಭಕ್ತರು ಯಾರೆಂದರೆ ಅವರ ಸೊತ್ತುಗಳಲ್ಲಿ ಅಪೇಕ್ಷಕರಿಗೂ ತಡೆಹಿಡಿಯಲ್ಪಟ್ಟವರಿಗೂ ಹಕ್ಕು ಇರುತ್ತದೆ" ( 51- 19)
ಈ ಆಯತಲ್ಲಿ ಹೇಳಲಾದ;
" ತಡೆಹಿಡಿಯಲ್ಪಟ್ಟವರು ಅಂದರೆ ಬಡವರಾಗಿದ್ದರೂ ಶ್ರೀಮಂತರಂತೆ ಕಾಣುವುದರಿಂದ ಬಡವರಿಗೆ ದೊರೆಯುವ ಸವಲತ್ತುಗಳಿಂದ ತಡೆಹಿಡಿಯಲ್ಪಟ್ಟವರು ಎಂದರ್ಥ ಎಂದು ಉಸ್ತಾದರು ವಿವರಿಸಿಕೊಟ್ಟಿದ್ದಾರೆ.
ಇವರು ಮೇಲೆ ನಾನು ವಿವರಿಸಿದ ಅದೇ ವಿಭಾಗ. ಅಂತಹವರು ಕೇಳಿಕೊಂಡು ಬರಲಾರರು, ಕಿಟ್ ಗೆ ಕೈಚಾಚಲಾರರು. ಆದರೆ ಕಿಟ್ ದೊರೆತ ಬಡವರಿಗಿಂತಲೂ ಹೀನಾಯ ಸ್ಥಿತಿ ಅವರದ್ದಾಗಿರಬಹುದು. ಬಡವರಿಗೆ ಅವರಿವರಿಂದ ನಾಲ್ಕೈದು ಕಿಟ್ ದೊರೆತು ರಮಳಾನಿನಲ್ಲಿ ಸಮೃದ್ಧವಾಗಿ ಬದುಕುತ್ತಿದ್ದರೆ ಇವರಿಗೆ ಒಂದು ಕಿಟ್ ಕೂಡಾ ಸಿಗದೆ ಕಷ್ಟದಲ್ಲಿರಬಹುದು.
ಪವಿತ್ರ ಖುರ್ ಆನಲ್ಲಿ ಅಲ್ಲಾಹನು ಇಂತಹ ವಿಭಾಗವನ್ನು ಗುರುತಿಸಿ ದಾನಧರ್ಮ, ಸಹಾಯ, ಝಕಾತ್ ಗಳನ್ನು ತಲುಪಿಸುವಂತೆ ಮೇಲಿನ ಆಯತಲ್ಲಿ ಸೂಚಿಸಿದ್ದಾನೆ.
ಆದ್ದರಿಂದ ಈ ರಮಳಾನ್ ನಲ್ಲಿ ಝಕಾತ್, ಸದಖಾ, ಕಿಟ್ ಕೊಡುವ ಎಲ್ಲಾ ದಾನಿಗಳು ಅವರವರ ಬಂಧು ಮಿತ್ರಾದಿ, ಪರಿಚಿತರಲ್ಲಿರುವ ಇಂತಹವರನ್ನು ಪ್ರತ್ಯೇಕ ಗುರುತಿಸಿ ಸಹಾಯ ಮಾಡುವತ್ತ ಗಮನ ಹರಿಸಬೇಕೆಂದು ವಿನಂತಿಸುತ್ತಿದ್ದೇನೆ. ಅವರು ದಾನಕ್ಕೆ ಕೈಚಾಚದವರಾದುದರಿಂದ ಅವರು ಇದ್ದಲ್ಲಿಗೆ ಗುಟ್ಟಾಗಿ ಕಳುಹಿಸಿ ಕೊಟ್ಟು ಅವರ ಅಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೂಡಾ ನೆನಪಿಸಬಯಸುತ್ತೇನೆ.
ನಮ್ಮಲ್ಲಿ ಶ್ರೀಮಂತರು ತುಂಬಾ ಇದ್ದಾರೆ. ಅಲ್ ಹಮ್ದುಲಿಲ್ಲಾಹ್, ಅದು ಅಲ್ಲಾಹು ತಾನಿಚ್ಛಿಸಿದವರಿಗೆ ಕೊಡುವ ಅನುಗ್ರಹ. ನಮ್ಮ ಶ್ರೀಮಂತರು ದೀನೀ ಕಾರ್ಯಗಳಿಗೆ ವೆಚ್ಚ ಮಾಡುವುದರಲ್ಲಿ ಬಹಳ ಮುಂದು. ಮಂಗಳೂರು ಕಡೆಯ ಹಣವಂತರು ಹೇರಳವಾಗಿ ಧಾರ್ಮಿಕ ಕಾರ್ಯಗಳಿಗೆ ವೆಚ್ಚ ಮಾಡುವ ಬಗ್ಗೆ ಕೇರಳದ ಉಲಮಾಗಳು ಪ್ರಶಂಸಿಸುತ್ತಿರುವುದನ್ನು ಕೇಳಿದ್ದೇನೆ. ಆದರೆ ಕೆಲವರಿಗೆ ಇಂತಹ ಮಾರ್ಗದರ್ಶನದ ಕೊರತೆ ಇದೆ. ಹಾಗಾಗಿ ಕೆಲವರ ದಾನ ಧರ್ಮ ಅಪಾತ್ರ ದಾನವಾಗುವುದೂ ಇದೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಬಡ, ಮಧ್ಯಮ ವರ್ಗದ ಮುಸ್ಲಿಮರು ಧಾರಾಳ ಇದ್ದಾರೆ. ಫ್ಲ್ಯಾಟ್ ನಲ್ಲಿ ವಾಸಮಾಡುವವರೆಲ್ಲ ಸ್ಥಿತಿವಂತರು ಎಂಬ ಭಾವನೆ ತಪ್ಪು. ನಿರ್ವಾಹವಿಲ್ಲದೆ ವಾಸ್ತವ್ಯ ಹೂಡಿ ಬಾಡಿಗೆ ತೆರಲು ಕಷ್ಟಪಡುತ್ತಿರುವ ಧಾರಾಳ ಫ್ಲ್ಯಾಟ್ ನಿವಾಸಿಗಳಿದ್ದಾರೆ. ಹಣ ಉಳ್ಳವರು ವರ್ಷದಲ್ಲಿ ಕುಟುಂಬದ ಡ್ರೆಸ್ ಗಾಗಿ ವಾರ್ಷಿಕ ವೆಚ್ಚ ಎಷ್ಟು ಮಾಡುತ್ತಾರೆ ಎಂದೊಮ್ಮೆ ಯೋಚಿಸಿ ನೋಡಿ. ಇದೇ ಪ್ರಕಾರ ಟೂರು, ಸಮಾರಂಭ, ಕಾರು, ಬಂಗಲೆ ಮುಂತಾದವುಗಳಿಗೆ ಮಾಡುವ ವೆಚ್ಚವೆಷ್ಟು ಎಂಬುದನ್ನು ಅವಲೋಕಿಸಬೇಕು. ಇದು ನನ್ನ ಆಕ್ಷೇಪಣೆ ಅಲ್ಲ, ಅವರವರು ದುಡಿದ ದುಡ್ಡನ್ನು ಅವರವರ ಇಷ್ಟದಂತೆ ವೆಚ್ಚ ಮಾಡುವುದು ಅವರವರ ಹಕ್ಕು ಹಾಗೂ ಸ್ವಾತಂತ್ರ್ಯ. ಫ್ಯಾಮಿಲಿ ಇಷ್ಟಪಡುವ ಡ್ರೆಸ್ ಮತ್ತು ಇತರ ಅನುಕೂಲಗಳನ್ನು ದುಡ್ಡಿದ್ದವರು ಮಾಡಿಕೊಡುವುದರಲ್ಲಿ ತಪ್ಪೇನೂ ಇಲ್ಲ. ಆದರೂ ಅಲ್ಲಾಹು ನೀಡಿದ ಅನುಗ್ರಹವನ್ನು ಬಳಸಿ ಸುಖವಾಗಿರುವಾಗ ಕಂಗಾಲಾಗಿ ಬದುಕು ನೂಕುತ್ತಿರುವ ಜನರ ಬಗ್ಗೆ ಕೂಡಾ ಗಮನ ಹರಿಸಲೇ ಬೇಕಾಗುತ್ತದೆ. ಅದು ಅಲ್ಲಾಹು ಕೊಟ್ಟ ಅನುಗ್ರಹಕ್ಕೆ ಕೃತಜ್ಞತೆ ಸಾಮಾಜಿಕ ಬದ್ಧತೆಯಾಗಿದೆ. ಅಲ್ಲಾಹು ತೌಫೀಖ್ ನೀಡಲಿ. ಆಮೀನ್.