![ಲೋಕಾಯುಕ್ತ ದಾಳಿ: ಶಾಸಕರ ಪುತ್ರನ ಕಚೇರಿ-ನಿವಾಸದಲ್ಲಿ ಕೋಟ್ಯಂತರ ರೂ.ಪತ್ತೆ; ಬಂಧನದ ಭೀತಿಯಿಂದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ! ಲೋಕಾಯುಕ್ತ ದಾಳಿ: ಶಾಸಕರ ಪುತ್ರನ ಕಚೇರಿ-ನಿವಾಸದಲ್ಲಿ ಕೋಟ್ಯಂತರ ರೂ.ಪತ್ತೆ; ಬಂಧನದ ಭೀತಿಯಿಂದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ!](https://blogger.googleusercontent.com/img/b/R29vZ2xl/AVvXsEgKKmcqXewmJmVRxY-2_SnxdIOfQd-KrHY3kjb1hbToKBe0Yru3nCSBz3oro8HqkZPnv9rM1iJPDGJYdliU3p451dd7hEFrfQHHO7GSSo999gauF6Qw4oXM5qPzh3gHxygtpDn043oPxJIQ_Z_7kerlN2hXCOKrv8Jcu6v6KxWUEp5HHDNxtAOayaWudg/w640-h318/BJP.jpg)
ಲೋಕಾಯುಕ್ತ ದಾಳಿ: ಶಾಸಕರ ಪುತ್ರನ ಕಚೇರಿ-ನಿವಾಸದಲ್ಲಿ ಕೋಟ್ಯಂತರ ರೂ.ಪತ್ತೆ; ಬಂಧನದ ಭೀತಿಯಿಂದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ!
ಬೆಂಗಳೂರು: ರಾಜ್ಯದಲ್ಲಿ ಕೋಲಾಹಲವೆಬ್ಬಿಸಿರುವ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರ ಕಚೇರಿ ಹಾಗು ನಿವಾಸದ ಮೇಲೆ ಲೋಕಾಯುಕ್ತ ದಾಳಿಯ ವೇಳೆ ಕೋಟ್ಯಂತರ ರೂ.ಪತ್ತೆಯಾದ ನಂತರ ಬಂಧನದ ಭೀತಿಯ ಹಿನ್ನೆಲೆಯಲ್ಲಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ BJP ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಕಚೇರಿ ಮತ್ತು ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿ ವೇಳೆ 8.12 ಕೋಟಿ ರೂ. ಲೆಕ್ಕಕ್ಕೆ ಸಿಗದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಇತಿಹಾಸದಲ್ಲಿ ಇಂಥ ದೊಡ್ಡ ಮೊತ್ತದ ನಗದನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಈಗಾಗಲೇ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಪ್ರಶಾಂತ್‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುವ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆಯಿಂದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಯ ಮಧ್ಯೆ ನಿನ್ನೆ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣದ ಎ1 (ಪ್ರಮುಖ) ಆರೋಪಿ ವಿರೂಪಾಕ್ಷಪ್ಪ ಅನಂತರ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.