ಅಭಿವೃದ್ಧಿ ಹೊಂದಿದ ಗುಜರಾತ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ !
ಅಹಮದಾಬಾದ್: ದೇಶದಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯ ಎಂದು ಬಿಂಬಿಸಲಾಗಿರುವ ಗುಜರಾತ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ.
ಕೊರೋನಾ ಅವಧಿಯ ನಂತರ ಗುಜರಾತ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಆಶ್ಚರ್ಯಕರ ರೀತಿಯಲ್ಲಿ ಏರಿಕೆಯಾಗಿದೆ. ಅದು ಗುಜರಾತಿನ ನಗರ ಪ್ರದೇಶಗಳಿಗಿಂತ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತಿದೆ.
ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರು ಗುಜರಾತಿನ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವಿಭಾವರಿಬೆನ್ ದವೆ, ಗುಜರಾತಿನ ಅಹಮದಾಬಾದ್ ಜಿಲ್ಲೆಯಲ್ಲಿ 2236 ಮಕ್ಕಳು ಹಾಗೂ ಬುಡಕಟ್ಟು ಜಿಲ್ಲೆಯಾದ ದಾಹೋಡ್‌ನಲ್ಲಿ 18,326 ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ ಎಂದು ತಿಳಿಸಿದರು. ದಾಹೋದ್‌ನಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಅಹಮದಾಬಾದ್‌ಗಿಂತ 8 ಪಟ್ಟು ಹೆಚ್ಚಾಗಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ದಾಹೋದ್‌ನಲ್ಲಿರುವ 18,326 ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು 6 ವರ್ಷದೊಳಗಿನವರಾಗಿದ್ದಾರೆ. ಅಹಮದಾಬಾದ್‌ನಲ್ಲಿ ಅಪೌಷ್ಟಿಕತೆಯಿಂದಾಗಿ 497 ಕಡಿಮೆ ತೂಕದ ಮಕ್ಕಳಿದ್ದರೆ, ದಾಹೋದ್‌ನಲ್ಲಿ 5,101 ಕಡಿಮೆ ತೂಕದ ಮಕ್ಕಳಿದ್ದಾರೆ ಎಂದು ವಿಭಾವರಿಬೆನ್ ದವೆ ಮಾಹಿತಿ ನೀಡಿದ್ದಾರೆ.
ಗುಜರಾತಿನ ಡ್ಯಾಂಗ್ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಲ್ಲಿ 575 ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ವರದಿಯಾಗಿದ್ದು, ನರ್ಮದಾ ಜಿಲ್ಲೆಯಲ್ಲಿ 2,443 ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ ಎಂದು ಗುಜರಾತ್ ಸಚಿವರು ತಿಳಿಸಿದ್ದಾರೆ.