ಚಿಕ್ಕಮಗಳೂರಿನಲ್ಲಿ ಜೀಪ್-ಕಾರು ಡಿಕ್ಕಿ; ಕಾರಿನಲ್ಲಿ ಸಿ.ಟಿ.ರವಿ ಭಾವಚಿತ್ರವಿರುವ ಕ್ಯಾಲೆಂಡರ್, ಮದ್ಯ, ಕತ್ತಿ ಪತ್ತೆ! ಆಕ್ರೋಶಿತರಿಂದ ಸಿಟಿ ರವಿ ವಿರುದ್ಧ ಘೋಷಣೆ
Monday, March 27, 2023
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ಬಳಿ ರವಿವಾರ ರಾತ್ರಿ ಅಪಘಾತಕೀಡಾಗಿದ್ದ ಕಾರಿನಲ್ಲಿ ಶಾಸಕ ಸಿ.ಟಿ.ರವಿ ಭಾವಚಿತ್ರದ ಕ್ಯಾಲೆಂಡರ್'ಗಳು, ಲಕ್ಷಾಂತರ ರೂ.ಮೌಲ್ಯದ ಮದ್ಯದ ಪ್ಯಾಕೆಟ್'ಗಳು, ಕತ್ತಿ (ಲಾಂಗ್) ಸಿಕ್ಕಿವೆ. ಈ ವೇಳೆ ಜಮಾಯಿಸಿದ ಸಿಟ್ಟಿಗೆದ್ದ ಕೆಲವು ಸ್ಥಳೀಯರು ಸಿಟಿ ರವಿ ವಿರುದ್ಧ ಒಟಿ ರವಿ ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ಬಳಿ ಜೀಪ್ಗೆ ಕಾರೊಂದು ಡಿಕ್ಕಿ ಹೊಡೆದಿದೆ. ಘಟನೆ ನಂತರ ಕಾರು ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಹಿಡಿದ ಸ್ಥಳೀಯರು, ಕಾರು ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಕಾರಿನಲ್ಲಿ ಲಕ್ಷಾಂತರ ಮೌಲ್ಯದ ಮದ್ಯದ ಬಾಟಲಿಗಳು ಹಾಗೂ ಸಿ.ಟಿ.ರವಿ ಭಾವ ಚಿತ್ರಗಳಿರುವ ನೂರಾರು ಕ್ಯಾಲೆಂಡರ್ಗಳು, ಕತ್ತಿ ಪತ್ತೆಯಾಗಿವೆ. ಈ ವೇಳೆ ಕಾರು ಚಾಲಕ ಮಂಜುನಾಥನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.