ಶಿಕಾರಿಪುರದಲ್ಲಿ ಹಿಂಸೆಗೆ ತಿರುಗಿದ ಒಳಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ; ಲಾಠಿ ಪ್ರಹಾರ: ಹಲವರಿಗೆ ಗಾಯ; ನಿಷೇಧಾಜ್ಞೆ ಜಾರಿ
ಶಿವಮೊಗ್ಗ: ರಾಜ್ಯ ಸರ್ಕಾರ ಕಳೆದ ಎರಡು ದಿನಗಳ ಹಿಂದೆ ಪ್ರಕಟಿಸಿರುವ ಒಳ ಮೀಸಲಾತಿ ಕಡಿತ ವಿರೋಧಿಸಿ ಸೋಮವಾರ ಶಿಕಾರಿಪುರದ ಮಾಜಿ ಸಿಎಂ ಯಡಿಯೂರಪ್ಪರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದ್ದು, ಮನೆಯ ಗಾಜುಗಳನ್ನು ಪುಡಿಗೈಯ್ಯಲಾಗಿದೆ. ಈ ವೇಳೆ ಪೊಲೀಸರು ಸೇರಿದಂತೆ ಹಲವು ಮಂದಿಗೆ ಗಾಯಗಳಾಗಿದೆ. ಈ ವೇಳೆ ಪೊಲೀಸರು ಲಾಠಿ ಬೀಸಿ ಉದ್ರಿಕ್ತರನ್ನು ಚದುರಿಸುವ ಯತ್ನ ನಡೆಸಿದ್ದಾರೆ.
ಒಳ ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ವಿರೋಧಿಸಿ ಶಿಕಾರಿಪುರ ಪಟ್ಟಣದಲ್ಲಿ ಬಂಜಾರ, ಕೊರಚ, ಕೊರಮ, ಭೋವಿ ಸಮುದಾಯದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗಿದೆ.
ಶಿವಮೊಗ್ಗದ ಶಿಕಾರಿಪುರದ ಮಿನಿ ವಿಧಾನಸೌಧ, ಬಸ್ ನಿಲ್ದಾಣದ ಬಳಿ ಬಂಜಾರ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ದು, BJP ಸರಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.ಇದೇ ವೇಳೆ ಪಟ್ಟಣದಲ್ಲಿ ಬಿಜೆಪಿ, ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಬಿಜೆಪಿ ನಾಯಕರ ಬ್ಯಾನರ್, ಫ್ಲೆಕ್ಸ್‌ಗಳನ್ನು ಆಕ್ರೋಶಿತರು ಕಿತ್ತೊಗೆದಿದ್ದಾರೆ. ಜೊತೆಗೆ ಅವರ ಭಾವಚಿತ್ರಕ್ಕೆ ಬೆಂಕಿಹಚ್ಚಿ, ಟೈರ್, ಸೀರೆಗಳಿಗೆ ಬೆಂಕಿ ಹಚ್ಚಿದ ಆಕ್ರೋಶಿತರು ಸರಕಾರ ಪ್ರಕಟಿಸಿರುವ ಮೀಸಲಾತಿಯನ್ನು ಖಂಡಿಸಿದರು.
ಸದಾಶಿವ ಆಯೋಗದ ವರದಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಲಿದ್ದು, ಹೀಗಾಗಿ ಈ ವರದಿ ಜಾರಿಗೊಳಿಸದಂತೆ ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪ್ರತಿಭಟನೆ ತೀವ್ರತೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಶಿಕಾರಿಪುರದಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.