ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ವಿರೋಧಿಸಿ ರಾಜ್ಘಾಟ್ನಲ್ಲಿ ಸತ್ಯಾಗ್ರಹ ಆರಂಭಿಸಿದ ಕಾಂಗ್ರೆಸ್
ನವದೆಹಲಿ: ಮೋದಿ ಹೆಸರಿನ ಬಗ್ಗೆ ಟೀಕೆ ಮಾಡಿದ್ದಕ್ಕೆ ಜೈಲು ಶಿಕ್ಷೆಗೊಳಗಾಗಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ವಿರೋಧಿಸಿ ರಾಜ್ಘಾಟ್ನಲ್ಲಿ ಕಾಂಗ್ರೆಸ್ ನಾಯಕರು ರವಿವಾರ ಸತ್ಯಾಗ್ರಹ ಆರಂಭಿಸಿದ್ದಾರೆ.
ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದು, ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಡೆಸುತ್ತಿರುವ ಸತ್ಯಾಗ್ರಹಕ್ಕೆ ಈಗಾಗಲೇ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದು, ಸೆಕ್ಷನ್ 144 ಜಾರಿಗೊಳಿಸಿದ್ದರೂ, ಪಟ್ಟು ಬಿಡದ ಕಾಂಗ್ರೆಸ್ ನಾಯಕರು ಸತ್ಯಾಗ್ರಹ ನಡೆಸುತ್ತಿದ್ದಾರೆ.
ರಾಜ್ಘಾಟ್ನಲ್ಲಿ ಸತ್ಯಾಗ್ರಹ ನಡೆಯುತ್ತಿದ್ದು, ಬಿಜೆಪಿ ರಾಹುಲ್ ಗಾಂಧಿಗೆ ಮಾತನಾಡಲು ಬಿಡುತ್ತಿಲ್ಲ. ರಾಹುಲ್ ಗಾಂಧಿ ಮಾತನಾಡುತ್ತಿರುವುದು ರಾಷ್ಟ್ರಕ್ಕಾಗಿ ಮತ್ತು ಸಾರ್ವಜನಿಕರ ಹಕ್ಕಿಗಾಗಿ, ಈ ಬಗ್ಗೆ ಅವರ ಹೋರಾಟ ನಿಲ್ಲಲ್ಲ. ಇಂದು ನಾವು ಗಾಂಧಿ ಸ್ಮಾರಕಕ್ಕೆ ಹೋಗುತ್ತೇವೆ ಹಾಗು ಅಲ್ಲಿ ಸತ್ಯಾಗ್ರಹ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.