5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗೆ ಅನುಮತಿ: ವಿದ್ಯಾರ್ಥಿಗಳಿಗೆ ಖುಷಿ ವಿಷಯವನ್ನೂ ನೀಡಿದ ಹೈಕೋರ್ಟ್!
ಬೆಂಗಳೂರು: ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯನ್ನು ನಡೆಸುವುದಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ಗ್ರೀನ್ ಸಿಗ್ನಲ್ ದೊರಕಿದ್ದು, ಸರ್ಕಾರದ ತೀರ್ಮಾನದಂತೆ ವಿದ್ಯಾರ್ಥಿಗಳಿಗೆ ಮಾ.27ರಿಂದ ಬೋರ್ಡ್ ಪರೀಕ್ಷೆ ನಡೆಯಲಿದೆ.
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ. 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಕಾಯ್ದೆಯಡಿ ನಿರ್ಬಂಧವಿಲ್ಲ ಎಂದಿರುವ ಹೈಕೋರ್ಟ್ ವಿಭಾಗೀಯ ಪೀಠವು ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.
ಮಾರ್ಚ್ 27ರಿಂದ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ವಿಭಾಗೀಯ ಪೀಠ ಸೂಚನೆ ನೀಡಿದ್ದು, ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಉಲ್ಲೇಖಿಸಿರುವುದನ್ನು ಬಿಟ್ಟು ಬೇರೆ ಪ್ರಶ್ನೆಗಳನ್ನು ಕೇಳುವಂತಿಲ್ಲ, ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವಂತಿಲ್ಲ ಎಂದು ಪೀಠ ಸರಕಾರಕ್ಕೆ ನಿರ್ದೇಶನ ನೀಡಿದೆ. ಇದರ ಜೊತೆಗೆ ಪರೀಕ್ಷೆಯ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಹಾಗು ಫಲಿತಾಂಶವನ್ನು ಶಾಲೆಗೆ ಮಾತ್ರವೇ ತಲುಪಿಸಬೇಕು ಎಂದೂ ಸೂಚಿಸಿದೆ.