ಮಂಗಳೂರು ವಿವಿ ಘಟಿಕೋತ್ಸವ: ಯು.ಕೆ.ಮೋನು, ರಾಮಕೃಷ್ಣ ಆಚಾರ್, ಎಂ.ಬಿ.ಪುರಾಣಿಕ್'ರಿಗೆ ಗೌರವ ಡಾಕ್ಟರೇಟ್ ಪ್ರದಾನ; 115 ಮಂದಿಗೆ ಪಿಎಚ್‌ಡಿ ಪದವಿ ಪ್ರದಾನ
ಮಂಗಳೂರು: ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು (ಶಿಕ್ಷಣ ಮತ್ತು ಸಮಾಜ ಸೇವೆ ), ಕುಂದಾಪುರ ಗಂಗೊಳ್ಳಿಯ ಜಿ.ರಾಮಕೃಷ್ಣ ಆಚಾರ್(ಕೃಷಿ, ಶಿಕ್ಷಣ ಹಾಗು ಸಮಾಜ ಸೇವೆ) ಹಾಗು ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ (ಶಿಕ್ಷಣ ಮತ್ತು ಸಮಾಜ ಸೇವೆ) ಅವರಿಗೆ ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ, ಗೌರವಿಸಿದರು.
ಇದೇ ವೇಳೆ 115 ಮಂದಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗಿದ್ದು, ಒಬ್ಬರಿಗೆ ಡಾಕ್ಟರ್ ಆಫ್ ಸಾಯನ್ಸ್ (ಪ್ರಾಣಿಶಾಸ್ತ್ರ), 115 ಮಂದಿಗೆ ಡಾಕ್ಟರ್ ಆಫ್ ಫಿಲಾಸಪಿ ಪದವಿ (ಪಿಎಚ್‌ಡಿ) ನೀಡಲಾಗುತ್ತಿದ್ದು, ಈ ಪೈಕಿ ಕಲಾ ವಿಭಾಗದಲ್ಲಿ 29, ವಿಜ್ಞಾನ 61, ವಾಣಿಜ್ಯ 22, ಶಿಕ್ಷಣ ವಿಭಾಗದಲ್ಲಿ 3 ಮಂದಿ ಪಿಎಚ್ ಡಿ ಪದವಿ ಪಡೆಡಿದ್ದಾರೆ. ಇವರಲ್ಲಿ 60 ಮಂದಿ ಪುರುಷರು ಹಾಗೂ 55 ಮಂದಿ ಮಹಿಳೆಯರು ಸೇರಿದ್ದು, ಜೊತೆಗೆ ವಿದೇಶದ 7 ವಿದ್ಯಾರ್ಥಿಗಳು ಈ ಬಾರಿ ಪಿಎಚ್‌ಡಿ ಪದವಿ ವಾರ್ಷಿಕ ಘಟಿಕೋತ್ಸವದಲ್ಲಿ ನೀಡಲಾಯಿತು.
ಕಾರ್ಯಕ್ರಮದಲ್ಲಿ 155 ಮಂದಿಗೆ ಚಿನ್ನದ ಪದಕ, 57 ನಗದು ಬಹುಮಾನ, ವಿವಿಧ ಕೋರ್ಸುಗಳ ಒಟ್ಟು 199 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪೈಕಿ ಪ್ರಥಮ ರ‍್ಯಾಂಕ್ ಪಡೆದ 71 ಮಂದಿಗೆ (ಸ್ನಾತಕೋತ್ತರ ಪದವಿ-53 ಮತ್ತು ಪದವಿ-18) ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಲೆ-17, ವಿಜ್ಞಾನ ಮತ್ತು ತಂತ್ರಜ್ಞಾನ-41, ವಾಣಿಜ್ಯ 9, ಶಿಕ್ಷಣದಲ್ಲಿ 4 ಮಂದಿಗೆ ರ‍್ಯಾಂಕ್ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್‌ನ ನಿರ್ದೇಶಕ ಪ್ರೊ.ಎಸ್.ಸಿ.ಶರ್ಮ ಭಾಗವಹಿಸಿ ಮಾತನಾಡಿದರು. ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಕಿಶೋರ್ ಕುಮಾರ್, ಪ್ರೊ.ರಾಜು ಕೃಷ್ಣ ಚಲಣ್ಣವರ (ಕುಲಸಚಿವ ಪರೀಕ್ಷಾಂಗ) ವಿವಿಧ ವಿಭಾಗದ ಮುಖ್ಯಸ್ಥರು, ಸಿಂಡಿಕೇಟ್ ಸದಸ್ಯರು ಹಾಜರಿದ್ದರು.