ಪ್ರೇಮಿಗಳ ದಿನದಂದು ಪಾರ್ಟಿ ನಡೆಸಿ ಪತ್ನಿಯ ಕತ್ತು ಸೀಳಿ ಕೊಂದ ಪತಿ; ಕಾರಣ ಇಲ್ಲಿದೆ....

ಹರಿಯಾಣ: ವ್ಯಾಲೆಂಟೆನ್ಸ್‌ ಡೇ ಪಾರ್ಟಿ ಬಳಿಕ ಪತಿಯೇ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಹರಿಯಾಣದ ಬಹದ್ದೂರ್‌ಗಢದಲ್ಲಿ ನಡೆದಿದೆ.

ಹಿಸಾರ್ ನಿವಾಸಿ ಅನ್ಶುಲ್ ಮತ್ತು ಹಂಸಿಯ ಮಹಾಕ್ ಇಬ್ಬರೂ ಕಳೆದ ವರ್ಷ ಸೆಪ್ಟೆಂಬರ್ 25 ರಂದು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

ಹತ್ಯೆಯಾದ ಮಹಿಳೆಯನ್ನು ಮಹಾಕ್ ಎಂದು ಗುರುತಿಸಲಾಗಿದೆ. ಆಕೆ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಹತ್ಯೆ ಆರೋಪಿಯನ್ನು ಅನ್ಶುಲ್ ಧವನ್ ಎಂದು ಗುರುತಿಸಲಾಗಿದೆ. ಈತ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ. ದಂಪತಿ ಪ್ರೇಮಿಗಳ ದಿನವನ್ನು ಸಂಭ್ರಮದಿಂದಲೇ ಆಚರಿಸಿದ್ದರು. ನಂತರ ಧವನ್‌ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ್ದ. ಬಳಿಕ ದರೋಡೆಕೋರರು ತಮ್ಮ ಮೇಲೆ ದಾಳಿ ಮಾಡಿ, ಪತ್ನಿಯನ್ನು ಹತ್ಯೆ ಮಾಡಿದ್ದಾರೆ ಎಂದು ಸುಳ್ಳು ಕತೆ ಕಟ್ಟಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ. ಕೇವಲ 18 ಗಂಟೆಗಳಲ್ಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ. 

ಭಾನುವಾರ (ಫೆ.15) ರಾತ್ರಿ 11:00 ಗಂಟೆಯ ಸುಮಾರಿಗೆ ಅನ್ಶುಲ್ ಪೊಲೀಸರಿಗೆ ಕರೆ ಮಾಡಿ, ಅಪರಿಚಿತ ದಾಳಿಕೋರರು ದರೋಡೆಗೆ ಯತ್ನಿಸಿದ್ದಾರೆ. ತನ್ನ ಪತ್ನಿಯ ಕತ್ತು ಸೀಳಿದ್ದಾರೆ ಎಂದು ಹೇಳಿದ್ದ. ಈ ಪ್ರಕರಣದ ತನಿಖೆ ಪ್ರಾರಂಭವಾದ ನಂತರ ಅನ್ಶುಲ್ ಹೇಳಿಕೆಯಲ್ಲಿನ ವ್ಯತ್ಯಾಸಗಳನ್ನು ಗಮನಿಸಿದ್ದರು. ಅನ್ಶುಲ್ ತನ್ನ ಕಥೆಯನ್ನು ಬದಲಾಯಿಸುತ್ತಲೇ ಇದ್ದ. ದಾಳಿಕೋರರನ್ನು ವಿವರಿಸಲು ಸಹ ಆತನಿಗೆ ಸಾಧ್ಯವಾಗಲಿಲ್ಲ, ಇದು ಪೊಲೀಸರಿಗೆ ಇನ್ನಷ್ಟು ಅನುಮಾನ ಮೂಡಿಸಿತ್ತು.

ಆತನನ್ನು ವಶಕ್ಕೆ ಪಡೆದು ತ್ರೀವ್ರ ವಿಚಾರಣೆಗೆ ಒಳಪಡಿಸಿದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಮಹಾಕ್‌ ಬಗ್ಗೆ ಅವನಿಗೆ ಬಹಳ ಹಿಂದಿನಿಂದಲೂ ಅನುಮಾನವಿತ್ತು. ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅನುಮಾನವು ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಮಹಾಕ್‌ನ ತಂದೆ ಕೃಷ್ಣ ಕಥುರಿಯಾ ಮಾತನಾಡಿ, ತನ್ನ ಅಳಿಯನನ್ನು ಮೊದಲಿನಿಂದಲೂ ಅನುಮಾನಿಸುತ್ತಿದ್ದ. ಕೊಲೆಯ ಸಮಯದಲ್ಲಿ ಅನ್ಶುಲ್ ಯಾವುದೇ ಬೆರಳಚ್ಚು ಬಿಡದಂತೆ ಕೈಗವಸು ಧರಿಸಿದ್ದ. ಮೊದಲು ಕತ್ತು ಸೀಳಿ ನಂತರ ಕತ್ತರಿ ಬಳಸಿ ಆಕೆಯ ಕತ್ತು ಸೀಳಿದ್ದಾನೆ ಎಂದು ತಿಳಿಸಿದ್ದಾರೆ.