ನಿಶ್ಚಿತಾವಧಿ ಕರಾರು (Fixed-Term Contract) ಮತ್ತು ಅನಿಶ್ಚಿತಾವಧಿ ಕರಾರು (Indefinite Term Contract)-ಸೌದಿ ಕಾರ್ಮಿಕ ಕಾನೂನಿನ ಒಂದು ಅವಲೋಕನ….

ಸೌದಿಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಕನ್ನಡಿಗರು ಸೇರಿದಂತೆ ಹಲವರು ಈ ವಿಷಯದ ಬಗ್ಗೆ ಕೇಳುತ್ತಿರುವ ಹಿನ್ನೆಲೆಯಲ್ಲಿ ಈ ಸಂಕ್ಷಿಪ್ತ ಮಾಹಿತಿ. ಕನ್ನಡದಲ್ಲಿ ಕಾನೂನಿಗೆ ಸಂಬಂಧಪಟ್ಟಂತೆ ಒಂದು ಗಾದೆ ಇದೆ- “ಕರಾರು ಮಾಡಿ ತಕರಾರು ಮಾಡಿ ಕೊಂಡಂತೆ”. 

ಹೀಗಾಗದಿರಲಿ ಎಂಬ ಆಶಯದಿಂದ-ವಿಶೇಷವಾಗಿ ಕನ್ನಡಿಗರ ಹಿತದೃಷ್ಟಿಯಿಂದ-ನಾನಿದನ್ನು ಬರೆಯುತ್ತಿದ್ದೇನೆ. 

ಕೆಲವರು ನಿಶ್ಚಿತಾವಧಿ ಕರಾರು ಸ್ವಯಂಚಾಲಿತವಾಗಿ ಅನಿಶ್ಚಿತಾವಧಿ ಕರಾರು ಆಗುತ್ತದೆ, ಯಾವಾಗ ಬೇಕಾದರೂ ರಾಜೀನಾಮೆ ನೀಡಿ ಬೇರೆ ಕಂಪೆನಿಗೆ ಹೋಗಬಹುದು ಎಂದು ಭಾವಿಸುತ್ತಾರೆ. ಈ ತಪ್ಪು ಕಲ್ಪನೆ ಕೆಲವರನ್ನು ಕಾನೂನಿನ ಸಮಸ್ಯೆಗೆ ತಳ್ಳಿದೆ.

ಏನಿದು ನಿಶ್ಚಿತಾವಧಿ ಕರಾರು ಅಥವಾ ಒಪ್ಪಂದ?

ಇದಕ್ಕೆ ಸ್ಪಷ್ಟವಾದ ಆರಂಭ ಮತ್ತು ಅಂತ್ಯದ ದಿನಾಂಕ ಇರುತ್ತದೆ. ಇಂಥ ಕರಾರು ಅವಧಿ ಮುಗಿದಾಗ ಸಾಮಾನ್ಯವಾಗಿ ಸ್ವಯಂ ಅಂತ್ಯಗೊಳ್ಳುತ್ತದೆ (ಒಂದುವೇಳೆ, ನವೀಕರಣ/Renewal ಮಾಡದಿದ್ದರೆ).

ಒಪ್ಪಂದ ಅವಧಿ ಮುಗಿಯುವ ಮೊದಲು ಯಾವುದೇ ಸಮಂಜಸ ಕಾರಣವಿಲ್ಲದೆ ಉದ್ಯೋಗಿ (Employee) ಅಥವಾ ಉದ್ಯೋಗದಾತ (Employer) ಒಪ್ಪಂದವನ್ನು ರದ್ದು ಮಾಡಿದರೆ, ಸೌದಿ ಕಾರ್ಮಿಕ ಕಾನೂನಿನ ಕಲಂ 77ರನ್ವಯ ಪರಿಹಾರ (compensation) ಅನ್ವಯಿಸುತ್ತದೆ. 

ಉದ್ಯೋಗಿ/ಉದ್ಯೋಗದಾತ ಉಳಿದ ಅವಧಿಯ ಸಂಬಳವನ್ನು ಪರಿಹಾರವಾಗಿ ನೀಡಬೇಕಾಗಬಹುದು.ಇದು ಸಿಮ್ಮೆಟ್ರಿಕ್ (Symmetric Rule) ನಿಯಮವಾಗಿದ್ದು, ಉದ್ಯೋಗಿಗಳು ಮತ್ತು ಉದ್ಯೋಗದಾತರಿಬ್ಬರಿಗೂ ಅನ್ವಯವಾಗುತ್ತದೆ. ಆದರೆ, ನನ್ನ ಗಮನಕ್ಕೆಬಂದ ಹೆಚ್ಚಿನ ಪ್ರಕರಣಗಳು ಉದ್ಯೋಗಿಗಳಿಗೆ ಬಾಧಕವಾದದ್ದಾಗಿದೆ. 

ಇನ್ನು ಅನಿಶ್ಚಿತಾವಧಿ ಕರಾರು ಅಥವಾ ಒಪ್ಪಂದ ಎಂದರೇನು?

ಈ ರೀತಿಯ ಒಪ್ಪಂದಕ್ಕೆ ಅಂತ್ಯದ ದಿನಾಂಕ ಇರುವುದಿಲ್ಲ. ಇದರ ಹೆಸರೇ ಸೂಚಿಸುವಂತೆ ಇದು ಅನಿರ್ಧಿಷ್ಟಾವಧಿ ಒಪ್ಪಂದವಾಗಿರುತ್ತದೆ. ಕಾನೂನುಬದ್ಧವಾಗಿ ಯಾರಾದರೊಬ್ಬ(ಉದ್ಯೋಗಿ ಅಥವಾ ಉದ್ಯೋಗದಾತ) ಇದನ್ನು ರದ್ದುಪಡಿಸುವವರೆಗೆ ಇದು ಮುಂದುವರೆಯುತ್ತದೆ ಮತ್ತು ಸ್ವಯಂಆಗಿ ಊರ್ಜಿತದಲ್ಲಿರುತ್ತದೆ. 

ಇಲ್ಲಿ ಉದ್ಯೋಗಿ ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು, ಆದರೆ ಸಾಮಾನ್ಯವಾಗಿ 30 ದಿನಗಳ ನೋಟಿಸ್ ನೀಡಬೇಕು. ಕಾನೂನುಬದ್ಧವಾಗಿ ರಾಜೀನಾಮೆ ನೀಡಿದರೆ ಪರಿಹಾರ ನೀಡಬೇಕಾಗುವುದಿಲ್ಲ.

ಇನ್ನು ಯಾವ ಸಂದರ್ಭಗಳಲ್ಲಿ ನಿಶ್ಚಿತಾವಧಿ ಕರಾರು, ಅನಿಶ್ಚಿತಾವಧಿ ಕರಾರು ಆಗಬಹುದು?

(ಕಲಂ 55ರ ಪ್ರಕಾರ)

ನಿಶ್ಚಿತಾವಧಿ ಕರಾರು ಪುನಃ ಪುನಃ ನವೀಕರಿಸಲ್ಪಟ್ಟರೆ ಮತ್ತು ಒಟ್ಟು ಸೇವಾವಧಿ 4 ವರ್ಷಗಳನ್ನು ಮೀರಿದರೆ ಹಾಗೂ ಒಪ್ಪಂದ ಅವಧಿ ಮುಗಿದ ನಂತರ ಹೊಸ ಒಪ್ಪಂದವಿಲ್ಲದೆ ಕೆಲಸ ಮುಂದುವರಿಸಿದರೆ, ಕಾನೂನಿನ ಪ್ರಕಾರ ಈ ಕರಾರನ್ನು ಅನಿಶ್ಚಿತಾವಧಿ ಕರಾರು ಎಂದು ಪರಿಗಣಿಸಲಾಗುತ್ತದೆ. 

ಇಲ್ಲಿ ಗಮನಿಸಬೇಕಾದ ಅತಿಮುಖ್ಯಅಂಶವೆಂದರೆ, ಇತ್ತೀಚಿನ (latest) ಒಪ್ಪಂದದಲ್ಲಿ ಇನ್ನೂ  “ನಿಶ್ಚಿತಾವಧಿ” (Fixed-Term Contract) ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೆ, ವಿವಾದ ಉಂಟಾದಾಗ ನ್ಯಾಯಾಲಯ (ಮಹಕಮ) ಅದನ್ನು “ನಿಶ್ಚಿತಾವಧಿ ಕರಾರು” ಆಗಿಯೇ ಪರಿಗಣಿಸಬಹುದು. ಈ ಸಂದರ್ಭದಲ್ಲೇ ಕೆಲವರು ಕಲಂ 77ರಡಿಯಲ್ಲಿ ಪರಿಹಾರ ಬೇಡಿಕೆಗಳನ್ನು ಎದುರಿಸುತ್ತಾರೆ. 

ಈ ಹಿನ್ನೆಲೆಯಲ್ಲಿ, ಕಂಪೆನಿಗಳಲ್ಲಿ ಕೆಲಸಮಾಡುವ, ಅದರಲ್ಲೂ ಹೆಚ್ಚಿನ ಸಂಬಳ ಪಡೆಯುವವರು ಲಕ್ಷಗಟ್ಟಲೆ ರಿಯಾಲ್ ಗಳನ್ನು ತಮ್ಮ ಕಂಪೆನಿಗಳಿಗೆ ಕೊಡಬೇಕಾಗಿ ಬರಬಹುದು. ಅಂದರೆ, ಲಕ್ಷಗಟ್ಟಲೆ ಹಣವನ್ನು ಕಳಕೊಳ್ಳುವ ಪರಿಸ್ಥಿತಿ ಉದ್ಭವಿಸ ಬಹುದು!. 

ಪ್ರಮುಖ ಸೂಚನೆ:

ಇಲ್ಲಿ “ನಿಶ್ಚಿತಾವಧಿ ಕರಾರು”, “ಅನಿಶ್ಚಿತಾವಧಿ ಕರಾರು” ಎಂದು ಪರಿಗಣಿಸಿದರೂ, ಅದು ತಕ್ಷಣ ರಾಜೀನಾಮೆ ನೀಡಿ ಬೇರೆ ಉದ್ಯೋಗಕ್ಕೆ ಹೋಗಲು ಸಂಪೂರ್ಣ ಸ್ವಾತಂತ್ರ್ಯ ನೀಡುವುದಿಲ್ಲ. ಅದು ಪರಸ್ಪರ ಒಪ್ಪಂದದ ಮೂಲಕ (ಪ್ರಸ್ತುತ ಕಂಪೆನಿಯ ಜತೆ ಪರಸ್ಪರ Good faith ಮಾತುಕತೆ ನಡೆಸಿ, ಹೆಚ್ಚಿನ ಸಂಬಳ ಪ್ಯಾಕೇಜ್ ಗಾಗಿ ಬೇರೆ ಕಂಪೆನಿಗಳಿಗೆ Transfer ಮಾಡಿಕೊಂಡ ಹಲವು ಉದಾಹರಣೆಗಳಿವೆ) ಅಥವಾ ಕಲಂ 81 ಅಡಿಯಲ್ಲಿ ಸಮಂಜಸ ಕಾರಣ ಇದ್ದಲ್ಲಿ ಮಾತ್ರ ಸುರಕ್ಷಿತ. 

👉ಯಾವುದೇ ಕ್ರಮ ಕೈಗೊಳ್ಳುವ ಮೊದಲು ನಿಮ್ಮ ಕರಾರು ಮತ್ತು ಅನ್ವಯಿಸುವ ಕಾನೂನನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳುವುದು ಅತ್ಯಂತ Safe.