ಬೆಂಗಳೂರು: ₹200 ಕೊಡಲಿಲ್ಲವೆಂದು ಮಂಗಳಮುಖಿಯ ಬರ್ಬರ ಹತ್ಯೆ; ಆರೋಪಿ ಬಂಧನ

ಬೆಂಗಳೂರು: ₹200 ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಂಗಳಮುಖಿಯೊಬ್ಬರನ್ನು ಚಾಕುವಿನಿಂದ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತರನ್ನು ದೇವಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಎಂಬಾತನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಘಟನೆ ನಡೆದಿದ್ದು, ಚಾಕುವಿನಿಂದ ದೇವಿಯ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಘಟನೆಯ ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ರಾಮಮೂರ್ತಿನಗರ ನಿವಾಸಿಯಾಗಿರುವ ಆರೋಪಿ ಗೌತಮ್‌ ದರೋಡೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ದರೋಡೆ ಉದ್ದೇಶದಿಂದ ಬಂದಿದ್ದ ವೇಳೆ ದೇವಿ ₹200 ನೀಡಲು ನಿರಾಕರಿಸಿದ್ದರಿಂದ ಕೋಪಗೊಂಡ ಆರೋಪಿ ಚಾಕುವಿನಿಂದ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.