ಉಡುಪಿ: ‘ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ. ಆತ ಬಂದು ನೀಟ್ ವಿರುದ್ಧ ಹೋರಾಟ ಅಂತೆ’ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಸಿ.ಟಿ. ರವಿ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಸಿ.ಟಿ. ರವಿ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಹಲವು ಮಂದಿ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿದ್ದು, ಈ ಮಧ್ಯೆ ಲೇಖಕ ಮುಷ್ತಾಕ್ ಹೆನ್ನಾಬೈಲ್ ಅವರು ಸಿ ಟಿ ರವಿಗೆ ನೇರ ಸವಾಲು ಹಾಕಿದ್ದಾರೆ.
ಮುಷ್ತಾಕ್ ಹೆನ್ನಾಬೈಲ್ ಅವರ ಫೇಸ್ ಬುಕ್ ವಾಲ್ ನಲ್ಲಿ ಈ ರೀತಿ ಬರೆಯಲಾಗಿದೆ....
'ನೀವು ಇಷ್ಟಪಡುವ ಯಾವುದೇ ರಾಜಕೀಯ ಸಾಮಾಜಿಕ ಧಾರ್ಮಿಕ ವಿಚಾರದ ಮೇಲೆ ನಿಮ್ಮೊಂದಿಗೆ ಚರ್ಚೆಗೆ ಸಿದ್ದನಿದ್ದೇನೆ. ನೀವು ಕರೆದ ಜಾಗಕ್ಕೆ ಬರುವೆ. ನಿಮ್ಮ ಮಾತು ಕೇಳುವ ಮತ್ತು ಆಯ್ದುಕೊಳ್ಳುವ ಯಾವುದೇ ಚಾನೆಲ್ ಆದರೂ ಆದೀತು. ಸಬ್ಜೆಕ್ಟ್ ಕೂಡ ನೀವೇ ಆಯ್ದುಕೊಳ್ಳಿ. ಆಂಕರ್ ಕೂಡ ನಿಮ್ಮ ಪರವಾಗಿರುವವವರನ್ನೇ ಇರಿಸಿಕೊಳ್ಳಿ. ನಿಮ್ಮ ಸಬ್ಜೆಕ್ಟ್ ನನಗೆ ಪೂರ್ವದಲ್ಲಿ ಹೇಳುವ ಅವಶ್ಯಕತೆಯೂ ಇಲ್ಲ. ನೇರ ಪ್ರಸಾರವೇ ಇರಲಿ. ಸಹಾಯಕ್ಕೆ ನೀವು ಎಷ್ಟು ಜನರನ್ನು ಬೇಕಾದರೂ ಕರೆದುಕೊಂಡು ಬನ್ನಿ. ನಾನೊಬ್ಬನೇ ಬರುತ್ತೇನೆ. ನೋಡುವ ಯಾರ ಎದೆಯಲ್ಲಿ ಎಷ್ಟು ಅಕ್ಷರ ಇದೆ ಎಂಬುದನ್ನು. ಈ ಸವಾಲು ಸ್ವೀಕರಿಸಿ..
ನಾನು ನಿಮ್ಮಂತೆ ಯಾವುದೇ ಧರ್ಮ/ ಸಮುದಾಯದ ವಿರೋಧಿಯಲ್ಲ. ನನ್ನ ಈ ಸವಾಲು ಯಾವುದೇ ಸಮುದಾಯಕ್ಕಲ್ಲ. ವಿದ್ಯಾರ್ಥಿ ಮತ್ತು ರೋಗಿಯನ್ನೂ ಬಿಡದೆ ಧರ್ಮರಾಜಕಾರಣ ಮಾಡುವ ನಿಮಗೆ ಮಾತ್ರ. ನಾನು ಹಿಂದುಗಳನ್ನು ಪ್ರೀತಿಸುವ ಮತ್ತು ಪರವಾಗಿ ಪಕ್ಷಪಾತಿಯಾಗಿ ಮಾತನಾಡುವ ಒಬ್ಬ ಮುಸಲ್ಮಾನ. ಪುರಾಣಪ್ರಿಯ. ಇದು ನನ್ನ ಬಗ್ಗೆ ತಿಳಿದವರಿಗೆಲ್ಲ ಗೊತ್ತಿದೆ. ನನ್ನಲ್ಲಿ ವಿದ್ಯೆಯೂ ಅಷ್ಟಿಲ್ಲ. ಎಸ್ ಎಸ್ ಎಲ್ ಸಿ ಯಲ್ಲಿ ಫೇಲಾಗಿ ನಂತರ ಜಸ್ಟ್ ಮಾರ್ಕ್ಸ್ ಗಳನ್ನು ಮಾತ್ರ ಪಡೆದುಕೊಂಡು ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಷ್ಟಪಟ್ಟು ಪದವಿ ಪಡೆದವ. ಹೀಗಿದ್ದರೂ ನಾನು ನಿಮಗೆ ಸಾಕು. ನೋಡುವ ಜನ ಎದೆಗಳ ಅಕ್ಷರ ಲೆಕ್ಕ ಹಾಕಲಿ,,
ಚರ್ಚೆಗೆ ನಾನು ಕರೆದಲ್ಲಿಗೆ ಬರುವುದಾದರೆ, ನೀವು ಇಷ್ಟಪಡುವ ಆಹಾರದ ಜೊತೆಗೆ ಯಥೋಚಿತ ಸತ್ಕಾರ ನೀಡಿ ಸನ್ಮಾನಿಸುವುದು ನನ್ನ ಜವಾಬ್ದಾರಿ. ನಿಮ್ಮ ಮನೆಗೆ ಮಾತ್ರ ನಾನು ಬರುವುದಿಲ್ಲ. ಯಾಕೆಂದರೆ ನಿಮ್ಮ ಸಂಸ್ಕಾರದ ಮೇಲೆ ನನಗೆ ಸಂಶಯವಿದೆ. ನೋಡಿ, ಆಲೋಚಿಸಿ, ಸಾಬಿ ಹಾಕಿದ ಸವಾಲು ಸ್ವೀಕರಿಸದಿದ್ದರೆ ಜನ ಛಿ ಥೂ ಅಂತಾರೆ..
✍🏾 ಮುಷ್ತಾಕ್ ಹೆನ್ನಾಬೈಲ್
