'ತೆರೆಮರೆಯ ಹೀರೋ'ನೊಂದಿಗೆ ಇಕ್ರಮ್ ಮೊಹಮ್ಮದ್ ಮೂಳೂರು ನಡೆಸಿದ ವಿಶೇಷ ಸಂದರ್ಶನ
ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ (Amir Khan) ಕೆಲ ದಿನಗಳ ಹಿಂದೆ ಉದ್ಯಮಿಯಾಗಿರುವ ಗೌರಿ ಸ್ಪ್ರಾಟ್ ಅವರನ್ನು ಸರಳವಾಗಿ ಮದುವೆಯಾಗುವ ಮೂಲಕ ಈಗ ಸುದ್ದಿಯಲ್ಲಿದ್ದಾರೆ. ಈ ಆಮಿರ್ ಖಾನ್‌ಗೆ ಆಪ್ತ ಅಂಗರಕ್ಷಕ ಆಗಿರುವವವರು ಯಾರು ಗೊತ್ತೇ...? ಅವರೇ ನಮ್ಮ ತುಳುನಾಡಿನ ಸತ್ಯರಾಜ್! ಇವರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ....!
ತುಳುನಾಡಿನ ಮಣ್ಣಿನಲ್ಲಿ ಹುಟ್ಟಿ ಬೆಳೆದು, ಬಾಲಿವುಡ್‌ನ ಖ್ಯಾತ ನಟ ಆಮೀರ್ ಖಾನ್ ಅವರ ವಿಶ್ವಾಸಾರ್ಹ ಆಪ್ತ ಅಂಗರಕ್ಷಕರಾಗಿ ಗುರುತಿಸಿಕೊಂಡಿರುವ ಸತ್ಯರಾಜ್ ಅವರ ಬದುಕಿನ ಪಯಣ ಹಲವು ಯುವಕರಿಗೆ ಇಂದು ಸ್ಫೂರ್ತಿದಾಯಕವಾಗಿದೆ.
ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ, ಮಾರ್ಷಲ್ ಆರ್ಟ್ಸ್ ಪರಿಣತರಾಗಿಯೂ ಹಾಗೂ ವೃತ್ತಿಪರ ಭದ್ರತಾ ಸಿಬ್ಬಂದಿಯಾಗಿ ತರಬೇತಿ ಪಡೆದಿರುವ ಸತ್ಯರಾಜ್, 2003ರಿಂದ ಆಮೀರ್ ಖಾನ್ ಅವರ ಆಪ್ತ ಅಂಗರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲ ದೇಶದ ಪ್ರಮುಖ ಚಿತ್ರತಾರೆಯ ಭದ್ರತೆಯ ಹೊಣೆ ಹೊತ್ತು ತಮ್ಮ ವೃತ್ತಿಪರತೆ, ನಿಷ್ಠೆ ಮತ್ತು ವಿನಯದಿಂದ ವಿಶೇಷ ಗೌರವ ಗಳಿಸಿದ್ದಾರೆ.
ಇಂಥ ತುಳುನಾಡಿನ ಸಾಧಕನೊಂದಿಗೆ ದುಬೈಯಲ್ಲಿ ಇಕ್ರಮ್ ಮೊಹಮ್ಮದ್(Ikram Mohammed) ಅವರು headlineskannada.comಗಾಗಿ ನಡೆಸಿದ ವಿಶೇಷ ಸಂದರ್ಶನದಲ್ಲಿ ತುಳುನಾಡಿನಿಂದ ಬಾಲಿವುಡ್‌ವರೆಗೆ ಸಾಗಿದ ಸತ್ಯರಾಜ್(Satyaraj) ಅವರ ಸಾಧನೆಯ ಹಾದಿ, ಬದುಕಿನಲ್ಲಿ ಅಳವಡಿಸಿಕೊಂಡ ಮೌಲ್ಯಗಳು, ವೃತ್ತಿಜೀವನದ ಸವಾಲುಗಳು ಹಾಗೂ ಯಶಸ್ಸಿನ ಹಿಂದಿರುವ ಪರಿಶ್ರಮದ ಕುರಿತು ಮನಮುಟ್ಟುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇಕ್ರಮ್ ಮೊಹಮ್ಮದ್: ಮೊದಲಿಗೆ ಅಭಿನಂದನೆಗಳು... ತುಳುನಾಡಿನ ಸಾಮಾನ್ಯ ಕುಟುಂಬದಿಂದ ಹೊರಟು ಬಾಲಿವುಡ್‌ನ ಅಗ್ರ ನಟ ಆಮೀರ್ ಖಾನ್ ಅವರೊಂದಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಪಯಣದ ಬಗ್ಗೆ ನಿಮ್ಮ ಅನುಭವ...?
ಸತ್ಯರಾಜ್: ತುಂಬಾ ಸಂತೋಷವಾಗುತ್ತದೆ. ನಾನು ಎಲ್ಲಿಗೆ ಹೋದರೂ ಹೆಮ್ಮೆಯಿಂದ "ನಾನು ತುಳುನಾಡಿನವನು" ಎಂದು ಹೇಳುತ್ತೇನೆ. ನಮ್ಮ ನೆಲ ನನಗೆ ಶಿಸ್ತು, ವಿನಯ ಮತ್ತು ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಿದೆ. ಇಂದಿಗೂ ಆ ಮೌಲ್ಯಗಳನ್ನೇ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಅವರ ಆಪ್ತ ಅಂಗ ರಕ್ಷಕನಾದ ಮೇಲೆ ಹಲವಾರು ರೀತಿಯ ಅನುಭವ ಪಡೆದಿದ್ದೇನೆ. ಮುಖ್ಯವಾಗಿ ನಮ್ಮಲ್ಲಿ ಸಾಧನೆ ಮಾಡುವ ಛಲ ಇರಬೇಕು. ಅದುವೇ ನಮ್ಮನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲು ಸಹಕಾರಿ. ಅದು ನನ್ನಲ್ಲಿ ಇತ್ತು. ಆ ಕಾರಣದಿಂದಲೇ ನಾನು ಇಂದು ಈ ಮಟ್ಟಕ್ಕೆ ತಲುಪಿದ್ದೇನೆ.
ಇಕ್ರಮ್ ಮೊಹಮ್ಮದ್: 2003ರಿಂದ ಆಮೀರ್ ಖಾನ್ ಅವರೊಂದಿಗೆ ಕೆಲಸ ಮಾಡುತ್ತಿದ್ದೀರಿ. 23 ವರ್ಷಗಳ ಈ ವಿಶ್ವಾಸದ ಸಂಬಂಧದ ಹಿಂದಿನ ರಹಸ್ಯವೇನು?
ಸತ್ಯರಾಜ್: ನಂಬಿಕೆ, ವೃತ್ತಿಪರತೆ ಮತ್ತು ಪರಸ್ಪರ ಗೌರವ. ಪ್ರತಿದಿನ ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ವಿಶ್ವಾಸ ತಾನಾಗಿಯೇ ಬೆಳೆಯುತ್ತದೆ. ನಮ್ಮ ನಡುವಿನ ಬಾಂಧವ್ಯವೂ ಅದೇ ರೀತಿಯಲ್ಲಿ ಗಟ್ಟಿಯಾಗಿದೆ. ನಾವು ಇಂದು ಒಳ್ಳೆಯ ಸಂಬಂಧವನ್ನು ಬೆಳೆಸಿಕೊಂಡಿದ್ದೇವೆ.
ಇಕ್ರಮ್ ಮೊಹಮ್ಮದ್: ನೀವು ರಾಷ್ಟ್ರಮಟ್ಟದ ಕ್ರೀಡಾಪಟು, ಮಾರ್ಷಲ್ ಆರ್ಟ್ಸ್ ಮತ್ತು ಕಮಾಂಡೋ ತರಬೇತಿ ಪಡೆದವರು. ಈ ಅನುಭವ ನಿಮ್ಮ ವೃತ್ತಿಜೀವನಕ್ಕೆ ಎಷ್ಟು ನೆರವಾಯಿತು?
ಸತ್ಯರಾಜ್: ನಮ್ಮ ದೈಹಿಕ ಸಾಮರ್ಥ್ಯ ಮುಖ್ಯವೇ ಆದರೂ, ಅದಕ್ಕಿಂತ ಮುಖ್ಯವಾದುದು ಮಾನಸಿಕ ದೃಢತೆ, ತಾಳ್ಮೆ, ಎಚ್ಚರಿಕೆ ಮತ್ತು ಜವಾಬ್ದಾರಿಯ ಪ್ರಜ್ಞೆ. ಕ್ರೀಡೆ ಮತ್ತು ತರಬೇತಿಯೇ ನನ್ನನ್ನು ಈ ವೃತ್ತಿಗೆ ಸಿದ್ಧಗೊಳಿಸಿತು. ಓರ್ವ ಕ್ರೀಡಾಪಟುವಾಗಿ ಅನಂತರ ನಾನು ಪಡೆದ ವೃತ್ತಿಪರ ತರಬೇತಿ ನನ್ನ ಯಶಸ್ಸಿಗೆ ಸ್ಫೂರ್ತಿಯಾಯಿತು.
ಇಕ್ರಮ್ ಮೊಹಮ್ಮದ್: 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂದು ಹೆಸರಾದ ಆಮೀರ್ ಖಾನ್ ಅವರನ್ನು ಹತ್ತಿರದಿಂದ ನೋಡಿದಾಗ ಅವರು ಹೇಗಿದ್ದಾರೆ?
ಸತ್ಯರಾಜ್: ಅವರು ಅತ್ಯಂತ ಶಿಸ್ತುಬದ್ಧ ವ್ಯಕ್ತಿ. ಕೆಲಸದ ವಿಷಯದಲ್ಲಿ ಅಪಾರ ಸಮರ್ಪಣಾ ಭಾವನೆಯವರು. ತಮ್ಮ ಜೊತೆ ಕೆಲಸ ಮಾಡುವ ಪ್ರತಿಯೊಬ್ಬರನ್ನೂ ಗೌರವಿಸುತ್ತಾರೆ. ಅವರಿಂದ ನಾನು ಕಲಿತ ದೊಡ್ಡ ಪಾಠ ಎಂದರೆ – ಕೆಲಸದಲ್ಲಿ ಬದ್ಧತೆ ಮತ್ತು ನಿರಂತರ ಕಲಿಕೆ. ಮೇಲು ಕೀಳು ಎಂಬ ಭೇದವಿಲ್ಲ. ಕೆಲಸದ ಬಗ್ಗೆ ಅಹಂ ಎನ್ನುವುದಿಲ್ಲ. ಇದುವೇ ಅವರನ್ನು ಆ ಮಟ್ಟಕೆ ಬೆಳೆಸಿರುವುದು.
ಇಕ್ರಮ್ ಮೊಹಮ್ಮದ್: ಅಂಗರಕ್ಷಕನ ಕೆಲಸ ಎಂದರೆ ಕೇವಲ ಭದ್ರತೆ ನೀಡುವುದು ಎಂಬ ಕಲ್ಪನೆ ಹಲವರಲ್ಲಿದೆ. ನಿಮ್ಮ ದೃಷ್ಟಿಯಲ್ಲಿ ಈ ಜವಾಬ್ದಾರಿಯ ನಿಜವಾದ ಅರ್ಥವೇನು?
ಸತ್ಯರಾಜ್: ಅಂಗರಕ್ಷಕನ ಕೆಲಸ ಕೇವಲ ಭದ್ರತೆ ಒದಗಿಸುವುದು ಮಾತ್ರವಲ್ಲ. ಆಮೀರ್ ಖಾನ್ ಅವರ ಸುರಕ್ಷತೆ, ಆರೋಗ್ಯ ಮತ್ತು ದಿನನಿತ್ಯದ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಅವರ ಪ್ರಯಾಣ, ಸಭೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಭದ್ರತಾ ನಿಯಮಗಳಿಗೆ ಅನುಗುಣವಾಗಿ ಮಾಡುತ್ತೇನೆ.
ಕಳೆದ 23 ವರ್ಷಗಳಲ್ಲಿ ನಮ್ಮ ನಡುವೆ ವಿಶ್ವಾಸ ಮತ್ತು ಪರಸ್ಪರ ಗೌರವದ ಬಾಂಧವ್ಯ ಬೆಳೆದಿದೆ. ಆಮೀರ್ ಸರ್ ನನ್ನನ್ನು ಸಿಬ್ಬಂದಿಯಂತೆ ಅಲ್ಲ, ತಮ್ಮ ಕುಟುಂಬದ ಸದಸ್ಯನಂತೆ ಕಾಣುತ್ತಾರೆ. ಇದೇ ಕಾರಣದಿಂದ ಇಷ್ಟೊಂದು ವರ್ಷ ಅವರೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ.
ಇಕ್ರಮ್ ಮೊಹಮ್ಮದ್: ಆಮೀರ್ ಖಾನ್ ಎಲ್ಲಾ ಧರ್ಮಗಳನ್ನು ಗೌರವಿಸುವ ವ್ಯಕ್ತಿ ಎಂಬ ಅಭಿಪ್ರಾಯವಿದೆ. ಹಬ್ಬಗಳನ್ನು ಅವರು ಹೇಗೆ ಆಚರಿಸುತ್ತಾರೆ?
ಸತ್ಯರಾಜ್: ಅದು ನಿಜ. ಈದ್, ದೀಪಾವಳಿ, ಕ್ರಿಸ್‌ಮಸ್ ಸೇರಿದಂತೆ ಎಲ್ಲ ಹಬ್ಬಗಳನ್ನು ಸಮಾನವಾಗಿ ಸಂತೋಷದಿಂದ ಆಚರಿಸುತ್ತಾರೆ. ಧರ್ಮ ಅಥವಾ ಹಿನ್ನೆಲೆಯ ಆಧಾರದ ಮೇಲೆ ಎಂದಿಗೂ ಯಾರೊಂದಿಗೂ ಭೇದಭಾವ ಮಾಡಲ್ಲ. ಎಲ್ಲರನ್ನೂ ಸಮಾನ ಗೌರವದಿಂದ ಕಾಣುತ್ತಾರೆ. ಅದುವೇ ಅವರ ಜೀವನದ ನಿಜವಾದ ಗುಟ್ಟು.
ಇಕ್ರಮ್ ಮೊಹಮ್ಮದ್: ಈ ವೃತ್ತಿಯ ಮೂಲಕ ನಿಮಗೆ ಚಿತ್ರರಂಗದ ಅನೇಕ ಗಣ್ಯರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆಯೇ... ? ಆ ಬಗ್ಗೆ ನಿಮ್ಮ ಅನುಭವ ಹೇಗಿತ್ತು?
ಸತ್ಯರಾಜ್: ಅನೇಕ ಪ್ರತಿಭಾವಂತ ವ್ಯಕ್ತಿಗಳನ್ನು, ನಟ-ನಟಿಯರನ್ನು ಭೇಟಿಯಾಗಿದ್ದೇನೆ. ಪ್ರತಿಯೊಬ್ಬರಿಂದಲೂ ಹೊಸದನ್ನು ಕಲಿಯಲು ಸಾಧ್ಯವಾಗಿದೆ. ಆ ಅನುಭವಗಳು ನನ್ನ ಬದುಕಿನ ಅಮೂಲ್ಯ ಸಂಪತ್ತು. ನಾವು ಹೆಚ್ಚೆಚ್ಚು ಜನರನ್ನು ಭೇಟಿಯಾದಂತೆ ನಮಗೆ ಮತ್ತಷ್ಟು ಕಲಿಯಲು ಸಿಗುತ್ತೆ.
ಇಕ್ರಮ್ ಮೊಹಮ್ಮದ್: ನಿಮ್ಮ ಕೆಲಸದ ನಿಮಿತ್ತ ಈ ವರಗೆ ವಿಶ್ವದ ಎಷ್ಟು ದೇಶಗಳಿಗೆ ಭೇಟಿ ನೀಡಿದ್ದೀರಿ?
ಸತ್ಯರಾಜ್: ಇದುವರೆಗೆ 70ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದೇನೆ. ಪ್ರತಿಯೊಂದು ದೇಶವೂ ವಿಭಿನ್ನ ಸಂಸ್ಕೃತಿ, ಸಂಸ್ಕಾರ, ವಿಭಿನ್ನ ಭಾಷೆ, ಹೊಸ ಅನುಭವ ಮತ್ತು ಜೀವನ ಪಾಠಗಳನ್ನು ನೀಡಿದೆ. ಅದಕ್ಕಾಗಿ ನಾನು ನನ್ನನ್ನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ.
ಇಕ್ರಮ್ ಮೊಹಮ್ಮದ್: ತುಳುನಾಡಿನ ಜನರ ಆಸೆಯಂತೆ ಅವಕಾಶ ಸಿಕ್ಕರೆ ಆಮೀರ್ ಖಾನ್ ಅವರನ್ನು ತುಳುನಾಡಿಗೆ ಕರೆತರಲು ಬಯಸುತ್ತೀರಾ?
ಸತ್ಯರಾಜ್: ಖಂಡಿತ. ಅದು ನನಗೆ ಹೆಮ್ಮೆಯ ಕ್ಷಣವಾಗಿರುತ್ತದೆ. ಅವಕಾಶ ಮತ್ತು ಸಮಯ ಸಿಕ್ಕರೆ ನಮ್ಮ ನೆಲದ ಪ್ರಕೃತಿ ಸೌಂದರ್ಯ, ಶ್ರೀಮಂತ ಸಂಸ್ಕೃತಿ ಹಾಗೂ ಜನರ ಆತಿಥ್ಯವನ್ನು ಅವರಿಗೆ ಪರಿಚಯಿಸಲು ತುಂಬಾ ಸಂತೋಷಪಡುತ್ತೇನೆ. ಅದಕ್ಕಾಗಿ ಸಮಯ ಕೂಡಿಬರಬೇಕು. ಅಷ್ಟರ ವರಗೆ ನಾವು ಕಾಯಲೇಬೇಕು.
ಇಕ್ರಮ್ ಮೊಹಮ್ಮದ್: ನಿಮ್ಮ ವೃತ್ತಿಜೀವನದ ಕೆಲಸದ ಒತ್ತಡದ ಮಧ್ಯೆ ಕುಟುಂಬದೊಂದಿಗೆ ಹೇಗೆ ಸಮಯ ಕಳೆಯುತ್ತೀರಿ...?
ಸತ್ಯರಾಜ್: ನನಗೆ ಕುಟುಂಬವೇ ಮೊದಲ ಆದ್ಯತೆ. ನನ್ನ ವೃತ್ತಿಯ ಕಾರಣದಿಂದ ಸಾಕಷ್ಟು ಸಮಯ ಕೆಲಸದಲ್ಲೇ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ಕುಟುಂಬದೊಂದಿಗೆ ಬಯಸಿದಷ್ಟು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಆದರೆ ಬಿಡುವು ಸಿಕ್ಕಾಗಲೆಲ್ಲಾ ಪತ್ನಿ ಮತ್ತು ಮಗಳೊಂದಿಗೆ ಸಮಯ ಕಳೆಯುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಅವರ ಪ್ರೀತಿ, ಸಹಕಾರ ಮತ್ತು ಅರ್ಥೈಸಿಕೊಳ್ಳುವ ಮನೋಭಾವವೇ ನನ್ನ ವೃತ್ತಿಜೀವನದ ಪಯಣದಲ್ಲಿ ಸದಾ ದೊಡ್ಡ ಶಕ್ತಿಯಾಗಿ ನಿಂತಿದೆ.
ಇಕ್ರಮ್ ಮೊಹಮ್ಮದ್: ಕೊನೆಯದಾಗಿ, ತುಳುನಾಡಿನ ಯುವಜನತೆಗೆ ನೀವು ಏನು ಸಂದೇಶ ಕೊಡಲು ಇಚ್ಛಿಸುತ್ತೀರಿ...?
ಸತ್ಯರಾಜ್: ದೊಡ್ಡ ದೊಡ್ಡ ಕನಸುಗಳನ್ನು ಕಾಣಿರಿ. ಜೊತೆಗೆ ಕಠಿಣ ಪರಿಶ್ರಮ ಮತ್ತು ಶಿಸ್ತನ್ನು ಜೀವನದ ಭಾಗವಾಗಿಸಿಕೊಳ್ಳಿ. ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ. ಪ್ರಾಮಾಣಿಕತೆ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ನಿಜವಾದ ಸೂತ್ರ. ಅದಕ್ಕಾಗಿ ನಿಮ್ಮ ಶ್ರಮ ಮುಖ್ಯ. ಯಾವುದೇ ವಿಷಯವಿರಲಿ, ಅದರಲ್ಲಿ ನೀವು ಹಾಕುವಂಥ ಶ್ರಮ ಮುಖ್ಯ. ಅದುವೇ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.




























