ಸಿಗರೇಟ್ ಖರೀದಿಸಲು ಹೋಗಿ ಪೋಲೀಸರ ಅತಿಥಿಯಾದ ಭೂಪ; ಅಷ್ಟಕ್ಕೂ ಈತ ಮಾಡಿದ ಘನಂದಾರಿ ಕೆಲಸವೇನು ಗೊತ್ತೇ...?

ಬೆಂಗಳೂರು: ಅಂಗಡಿಯೊಂದರಲ್ಲಿ ಸಿಗರೇಟ್ ಖರೀದಿಸಲು ಹೋದ ಭೂಪ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ! ಅಷ್ಟಕ್ಕೂ ಆತ ಮಾಡಿದ ತಪ್ಪೇನು ಗೊತ್ತೇ...? ಮುಂದೆ ಓದಿ... 

41 ವರ್ಷದ ಎಂಬಿಎ ಪದವೀಧರ ರುದ್ರೇಶ್ ಎಂಬಾತ ತುಮಕೂರಿನ ಹುಳಿಯಾರು ಬಳಿ 500 ರೂಪಾಯಿ ಕೊಟ್ಟು ಸಿಗರೇಟ್ ಖರೀದಿಸಲು ಹೋಗಿದ್ದಾನೆ. ಆದ್ರೆ, ಇಲ್ಲೇ ನೋಡಿ ಕಥೆಗೆ ಟ್ವಿಸ್ಟ್ ಸಿಕ್ಕಿದು ಅದುವೇ ಆತ ಅಂಗಡಿಯವನಿಗೆ ಕೊಟ್ಟ 500 ರೂಪಾಯಿ ನೋಟು ಅಸಲಿಗೆ ಅಸಲಿಯೇ ಅಲ್ಲ! ಅಂಗಡಿಯವನಿಗೆ ಕೊಟ್ಟ 500 ರೂಪಾಯಿ ನೋಟು ನಕಲಿ ಎಂದು ಗೊತ್ತಾಗಿದೆ. ಇದುವೇ ಆತನನ್ನ ಪೊಲೀಸರ ಅತಿಥಿಯಾಗುವಂತೆ ಮಾಡಿದೆ.

ಜುಲೈ 2 ರಂದು, ಬೆಂಗಳೂರಿನ ಗಂಗೊಂಡನಹಳ್ಳಿಯ ಸಂಪಿಗೆ ಲೇಔಟ್‌ ನಿವಾಸಿ ರುದ್ರೇಶ್ ತಮ್ಮ ಸ್ನೇಹಿತರೊಂದಿಗೆ ಹುಳಿಯಾರು ಬಳಿಯ ಹೊಸಹಳ್ಳಿಯಲ್ಲಿನ ಅಂಜನಾ ಶೆಟ್ಟಿ ಅವರ ಅಂಗಡಿಯಲ್ಲಿ 500 ರೂ. ನೋಟನ್ನು ಬಳಸಿ ಸಿಗರೇಟ್ ಪ್ಯಾಕೆಟ್ ಖರೀದಿಸಿದ್ದಾರೆ. ಈ ವೇಳೆ ಅಂಜನಾ ಶೆಟ್ಟಿಗೆ ಆ ನೋಟು ನೋಡಿದ ನಂತರ ಅದು ಖೋಟಾ ನೋಟು ಎಂದು ಗೊತ್ತಾಗಿದೆ. ಇನ್ನು, ಅಂಗಡಿ ಮಾಲೀಕ ಕೊಟ್ಟ ಮಾಹಿತಿಯನ್ನ ಆಧಾರಿಸಿ, ಪೊಲೀಸರು ವಾಹನ ಟ್ರ್ಯಾಕಿಂಗ್ ಮತ್ತು ತಾಂತ್ರಿಕ ಕಣ್ಗಾವಲು ಬಳಕೆಯೊಂದಿಗೆ ರುದ್ರೇಶ್ ಕುರಿತು ಮಾಹಿತಿ ಪತ್ತೆಹಚ್ಚಿದ್ದಾರೆ.

ಇದಾದ ನಂತರ ಪೊಲೀಸರು ಗಂಗೊಂಡನಹಳ್ಳಿಯ ರುದ್ರೇಶ್ ಮನೆ ಮೇಲೆ ದಾಳಿ ಮಾಡಿದಾಗ ಆತ, ಕುಟಂಬದವರ ಸಹಾಯದೊಂದಿಗೆ ಚೆಳ್ಳೆಹಣ್ಣು ತಿನ್ನಿಸಲು ಟ್ರೈ ಮಾಡಿದ್ದಾನೆ. ಆದರೆ, ಪೊಲೀಸರು ಕೆಲವು ಸಮಯದ ಹುಡುಗಾಟದ ನಂತರ ಮಂಚದ ಕೆಳಭಾಗದಲ್ಲಿನ ಬಾಕ್ಸ್ ಬೆಡ್ ಒಳಗೆ ಅಡಗಿಕೊಂಡಿರುವುದನ್ನು ಪತ್ತೆಹಚ್ಚಿದ್ದಾರೆ.

ಈ ಹಿಂದೆ ಜೈಲು ಸೇರಿದ್ದ ಆರೋಪಿ 

ಪೊಲೀಸ್ ಮೂಲಗಳ ಪ್ರಕಾರ, ರುದ್ರೇಶ್ ಈ ಹಿಂದೆ 2024 ರಲ್ಲೂ ನಕಲಿ ನೋಟು ದಂಧೆಯ ಭಾಗವಾಗಿ ದಾವಣಗೆರೆ ಪೊಲೀಸರ ಅತಿಥಿ ಆಗಿದ್ದ ಎನ್ನಲಾಗಿದೆ. ಆ ವೇಳೆ ಆರು ಸದಸ್ಯರ ತನ್ನ ಗ್ಯಾಂಗ್ ಜೊತೆಗೆ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಮೂರು ತಿಂಗಳಲ್ಲಿ ಮುದ್ರಿಸಿ ಚಲಾವಣೆ ಮಾಡಿ ಜೈಲು ಸೇರಿದ್ದ. ಆದರೆ, ಜೈಲಿನಿಂದ ಬಿಡುಗಡೆಯಾದ ನಂತರವೂ ರುದ್ರೇಶ್ ಮತ್ತೆ ನಕಲಿ ನೋಟು ದಂಧೆ ಆರಂಭಿಸಿದ್ದಾನೆ ಎಂದು ಪೊಲೀಸರು ಈ ಘಟನೆಯ ನಂತರ ಅನುಮಾನ ವ್ಯಕ್ತಪಡಿಸಿದ್ದಾರೆ. ಏತನ್ಮದ್ಯೆ, ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರೆದಿವೆ.