ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಗೌರಿಯನ್ನು ವಿವಾಹವಾದ ನಟ ಆಮಿರ್ ಖಾನ್‌!

ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ಇಂದು ಉದ್ಯಮಿ ಗೌರಿ ಸ್ಪ್ಯ್ರಾಟ್‌ ಅಧಿಕೃತವಾಗಿ ವಿವಾಹವಾಗಿದ್ದಾರೆ. ಕುಟುಂಬದ ಸದಸ್ಯರು ಮತ್ತು ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ರಿಜಿಸ್ಟರ್ಡ್‌ ಮ್ಯಾರೇಜ್‌ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಮುಂಬೈನ ಬಾಂದ್ರಾದಲ್ಲಿರುವ ಆಮಿರ್ ಖಾನ್ ನಿವಾಸದಲ್ಲಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಮದುವೆಯಲ್ಲಿ ಸುಮಾರು 150 ಮಂದಿ ಮಾತ್ರ ಭಾಗಿಯಾಗಿದ್ದರು. ವಿದೇಶಗಳಿಂದ ಬಂದ ಕೆಲ ಬಂಧುಗಳು, ಆಪ್ತ ಸ್ನೇಹಿತರು ಹಾಗೂ ಸಿನಿಮಾ ಕ್ಷೇತ್ರದ ಆಯ್ದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮದುವೆಯ ಬಳಿಕ ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ವಿವಾಹ ನೋಂದಣಿಗೆ ಅಗತ್ಯ ದಾಖಲೆಗಳಿಗೆ ಸಹಿ ಹಾಕಿ ತಮ್ಮ ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡಿದ್ದಾರೆ.

ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ 25 ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದ ವೇಳೆ ಗೌರಿಯನ್ನು ಆಮಿರ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಪರಿಚಯಿಸಿದ್ದರು. ಜೂನ್ 4ರಂದು ತಮ್ಮ ಮದುವೆಯ ಸುದ್ದಿಯನ್ನು ಆಮಿರ್ ಅಧಿಕೃತವಾಗಿ ದೃಢಪಡಿಸಿದ್ದರು.

ಈ ಮದುವೆಯಲ್ಲಿ ಆಮಿರ್ ಖಾನ್ ಅವರ ಮೂವರು ಮಕ್ಕಳಾದ ಜುನೈದ್, ಇರಾ ಹಾಗೂ ಆಜಾದ್ ಭಾಗಿಯಾಗಿದ್ದರು. ಗೌರಿ ಸ್ಪ್ರ್ಯಾಟ್ ಅವರ ಆರು ವರ್ಷದ ಮಗ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದನು. ಆಮಿರ್ ಈ ಹಿಂದೆ ರೀನಾ ದತ್ತಾ ಹಾಗೂ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದು, ಇದು ಅವರ ಮೂರನೇ ಮದುವೆಯಾಗಿದೆ.

ಗೌರಿ ಸ್ಪ್ರ್ಯಾಟ್ ಮೂಲತಃ ಬೆಂಗಳೂರಿನವರು. ಅವರ ತಾಯಿ ರೀಟಾ ಸ್ಪ್ರ್ಯಾಟ್ ಬೆಂಗಳೂರಿನಲ್ಲಿ ಸಲೂನ್ ನಡೆಸುತ್ತಿದ್ದರು. ಗೌರಿ ಬೆಂಗಳೂರಿನ ಬ್ಲೂ ಮೌಂಟೇನ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಬಳಿಕ ಲಂಡನ್‌ನ ಯೂನಿವರ್ಸಿಟಿ ಆಫ್ ಆರ್ಟ್ಸ್‌ನಲ್ಲಿ ಫ್ಯಾಷನ್ ಸ್ಟೈಲಿಂಗ್ ಮತ್ತು ಫೋಟೋಗ್ರಫಿ ಅಭ್ಯಾಸ ಮಾಡಿದ್ದಾರೆ. ಪ್ರಸ್ತುತ ಅವರು ಮುಂಬೈನ ಬಿಬ್ಲಂಟ್ (BBlunt) ಸಲೂನ್‌ನ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.