ಯುಎಇಯ ಇತಿಹಾದ್ ರೈಲಿನ ಚೊಚ್ಚಲ ಸಂಚಾರದಲ್ಲಿ ಕನ್ನಡಿಗನ ಸಾಧನೆ; ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಮಿಂಚಿದ ಕೊಡಗಿನ ರಿಯಾಜ್ ನಝೀರ್

ಅಬುಧಾಬಿ: ಯುಎಇಯ ಸಾರಿಗೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿರುವ ಇತಿಹಾದ್ ರೈಲಿನ ಚೊಚ್ಚಲ ಪ್ರಯಾಣವು ಯಶಸ್ವಿಯಾಗಿ ನೆರವೇರಿದ್ದು, ಈ ಐತಿಹಾಸಿಕ ಕ್ಷಣದಲ್ಲಿ ಭಾರತೀಯರ, ವಿಶೇಷವಾಗಿ ದಕ್ಷಿಣ ಭಾರತದ ವೃತ್ತಿಪರರ ಸಾಧನೆ ಗಮನಸೆಳೆದಿದೆ.

ಗಲ್ಫ್ ಪ್ರದೇಶದ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಕತಾರ್ ಮೆಟ್ರೋ ಹಾಗೂ ಕತಾರ್ ಟ್ರಾಮ್ ಸೇವೆಗಳ ಉದ್ಘಾಟನಾ ಸಂಚಾರದಲ್ಲಿ ರೈಲು ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದ ಮಂಗಳೂರು–ಕೊಡಗು ಮೂಲದ ರಿಯಾಝ್ ನಝೀರ್, ಇತಿಹಾದ್ ರೈಲಿನ ಲೋಕೋ ಪೈಲಟ್ ಆಗಿ ಪ್ರಯಾಣದ ಸಂಪೂರ್ಣ ಕಾರ್ಯಾಚರಣೆ ಮತ್ತು ನಿಯಂತ್ರಣದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಪ್ರಸ್ತುತ  ನಝೀರ್ ಪೋಷಕರಾದ ಹಾಜಿ  ನಝೀರ್ ಮತ್ತು ರಹ್ಮತ್ ಅವರು ಶುಂಠಿಕೊಪ್ಪದಲ್ಲಿ ವಾಸವಾಗಿದ್ದಾರೆ. ಬಾಲ್ಯದ ಸಮಯದಲ್ಲಿ ಕನಿಷ್ಠ ಸೈಕಲ್ ಕೂಡ ನನಗೆ ಸಿಗಲಿಲ್ಲ. ಈಗ ಅತ್ಯಂತ ಜವಾಬ್ದಾರಿಯುತ ರೈಲು ಸೇವೆಯ ಪ್ರಥಮ ಯಾನದ ಪೈಲಟ್ ಆಗುವ ಯೋಗ ಸಿಕ್ಕಿರುವುದಕ್ಕೆ ಹೆಮ್ಮೆ ಆಗುತ್ತಿದೆ ಎಂದು ರಿಯಾಜ್‌ ಅವರು ಪ್ರತಿಕ್ರಿಯಿಸಿದ್ದಾರೆ. ‌

ಸಾರಿಗೆ ಕ್ಷೇತ್ರದಲ್ಲಿ ಹೊಂದಿರುವ ಅವರ ಅಪಾರ ಅನುಭವವನ್ನು ಪರಿಗಣಿಸಿ, ಇತಿಹಾದ್ ರೈಲು ಆಡಳಿತವು ಈ ಮಹತ್ವದ ಜವಾಬ್ದಾರಿಯನ್ನು ಅವರಿಗೆ ವಹಿಸಿತ್ತು. ಈ ಸಾಧನೆಯು ಯುಎಇಯಲ್ಲಿರುವ ಭಾರತೀಯ ಪ್ರವಾಸಿ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗಿ ಪರಿಣಮಿಸಿದೆ.

ಯೋಜನೆಯ ಸುಗಮ ನಿರ್ವಹಣೆಗಾಗಿ ಪೈಲಟ್ ಕ್ಯಾಬಿನ್ ಹಾಗೂ ಪ್ರಯಾಣಿಕರ ಸೇವೆಯಲ್ಲಿ ಭಾರತೀಯರ ತಂಡವೂ ಪ್ರಮುಖ ಪಾತ್ರವಹಿಸಿತು. ಇತಿಹಾದ್ ರೈಲಿನ ಆಪರೇಷನ್ಸ್ ತಂಡದ ಮುಖ್ಯಸ್ಥ ಹಾಗೂ ಟ್ರೈನ್ ಡ್ರೈವರ್ಸ್ ಲೈನ್ ಮ್ಯಾನೇಜರ್ ಆಗಿರುವ ಆಲಪ್ಪುಳ ಮೂಲದ ನಿಶಾದ್ ಈ ತಂಡವನ್ನು ಮುನ್ನಡೆಸಿದರು.

ಅವರೊಂದಿಗೆ ರೈಲು ಕ್ಯಾಪ್ಟನ್‌ಗಳಾಗಿ ಕೊಚ್ಚಿ ಮೂಲದ ನೋವಿನ್ ಜಾರ್ಜ್ ಹಾಗೂ ಕಣ್ಣೂರು ಮೂಲದ ಮೊಹಮ್ಮದ್ ಸಾಜಿದ್, ಟ್ರೈನ್ ಮಾಸ್ಟರ್‌ಗಳಾಗಿ ಪಾಲಕ್ಕಾಡ್ ಮೂಲದ ರಂಜಿ ರವಿ ಮತ್ತು ಮಲಪ್ಪುರಂ ಮೂಲದ ಆದಿಲ್ ಮೊಹಮ್ಮದ್ ಕಾರ್ಯನಿರ್ವಹಿಸಿ, ರೈಲಿನ ಸುರಕ್ಷಿತ ಮತ್ತು ಸುಗಮ ಸಂಚಾರದಲ್ಲಿ ಮಹತ್ವದ ಕೊಡುಗೆ ನೀಡಿದರು.

ಕಠಿಣ ತರಬೇತಿ, ವೃತ್ತಿಪರ ನೈಪುಣ್ಯ ಮತ್ತು ಸ್ಪಷ್ಟ ಗುರಿಯೊಂದಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಈ ಯುವ ವೃತ್ತಿಪರರು, ಇತಿಹಾದ್ ರೈಲಿನ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದ್ದಾರೆ.

ವಿಮಾನಗಳಲ್ಲಿನ ಕ್ಯಾಬಿನ್ ಸಿಬ್ಬಂದಿಯ ಮಾದರಿಯಲ್ಲೇ ಕಾರ್ಯನಿರ್ವಹಿಸುವ ಟ್ರೈನ್ ಮಾಸ್ಟರ್‌ಗಳು, ಪ್ರಯಾಣಿಕರ ಸುರಕ್ಷತೆ, ಮಾರ್ಗದರ್ಶನ ಮತ್ತು ಸೇವಾ ಸೌಲಭ್ಯಗಳನ್ನು ನಿರಂತರವಾಗಿ ಖಚಿತಪಡಿಸುತ್ತಾರೆ. ಮತ್ತೊಂದೆಡೆ, ಪೈಲಟ್ ಕ್ಯಾಬಿನ್‌ನಲ್ಲಿ ರೈಲಿನ ಸುರಕ್ಷಿತ ಸಂಚಾರ ಹಾಗೂ ನಿಗದಿತ ವೇಗ ನಿಯಂತ್ರಣವನ್ನು ಭಾರತೀಯರ ತಂಡ ಅತ್ಯಂತ ವೃತ್ತಿಪರವಾಗಿ ನಿರ್ವಹಿಸಿದೆ.

ಇದಲ್ಲದೆ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಸ್ವಾಗತಿಸುವುದು, ಮಾರ್ಗದರ್ಶನ ನೀಡುವುದು ಹಾಗೂ ನೆರವು ಒದಗಿಸುವ ಕಾರ್ಯಗಳಲ್ಲೂ ವಿವಿಧ ದೇಶಗಳ ಪರಿಣಿತ ಸಿಬ್ಬಂದಿಯೊಂದಿಗೆ ಭಾರತೀಯರೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುಎಇಯ ಭವಿಷ್ಯದ ಅಭಿವೃದ್ಧಿ ಮತ್ತು ವಿವಿಧ ಎಮಿರೇಟ್‌ಗಳನ್ನು ಪರಸ್ಪರ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಇತಿಹಾದ್ ರೈಲಿನ ಚೊಚ್ಚಲ ಸಂಚಾರವನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ಸಮಯೋಚಿತವಾಗಿ ಯಶಸ್ವಿಗೊಳಿಸುವಲ್ಲಿ ರಿಯಾಝ್ ನಝೀರ್  ಹಾಗೂ ನಿಶಾದ್ ಅವರ ನೇತೃತ್ವದ ತಂಡ ಪ್ರಮುಖ ಪಾತ್ರ ವಹಿಸಿದೆ.

ಯುಎಇಯ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿರುವ ಈ ಐತಿಹಾಸಿಕ ಯೋಜನೆಯ ಯಶಸ್ಸಿನ ಹಿಂದೆ ಭಾರತೀಯ ವೃತ್ತಿಪರರ, ಅದರಲ್ಲೂ ಮಂಗಳೂರು–ಕೊಡಗಿನ ರಿಯಾಝ್ ನಝೀರ್ ಅವರ ನಾಯಕತ್ವವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.