ಬೆಂಗಳೂರು: 'ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್'ನಿಂದ ರಫೀಕ್ ಮಾಸ್ಟರ್'ಗೆ 'ವರ್ಷದ ಬ್ಯಾರಿ'- ಆಯಿಷಾ ಬಾನುಗೆ 'ವರ್ಷದ ಬ್ಯಾರ್ದಿ' ವಾರ್ಷಿಕ ಪ್ರಶಸ್ತಿ ಪ್ರದಾನ


ಬೆಂಗಳೂರು : ನಗರದ ಎಚ್.ಬಿ.ಆರ್.ಬಡಾವಣೆಯಲ್ಲಿರುವ ಬ್ಯಾರೀಸ್ ಸೌಹಾರ್ದ ಭವನದಲ್ಲಿ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ರವಿವಾರ ಆಯೋಜಿಸಲಾಗಿದ್ದ 2026ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಮಂಗಳೂರಿನ ಶಿಕ್ಷಕ ಹಾಗೂ ಸಮಾಲೋಚಕ, ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ಅವರಿಗೆ 2026ನೇ ಸಾಲಿನ 'ವರ್ಷದ ಬ್ಯಾರಿ' ಹಾಗೂ ಸಮಾಜ ಸೇವಕಿ ಆಯಿಷಾ ಬಾನು ಕಾರ್ಕಳ ಅವರಿಗೆ 'ವರ್ಷದ ಬ್ಯಾರ್ದಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. 




ಇದೇ ಸಂದರ್ಭದಲ್ಲಿ ಶುರೈಫ್ ಅಬ್ದುರ್ರಹ್ಮಾನ್ ಸೇರಿದಂತೆ  264 ವಿದ್ಯಾರ್ಥಿಗಳಿಗೆ ಪತ್ರಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್ ಮಾತನಾಡಿ, ಶಿಕ್ಷಣ ಯಾವುದೇ ಒಂದು ಶಿಕ್ಷಿತ ಸಮಾಜಕ್ಕೆ ಬುನಾದಿ. ಆದರೆ, ಈ ಸಂದೇಶವನ್ನು ನಾವು ಪುನಃ ಪುನಃ ಹೇಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾರಿ ಸಮುದಾಯವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಸ್ವಾಗತಾರ್ಹ ಎಂದರು. 

ಸೈಯದ್ ಮುಹಮ್ಮದ್ ಬ್ಯಾರಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಸುಂದರ ಬ್ಯಾರಿ ಸೌಹಾರ್ದ ಭವನ ನಿರ್ಮಾಣ ಸಾಧ್ಯವಾಯಿತು. ಸರಕಾರದಿಂದಲೂ ಈ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗಿತ್ತು. ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಈ ಭವನದ ಸದ್ಭಳಕ್ಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅತೀಕ್ ಹೇಳಿದರು.



ಸುಶಿಕ್ಷಿತರಾಗಿ ತಮ್ಮ ಸಾಮರ್ಥ್ಯ ವನ್ನು ಹೆಚ್ಚಳ ಮಾಡಿಕೊಳ್ಳಿ. ನೀವು ಯಾವ ಮಾಧ್ಯಮ ದಲ್ಲಿ ಶಿಕ್ಷಣ ಪಡೆಯುತ್ತೀರಿ ಅನ್ನೋದು ಮುಖ್ಯ ಅಲ್ಲ. ನೀವು ಏನು ಕಲಿಯುತ್ತೀರಾ, ಎಷ್ಟು ಪರಿಶ್ರಮ ಹಾಕುತ್ತೀರಿ ಅನ್ನೋದು ಮುಖ್ಯ ಎಂದು ಎಲ್.ಕೆ.ಅತೀಕ್ ಹೇಳಿದರು.

ಬೇರೆಯವರನ್ನು ದೂಷಿಸುವ ಮೊದಲು ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಅದನ್ನು ನೋಡಬೇಕು ಎಂದು ಅತೀಕ್ ತಿಳಿಸಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ, ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸು ಕಾಣಬೇಕು. ಆಗ ಮಾತ್ರ ಅವುಗಳನ್ನು ನನಸಾಗಿಸುವ ಸ್ಫೂರ್ತಿ ಸಿಗುತ್ತದೆ. ಎಲ್.ಕೆ. ಅತೀಕ್ ರೀತಿ ನಾನು ಸಹ ಉರ್ದು ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವನು. ನಾವು ಕಂಡ ಕನಸುಗಳೇ ನಮಗೆ ಸ್ಫೂರ್ತಿ ಆದವು ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ವ್ಯಸನ ಹಾಗೂ ದುಶ್ಚಟಗಳಿಂದ ದೂರವಿರಿ, ಸೈಬರ್ ವಂಚನೆಗಳಿಂದ ಎಚ್ಚರವಾಗಿರಿ ಹಾಗೂ ಸಂಚಾರ ನಿಯಮಗಳನ್ನು ಪಾಲಿಸಿ ಎಂದು ಅವರು ಸಲಹೆ ನೀಡಿದರು.

ಆರ್.ಟಿ.ನಗರದ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರಾಷ್ಟ್ರಗೀತೆ ಪ್ರಸ್ತುತಪಡಿಸಿದರು. ಅಕ್ಬರ್ ಅಲಿ ಮತ್ತು ತಂಡದವರು ಬ್ಯಾರಿ ಧ್ಯೇಯ ಗೀತೆ ಹಾಡಿದರು.

ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಅಡೂರ್ ಶಂಶುದ್ದೀನ್ ಸ್ವಾಗತ ಭಾಷಣ ಮಾಡಿದರು. ವೇದಿಕೆಯಲ್ಲಿ ಬ್ಯಾರೀಸ್ ಗ್ರೂಪ್ ಅಧ್ಯಕ್ಷ್ ಸೈಯದ್ ಮುಹಮ್ಮದ್ ಬ್ಯಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ.ಫಾರೂಕ್, ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಆಡಳಿತ ಮಂಡಳಿ ಸದಸ್ಯರಾದ ಉಮರ್ ಟೀಕೆ, ಡಾ.ಮಕ್ಸೂದ್ ಅಹ್ಮದ್ ಉಪಸ್ಥಿತರಿದ್ದರು.