ಕೆಆರ್ ಪುರಂ ತ್ರಿವಳಿ ಹತ್ಯೆ ಪ್ರಕರಣ; ಬಂಧಿತ ಹಂತಕಿಯಿಂದ ಸ್ಪೋಟಕ ಮಾಹಿತಿ ಬಹಿರಂಗ!

ಬೆಂಗಳೂರು: ಕೆ.ಆರ್. ಪುರಂನ ಶೀಗೆಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಭೀಕರ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯ ಆರೋಪಿ ಶ್ವೇತಳನ್ನು ತಮಿಳುನಾಡಿನ ಪುದುಚೆರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ತಂದೆ, ತಾಯಿ, ತಂಗಿಯನ್ನ ಕೊಲೆ ಮಾಡಿ ಆರೋಪಿ ಶ್ವೇತಾ ಪ್ರಿಯರಕನೊಂದಿಗೆ ತಲೆಮರಿಸಿಕೊಂಡಿದ್ದಳು. ಸದ್ಯ ಆರೋಪಿ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಕೆನತ್‌ಗಾಗಿ ಹುಡುಕಾಟ ನಡೆಸಿದ್ದಾರೆ. 

ವಿಚಾರಣೆ ವೇಳೆ ಆರೋಪಿ ಶ್ವೇತಾ ನೀಡಿದ ಹೇಳಿಕೆ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಕೊಲೆಯ ನಂತರ ಶ್ವೇತಾ ಮತ್ತು ಆಕೆಯ ಬಾಯ್‌ಫ್ರೆಂಡ್ ಕೆನತ್ ಪ್ರತ್ಯೇಕವಾಗಿ ಹೋಗಿದ್ದರು. ತಲೆಮರೆಸಿಕೊಂಡಿದ್ದ ಶ್ವೇತಾಳನ್ನು ಪಾಂಡಿಚೇರಿಯ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೃತ್ಯಕ್ಕೆ ಸಹಕರಿಸಿದ ಆರೋಪಿ ಕೆನತ್‌ಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಶ್ವೇತಾ ಸ್ಫೋಟಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾಳೆ. ನನ್ನ ತಾಯಿ ನನ್ನ ಜೀವನವನ್ನೇ ಕಂಟ್ರೋಲ್ ಮಾಡುತ್ತಿದ್ದರು. ನಾನು ಏನು ಮಾಡಿದರೂ ಸಹ ನನ್ನನ್ನು ಸ್ವತಂತ್ರವಾಗಿ ಬಿಡುತ್ತಿರಲಿಲ್ಲ. ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ, ಹಾಗಾಗಿ ನಾನು ತಾಯಿಯನ್ನು ಕೊಲೆ ಮಾಡಿದೆ ಎಂದು ಆರೋಪಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.