CUET UG 2026 ಪರೀಕ್ಷೆಯಲ್ಲಿ ಬಿಜೆಪಿ ಶಾಸಕನ ಪುತ್ರಿ ದೇಶಕ್ಕೇ ಟಾಪರ್​​!

ದೆಹಲಿ: ಈ ವರ್ಷದ CUET UG 2026 ಫಲಿತಾಂಶಗಳು ಹೊರ ಬಂದಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದಾರೆ. ಅದರಲ್ಲಿ ಬಿಜೆಪಿ ಶಾಸಕರ ಪುತ್ರಿ ಅಗ್ರಸ್ಥಾನ (First Place) ಪಡೆದಿದ್ದಾರೆ. ಹೌದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ ಮಾಡಿರುವ CUET UG 2026ರ ಫಲಿತಾಂಶಗಳಲ್ಲಿ ದೆಹಲಿಯ ದೇವಿನಾ ಗೆಹ್ಲೋಟ್ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

 ದಿಲ್ಲಿಯ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಕೈಲಾಶ್ ಗೆಹ್ಲೋಟ್ ಅವರ ಪುತ್ರಿ ದೇವೀನಾ ಗೆಹ್ಲೋಟ್ ಅವರು CUET–UG–2026ರ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ (AIR–1) ಗಳಿಸಿದ್ದಾರೆ.

ಡಿಪಿಎಸ್ ವಸಂತ್ ಕುಂಜ್ ಶಾಲೆಯ ವಿದ್ಯಾರ್ಥಿನಿಯಾಗಿರುವ ದೇವೀನಾ, ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬರೆದಿದ್ದ ಪರೀಕ್ಷೆಯಲ್ಲಿ ಅಗ್ರ ಅಂಕ ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ಅವರು, ಉತ್ತಮ ಸಾಧನೆ ಮಾಡುವ ವಿಶ್ವಾಸವಿದ್ದರೂ ದೇಶದಲ್ಲೇ ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಇರಲಿಲ್ಲ ಎಂದು ಹೇಳಿದ್ದಾರೆ.

ತಮ್ಮ ಯಶಸ್ಸಿಗೆ ಪೋಷಕರು, ಸಹೋದರಿ, ಶಾಲೆ ಮತ್ತು ಶಿಕ್ಷಕರ ಬೆಂಬಲ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿದಿನ ದೀರ್ಘ ಸಮಯ ಅಧ್ಯಯನ ಮಾಡುವುದಕ್ಕಿಂತ ಶಿಸ್ತುಬದ್ಧವಾಗಿ ಓದುವುದು, ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದು ಮತ್ತು ನಿರಂತರ ಮನನ ನಡೆಸುವುದಕ್ಕೆ ಆದ್ಯತೆ ನೀಡಿದ್ದಾಗಿ ದೇವೀನಾ ಹೇಳಿದ್ದಾರೆ.

CBSE ಮಂಡಳಿ ಪರೀಕ್ಷೆಗಳಿಗೆ ಮಾಡಿಕೊಂಡಿದ್ದ ಸಿದ್ಧತೆಯು CUET ಪರೀಕ್ಷೆಗೆ ಭದ್ರ ಅಡಿಪಾಯ ಒದಗಿಸಿತು. NCERT ಪಠ್ಯಪುಸ್ತಕಗಳನ್ನು ಮುಖ್ಯವಾಗಿ ಅವಲಂಬಿಸಿದ್ದ ಅವರು, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯಾಸ ಮಾಡಿದ್ದರು.

ಭವಿಷ್ಯದ ಅಭ್ಯರ್ಥಿಗಳು ಹಲವು ಅಧ್ಯಯನ ಮೂಲಗಳನ್ನು ಅವಲಂಬಿಸುವ ಬದಲು NCERT ಪಠ್ಯಗಳ ಮೂಲಕ ವಿಷಯಗಳ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಅತಿಯಾದ ಒತ್ತಡವು ಸಾಧನೆ ಮತ್ತು ಆತ್ಮವಿಶ್ವಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಶಾಂತ ಮನಸ್ಥಿತಿ ಹಾಗೂ ತಮ್ಮ ಸಿದ್ಧತೆಯ ಮೇಲಿನ ನಂಬಿಕೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುಖ್ಯ ಎಂದು ಅವರು ಹೇಳಿದ್ದಾರೆ.

CUET ಪರೀಕ್ಷೆಯಲ್ಲಿ ಕೇವಲ ಕಂಠಪಾಠ ಸಾಕಾಗುವುದಿಲ್ಲ. ವಿಷಯದ ಬಗ್ಗೆ ಸ್ಪಷ್ಟ ಅರಿವು ಮತ್ತು ನಿರಂತರ ಅಭ್ಯಾಸ ಅಗತ್ಯ. ಇಡೀ ದಿನ ಓದುವುದಕ್ಕಿಂತ ನಿಯಮಿತ ಮನನ ಹೆಚ್ಚು ಪರಿಣಾಮಕಾರಿ ಎಂದು ದೇವೀನಾ ಅಭಿಪ್ರಾಯಪಟ್ಟಿದ್ದಾರೆ.

CUET–UG 2026 ಪರೀಕ್ಷೆಗೆ 15.68 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಅವರಲ್ಲಿ ಸುಮಾರು 11.64 ಲಕ್ಷ ಅಭ್ಯರ್ಥಿಗಳು ಮೇ ಮತ್ತು ಜೂನ್ ತಿಂಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ಪರೀಕ್ಷೆಗೆ ಹಾಜರಾಗಿದ್ದರು.

ಜೂನ್ 23ರಂದು ಪ್ರಕಟವಾದ ಫಲಿತಾಂಶಗಳ ಆಧಾರದ ಮೇಲೆ ಕೇಂದ್ರ, ರಾಜ್ಯ, ಡೀಮ್ಡ್ ಹಾಗೂ ಖಾಸಗಿ ಸಂಸ್ಥೆಗಳು ಸೇರಿದಂತೆ 280ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಪದವಿ ಕೋರ್ಸ್‌ ಗಳಿಗೆ ಪ್ರವೇಶ ನೀಡಲಾಗುತ್ತದೆ.