ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನಕ್ಕೆ ಎಂ.ಎ.ಗಫೂರ್ ಸಂತಾಪ

ಮಂಗಳೂರು: ಮಂಗಳೂರಿನ ಖಾಝಿಯಾಗಿ ಸೇವೆ ಸಲ್ಲಿಸಿದ್ದ ಧಾರ್ಮಿಕ ನಾಯಕ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಸಮಸ್ತ ಸಮಾಜಕ್ಕೂ ಅಪಾರ ನಷ್ಟವನ್ನುಂಟು ಮಾಡಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಜೊತೆಗೆ,  ಸಾಮಾಜಿಕ ಕಾರ್ಯದಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. 

ದಕ್ಷಿಣ ಕನ್ನಡ-ಉಡುಪಿ  ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ದೀರ್ಘಕಾಲ ಧಾರ್ಮಿಕ ಮಾರ್ಗದರ್ಶನ ನೀಡಿದ ಮುಸ್ಲಿಯಾರ್ ಅವರು ತಮ್ಮ ಜೀವನವನ್ನೆಲ್ಲಾ ಧರ್ಮ, ಶಿಕ್ಷಣ ಹಾಗೂ ಸಮಾಜ ಸೇವೆಗೆ ಸಮರ್ಪಿಸಿ ಸಾವಿರಾರು ಜನರಿಗೆ ದಾರಿದೀಪರಾಗಿದ್ದರು. ಅವರ ಸರಳತೆ, ಆಳವಾದ ಜ್ಞಾನ ಹಾಗೂ ಸಮನ್ವಯದ ಮನೋಭಾವವು ಎಲ್ಲರಿಗೂ ಪ್ರೇರಣೆಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

ನಮ್ಮೆಲ್ಲರ ಕಣ್ಮಣಿಯಾಗಿದ್ದ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರಿಗೆ ಜನ್ನತುಲ್ ಫಿರ್ದೌಸ್‌ನಲ್ಲಿ ಅಲ್ಲಾಹು  ಉನ್ನತ ಸ್ಥಾನ ನೀಡಲಿ ಹಾಗೂ ಅವರ ಕುಟುಂಬಸ್ಥರು, ಶಿಷ್ಯರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.