ಜೂನ್ 26: ಎನ್‌ಆರ್‌ಐ ಸಚಿವಾಲಯವನ್ನು ತಕ್ಷಣ ಜಾರಿಗೊಳಿಸಿ, ಡಾ.ಆರತಿ ಕೃಷ್ಣರನ್ನು ಸಚಿವರಾಗಿ ನೇಮಿಸುವಂತೆ ಆಗ್ರಹಿಸಿ ಜಾಗತಿಕ ಟ್ವಿಟರ್ (X) ಅಭಿಯಾನ

ಬೆಂಗಳೂರು: ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಯಾಗಿರುವ ಎನ್‌ಆರ್‌ಐ ಸಚಿವಾಲಯವನ್ನು ತಕ್ಷಣ ಜಾರಿಗೆ ತರಬೇಕು ಹಾಗೂ ಡಾ. ಆರತಿ ಕೃಷ್ಣ ಅವರನ್ನು ಎನ್‌ಆರ್‌ಐ ಸಚಿವರಾಗಿ ಕೂಡಲೇ ನೇಮಕ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಅನಿವಾಸಿ ಒಕ್ಕೂಟದ ವತಿಯಿಂದ ಜೂನ್ 26ರ ಶುಕ್ರವಾರ ಜಾಗತಿಕ ಮಟ್ಟದಲ್ಲಿ ಟ್ವಿಟರ್ (X) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಈ ಟ್ವಿಟರ್ (X) ಅಭಿಯಾನಕ್ಕೆ ಜಗತ್ತಿನ ಮೂಲೆಮೂಲೆಯಲ್ಲಿರುವ ಕನ್ನಡಿಗರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ತಾಣಗಳಲ್ಲಿ ನಾಳಿನ ಅಭಿಯಾನಕ್ಕೆ ಇಂದೇ ಟ್ರೆಂಡ್ ಆರಂಭವಾಗಿದ್ದು, ಇತಿಹಾಸ ಸೃಷ್ಟಿಸಲು ಕ್ಷಣಗಣನೆ ಆರಂಭವಾಗಿದೆ.

ವಿಶ್ವದಾದ್ಯಂತ ನೆಲೆಸಿರುವ ಲಕ್ಷಾಂತರ ಅನಿವಾಸಿ ಕನ್ನಡಿಗರ ಹಿತರಕ್ಷಣೆ ಹಾಗೂ ಅವರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದಲ್ಲಿ ಪ್ರತ್ಯೇಕ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ತಕ್ಷಣವೇ ಸ್ಥಾಪನೆಮಾಡಬೇಕು ಹಾಗು ಡಾ. ಆರತಿ ಕೃಷ್ಣ ಅವರನ್ನು ಎನ್‌ಆರ್‌ಐ ಸಚಿವರಾಗಿ ಕೂಡಲೇ ನೇಮಕ ಮಾಡಬೇಕೆಂಬುದೇ ಈ ಅಭಿಯಾನದ ಪ್ರಮುಖ ಎರಡು ಬೇಡಿಕೆಯಾಗಿದ್ದು, ಜಾಗತಿಕ ಕನ್ನಡ ಪರ ಸಂಘಗಳು-ಸಂಸ್ಥೆಗಳು ಈ ಅಭಿಯಾನದಲ್ಲಿ ಕೈಜೋಡಿಸಲಿವೆ. 

ವಿಶ್ವದಾದ್ಯಂತ ನೆಲೆಸಿರುವ ಲಕ್ಷಾಂತರ ಅನಿವಾಸಿ ಕನ್ನಡಿಗರು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಧ್ವನಿಯನ್ನು ಸರ್ಕಾರದ ಗಮನಕ್ಕೆ ತಲುಪಿಸುವಂತೆ ಒಕ್ಕೂಟ ಮನವಿ ಮಾಡಿದೆ.

ಈ ಅಭಿಯಾನದ ಮೂಲಕ ರಾಜ್ಯ ಸರ್ಕಾರವು ಅನಿವಾಸಿ ಕನ್ನಡಿಗರ ಸಮಸ್ಯೆಗಳು, ಹಕ್ಕುಗಳು ಹಾಗೂ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಿ ಪ್ರತ್ಯೇಕ ಎನ್‌ಆರ್‌ಐ ಸಚಿವಾಲಯವನ್ನು ಕೂಡಲೇ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ಎನ್‌ಆರ್‌ಐ ಸಮುದಾಯದ ಪರವಾಗಿ ಕಾರ್ಯನಿರ್ವಹಿಸಿರುವ ಡಾ. ಆರತಿ ಕೃಷ್ಣ ಅವರಿಗೆ ಎನ್‌ಆರ್‌ಐ ಸಚಿವರ ಜವಾಬ್ದಾರಿಯನ್ನು ನೀಡಬೇಕೆಂದು ಆಗ್ರಹಿಸಲಾಗಿದೆ.

ಜೂನ್ 26ರಂದು ಸಂಜೆ 6 ಗಂಟೆಗೆ (ಭಾರತೀಯ ಕಾಲಮಾನ) ನಡೆಯಲಿರುವ ಈ ಅಭಿಯಾನದಲ್ಲಿ ವಿಶ್ವದಾದ್ಯಂತ ಇರುವ ಅನಿವಾಸಿ ಕನ್ನಡಿಗರು ಹಾಗೂ ಕನ್ನಡಾಭಿಮಾನಿಗಳು ಟ್ವಿಟರ್ (X) ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸುವಂತೆ ಕರ್ನಾಟಕ ಅನಿವಾಸಿ ಒಕ್ಕೂಟ ಕರೆ ನೀಡಿದೆ.