ಮಂಗಳೂರಿನ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿಯವರು ಇತ್ತೀಚೆಗೆ ಬಿಡುಗಡೆ ಮಾಡಿದ ಸಾರ್ವಜನಿಕ ಜಾಗೃತಿ ವೀಡಿಯೋವನ್ನು ವಾಟ್ಸಪ್ ನಲ್ಲಿ ನೋಡಲು ಸಾಧ್ಯವಾಯಿತು; ಇದು ಬಹಳ ಉತ್ತಮವಾದ ಮತ್ತು ಸಮಯೋಚಿತವಾದ ಸಂದೇಶ.
ಇದು ಅನಧಿಕೃತ ಟ್ರಾವೆಲ್ ಮತ್ತು ವೀಸಾ ಏಜೆಂಟರ ಮೂಲಕ ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳುವವರಿಗೆ, ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಾಜ್ಯದ ಜನರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.
ಕರಾವಳಿ ಕರ್ನಾಟಕ, ರಾಜ್ಯ ಹಾಗೂ ದೇಶದ ಇತರ ಕಡೆಗಳಿಂದ ವಿದೇಶಗಳಿಗೆ, ಅದರಲ್ಲೂ ಗಲ್ಫ್ ರಾಷ್ಟಗಳಿಗೆ, ಹೋಗುವ ಅನೇಕ ಯುವಕ-ಯುವತಿಯರಿಗೆ ವಿದೇಶ ಉದ್ಯೋಗವೆಂದರೆ ಕೇವಲ ಉದ್ಯೋಗವಲ್ಲ; ಅದು ಆರ್ಥಿಕ ಸ್ಥಿರತೆ, ಕುಟುಂಬದ ಕಲ್ಯಾಣ, ಮಕ್ಕಳ ಶಿಕ್ಷಣ ಮತ್ತು ಉತ್ತಮ ಭವಿಷ್ಯದ ಕನಸಾಗಿದೆ.
ಆದರೆ, ಕನಸುಗಳಿರುವ ಎಲ್ಲೆಡೆ ವಂಚಕರೂ ಕಾಣಿಸಿಕೊಳ್ಳುವುದು ಒಂದು ನಗ್ನಸತ್ಯ!. ಅನಧಿಕೃತ ಏಜೆಂಟರು ಉದ್ಯೋಗಾಕಾಂಕ್ಷಿಗಳ ಆಸೆ-ಆಕಾಂಕ್ಷೆಗಳನ್ನು ದುರುಪಯೋಗಪಡಿಸಿಕೊಂಡು, ಆಕರ್ಷಕ ಸಂಬಳ, ಖಚಿತ ಉದ್ಯೋಗ, ಗ್ಯಾರಂಟಿ ವೀಸಾ ಹಾಗೂ ತ್ವರಿತ ಪ್ರಕ್ರಿಯೆಯ ಭರವಸೆಗಳನ್ನು ನೀಡುತ್ತಾರೆ.
ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಗುಂಪುಗಳು, ವೈಯಕ್ತಿಕ ಪರಿಚಯಗಳು ಅಥವಾ ಸ್ನೇಹಿತರ ಶಿಫಾರಸುಗಳ ಮೂಲಕ ಅನೇಕರು ಇವರ ಬಲೆಗೆ ಬೀಳುತ್ತಾರೆ.
ವೀಸಾ ಶುಲ್ಕ, ಸೇವಾ ಶುಲ್ಕ ಅಥವಾ ಮುಂಗಡ ಪಾವತಿ ಎಂಬ ಹೆಸರಿನಲ್ಲಿ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲಾಗುತ್ತದೆ. ಬಳಿಕ ವಾಗ್ದಾನ ಮಾಡಲಾದ ಉದ್ಯೋಗವೇ ಅಸ್ತಿತ್ವದಲ್ಲಿಲ್ಲ ಎಂಬುದು ತಿಳಿಯುವಷ್ಟರಲ್ಲಿ ಏಜೆಂಟ್ ನಾಪತ್ತೆಯಾಗಿರುತ್ತಾನೆ ಅಥವಾ ಸಂಪರ್ಕಕ್ಕೆ ಸಿಗುವುದಿಲ್ಲ.
ಮಾನ್ಯ ಕಮಿಷನ್ ರವರು ಹೇಳಿದ ಪ್ರಕಾರ, ಕೆಲವೊಮ್ಮೆ ಪೋಲಿಸರು ಇಂಥ ಅಪರಾಧ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ಬಂಧಿಸಿದರೂ, ವಂಚನೆಗೆ ಒಳಗಾದವರ ಹಣವನ್ನು ಮರಳಿ ಪಡೆಯುವುದು ಬಹಳ ಕಷ್ಟಸಾಧ್ಯ. ಅನೇಕ ಕುಟುಂಬಗಳಿಗೆ ಈ ನಷ್ಟವು ವರ್ಷಗಳ ಉಳಿತಾಯ, ಸಾಲ ಅಥವಾ ಅಡಮಾನ ಇಟ್ಟ ಆಸ್ತಿಯ ಮೌಲ್ಯ ವಾಗಿರುತ್ತದೆ.
ಇದಕ್ಕೆ ಹೋಗುವವರು ಐಟಿ, ಇಂಜಿನಿಯರಿಂಗ್, ಎಕೌಂಟೆಂಟ್, ಆಫಿಸ್ ಅಡಿಮಿನಿಸ್ಟ್ರೇಷನ್…ಮುಂತಾದ ಉದ್ಯೋಗಾಕಾಂಕ್ಷಿಗಳು ಒಂದಡೆಯಾದರೆ, ಇನ್ನೊಂದೆಡೆ ಹೆಚ್ಚಿನವರು ಸಾಮಾನ್ಯ ಜನರು, ವಿಶೇಷವಾಗಿ ಚಾಲಕರು, ಮನೆಕೆಲಸದ ಮಹಿಳೆಯರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮುಂತಾದವರಾಗಿರುತ್ತಾರೆ.
ಕಾನೂನು ಕ್ರಮಕ್ಕಿಂತ ಮುನ್ನೆಚ್ಚರಿಕೆಯೇ ಉತ್ತಮ ಎನ್ನುವಂತೆ, ಇಂಥ ಉದ್ಯೋಗಾಕಾಂಕ್ಷಿಗಳು ಈ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದುದು ಅತ್ಯಗತ್ಯ.
ಪೊಲೀಸ್ ತನಿಖೆಗಳು ಮತ್ತು ನ್ಯಾಯಾಲಯದ ಪ್ರಕ್ರಿಯೆಗಳು ಅಪರಾಧಿಗಳಿಗೆ ಶಿಕ್ಷೆ ನೀಡಬಹುದು. ಆದರೆ ಕಳೆದುಹೋದ ಮೊತ್ತ, ಅವಕಾಶಗಳು, ಮಾನಸಿಕ ನೋವು ಮತ್ತು ಆರ್ಥಿಕ ಸಂಕಷ್ಟಗಳನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗುವುದಿಲ್ಲ.
ಉದ್ಯೋಗಾಕಾಂಕ್ಷಿಗಳು ಕೇವಲ ಮಾತಿನ ಭರವಸೆಗಳು, ಸಾಮಾಜಿಕ ಜಾಲತಾಣದ ಜಾಹೀರಾತುಗಳು ಅಥವಾ ಅನೌಪಚಾರಿಕ ಶಿಫಾರಸುಗಳ ಮೇಲೆ ಅವಲಂಬಿಸಬಾರದು.
ಯಾವುದೇ ಹಣ ಪಾವತಿಸುವ ಮೊದಲು ಅಥವಾ ದಾಖಲೆಗಳನ್ನು ಸಲ್ಲಿಸುವ ಮೊದಲು, ವೀಸಾ ಏಜನ್ಸಿಗಳು ಅಧಿಕೃತ ಅನುಮತಿ ಹೊಂದಿದೆಯೇ ಮತ್ತು ಉದ್ಯೋಗದ ಅವಕಾಶ ನಿಜವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಇನ್ನು ಇಂಥ ಏಜಂಟರಿಂದಾಗಿಯೇ, ಕರ್ನಾಟಕದ ದಾವಣಗೆರೆ, ಬೀದರ್, ಮದ್ದೂರು, ಬೆಂಗಳೂರು, ತುಮಕೂರು ಹಾಗೂ ಕೆಲವು ಕರಾವಳಿ ಭಾಗಗಳ ಜನರು ವಿದೇಶಗಳಿಗೆ ಬಂದು ತೀವ್ರಸಂಕಷ್ಟ ಅನುಭವಿಸಿದ ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ.
ಕೆಲವು ಸರಳ ಮುನ್ನೆಚ್ಚರಿಕೆಗಳು ವಂಚನೆಯ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು:
👉ನೇಮಕಾತಿ ಸಂಸ್ಥೆಯ ಅಧಿಕೃತ ಮಾನ್ಯತೆಯನ್ನು ಪರಿಶೀಲಿಸುವುದು;
👉ಎಲ್ಲಾ ದಾಖಲೆಗಳು ಮತ್ತು ರಸೀದಿಗಳನ್ನು ಲಿಖಿತ ರೂಪದಲ್ಲಿ ಪಡೆಯುವುದು;
👉ಸಾಧ್ಯವಾದಷ್ಟು ನಗದು ವ್ಯವಹಾರಗಳನ್ನು ತಪ್ಪಿಸಿ, ಬ್ಯಾಂಕ್ ವ್ಯವಹಾರದ ಮೂಲಕ ಪಾವತಿಮಾಡುವುದು;
👉ಉದ್ಯೋಗ ಒಪ್ಪಂದವನ್ನು ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಂಡ ನಂತರವೇ ಸಹಿ ಮಾಡುವುದು;
👉ಅಧಿಕೃತ ಮೂಲಗಳ ಮೂಲಕ ಉದ್ಯೋಗದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು;
👉ಅನುಮಾನ ಇದ್ದಲ್ಲಿ ಅನುಭವಿಗಳ ಹಾಗೂ ಸಮುದಾಯ ಸಂಘಟನೆಗಳ ಸಲಹೆ ಪಡೆಯುವುದು.
ವಿದೇಶೀ ಉದ್ಯೋಗ ನೇಮಕಾತಿ ವಂಚನೆ ವಿರುದ್ಧದ ಹೋರಾಟವನ್ನು ಕೇವಲ ಪೊಲೀಸ್ ಇಲಾಖೆ ಅಥವಾ ಸರ್ಕಾರದ ಹೊಣೆಗಾರಿಕೆಯಾಗಿ ಪರಿಗಣಿಸಲಾಗದು.
ಸಮುದಾಯ ಸಂಘಟನೆಗಳು, ವಿದೇಶಿ ಭಾರತೀಯರ/ಕನ್ನಡಿಗ ಸಂಘಗಳು, ಧಾರ್ಮಿಕ- ಶಿಕ್ಷಣ ಸಂಸ್ಥೆಗಳು ಹಾಗೂ ಮಾಧ್ಯಮಗಳು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಬೇಕು.
ವಂಚನೆಗೆ ಒಳಗಾದ ಅನೇಕರು ಸಾಮಾಜಿಕ ಮುಜುಗರ ಅಥವಾ ಭಯದಿಂದ ದೂರು ನೀಡಲು ಹಿಂಜರಿಯುತ್ತಾರೆ. ಆದರೆ ಸಮಯೋಚಿತ ದೂರುಗಳು ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಳ್ಳಲು ಹಾಗೂ ಮತ್ತಷ್ಟು ಜನರು ವಂಚನೆಯ ಬಲೆಗೆ ಬೀಳುವುದನ್ನು ತಡೆಯಲು ಸಹಕಾರಿಯಾಗುತ್ತವೆ.
ನೇಮಕಾತಿ ವಂಚನೆ ಕೇವಲ ಆರ್ಥಿಕ ಅಪರಾಧವಲ್ಲ. ಅದರ ಹಿಂದೆ ಉತ್ತಮ ಭವಿಷ್ಯದ ಕನಸಿಗಾಗಿ ಆಸ್ತಿ ಮಾರಿದ, ಸಾಲ ಮಾಡಿದ ಅಥವಾ ಜೀವನಪೂರ್ತಿ ಉಳಿಸಿದ ಹಣವನ್ನು ಹೂಡಿಕೆ ಮಾಡಿದ ಕುಟುಂಬಗಳ ನೋವು ಅಡಗಿದೆ.
ಈ ಕನಸುಗಳು ಭಗ್ನವಾದಾಗ ಅದರ ಪರಿಣಾಮ ಕೇವಲ ಹಣದ ನಷ್ಟಕ್ಕೆ ಸೀಮಿತವಾಗಿರುವುದಿಲ್ಲ. ಸಾಲದ ಹೊರೆ, ಮಾನಸಿಕ ಒತ್ತಡ, ಸಾಮಾಜಿಕ ಒತ್ತಡ ಮತ್ತು ಜೀವನದ ಅಮೂಲ್ಯ ಅವಕಾಶಗಳ ನಷ್ಟವೂ ಜೊತೆಯಾಗಿರುತ್ತದೆ.
ಈ ನಿಟ್ಟಿನಲ್ಲಿ, ಮಂಗಳೂರು ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ ಯವರು ನೀಡಿರುವ ಜಾಗೃತಿ ಸಂದೇಶವು ಪೊಲೀಸ್ ವ್ಯವಸ್ಥೆಯ ಮಹತ್ವವನ್ನು ಒತ್ತಿಹೇಳುವ ಶ್ಲಾಘನೀಯ ಪ್ರಯತ್ನವಾಗಿದೆ.
ಅಪರಾಧ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ಜನರು ಬಲಿಯಾಗುವ ಮೊದಲು ಅವರನ್ನು ಜಾಗೃತಗೊಳಿಸುವುದು ಹೆಚ್ಚು ಪರಿಣಾಮಕಾರಿ. ವಿದೇಶ ವಲಸೆ ಇನ್ನೂ ಅನೇಕ ಭಾರತೀಯ ಕುಟುಂಬಗಳ ಆರ್ಥಿಕ ಜೀವನಾಡಿಯಾಗಿರುವ ಈ ಸಂದರ್ಭದಲ್ಲಿ, ಇಂತಹ ಜಾಗೃತಿ ಸಂದೇಶಗಳು ನಿಜಕ್ಕೂ ಪ್ರಸ್ತುತವಾಗಿವೆ.

