ಕಟಪಾಡಿ; ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ನೀಡದೆ ಪರಾರಿ; ಮೂವರು ಆರೋಪಿಗಳ ಬಂಧನ

ಉಡುಪಿ: ಕಟಪಾಡಿ ಕುರ್ಕಾಲು ಗ್ರಾಮದ ಸುಭಾಸ್ ನಗರದಲ್ಲಿರುವ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಜೂನ್ 27ರಂದು ರಾತ್ರಿ ಸುಮಾರಿಗೆ ಕಾರಿನಲ್ಲಿ ಬಂದ ಮೂವರು ಆರೋಪಿಗಳು ಕಾರಿಗೆ ₹4,711.09 ಮೌಲ್ಯದ ಡೀಸೆಲ್ ತುಂಬಿಸಿಕೊಂಡಿದ್ದರು. ಬಳಿಕ QR ಕೋಡ್ ಸ್ಕ್ಯಾನ್ ಮಾಡಿ ಬಿಲ್ ನೀಡುವಂತೆ ಸಿಬ್ಬಂದಿಗೆ ಹೇಳಿ, ಹಣ ಪಾವತಿಸುವಂತೆ ನಂಬಿಸಿ ಯಾವುದೇ ಹಣ ನೀಡದೇ ಕಾರಿನಲ್ಲಿ ಪರಾರಿಯಾಗಿದ್ದರು.

ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ BNS 2023ರ ಕಲಂ 316(2) ಮತ್ತು 318(4) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಕಳ ಪೊಲೀಸ್ ಉಪಾಧೀಕ್ಷಕ ವಿಜಯ ಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಅವರ ಮಾರ್ಗದರ್ಶನದಲ್ಲಿ, ಶಿರ್ವ ಠಾಣೆಯ ಉಪನಿರೀಕ್ಷಕ ಮಂಜುನಾಥ ಮರಬದ ನೇತೃತ್ವದ ತಂಡ ಬೆಂಗಳೂರಿನಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ. ಕೃತ್ಯಕ್ಕೆ ಬಳಸಿದ್ದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿರ್ವ ಗ್ರಾಮದ ಕೋಟೆಕಾರ್ ನಿವಾಸಿ ಮಹಮ್ಮದ್ ರಿಯಾಜ್ (26), ಶಿರ್ವ ಗ್ರಾಮದ ಭೂತಬೆಟ್ಟು ನಿವಾಸಿ ಮಹಮ್ಮದ್ ಅಫ್ರಾಜ್ (23) ಹಾಗೂ ಅಂಬಾಗಿಲು ನಿವಾಸಿ ಆಶಿಲ್ (21) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಇದೇ ರೀತಿಯ ವಂಚನೆ ಪ್ರಕರಣಗಳಲ್ಲಿ ಇವರ ಭಾಗವಹಿಸುವಿಕೆ ಇದೆಯೇ ಎಂಬ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.