ಹರಿಹರದಲ್ಲಿ ಪತಿಯ ತಲೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಪತ್ನಿ; ಸಾಥ್ ನೀಡಿದ ಮಗ; ಕಾರಣವೇನು ಗೊತ್ತೇ...?

ದಾವಣಗೆರೆ: ಮಹಿಳೆಯೊಬ್ಬಳು ಪತಿಯ ತಲೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಘಟನೆ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಈ ಕೃತ್ಯ ಜೂ.23 ರಂದು ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯ ಕಿರುಕುಳ ತಾಳಲಾರದೆ, ಪತ್ನಿಯೇ ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕೊಲೆಯಾದ ದುರ್ದೈವಿ ಪತಿಯನ್ನು 43 ವರ್ಷದ ಶಿವಪ್ಪ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಸಾವಿತ್ರಿ(40), ಪತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದು, ಇದಕ್ಕೆ ಪುತ್ರ ಹನುಮೇಗೌಡ ಸಹ ಸಾಥ್ ನೀಡಿದ್ದಾನೆ. ತಾಯಿ, ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಪ್ಪ, ಪ್ರತಿದಿನ ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಇಡೀ ಕುಟುಂಬ ಮಾನಸಿಕವಾಗಿ ಜರ್ಜರಿತವಾಗಿತ್ತು. ದಿನೇ ದಿನೇ ಹೆಚ್ಚಾಗುತ್ತಿದ್ದ ಶಿವಪ್ಪನ ಕಾಟ ತಾಳಲಾರದೇ ಪತ್ನಿ ಸಾವಿತ್ರಿ, ಶಿವಪ್ಪನ ತಲೆ ಮೇಲೆ ಕಲ್ಲು ಎತ್ತಿಹಾಕಿ ಅತ್ಯಂತ ಕ್ರೂರವಾಗಿ ಕೊಂದಿದ್ದಾಳೆ.

ಇನ್ನು ತಾಯಿ ಸಾವಿತ್ರಿ ಪತಿಯನ್ನು ಕೊಲೆ ಮಾಡಿದ ಬಳಿಕ, ವಿಷಯ ಮುಚ್ಚಿಡಲು ಮಗ ಹನುಮೇಗೌಡ ಸಾಥ್ ನೀಡಿದ್ದಾನೆ. ತಂದೆಯ ಶವವನ್ನು ಮನೆಯಿಂದ ಬೇರೆಡೆಗೆ ಸಾಗಿಸಿ ಸಾಕ್ಷ್ಯ ನಾಶಪಡಿಸಲು ತಾಯಿಗೆ ಸಂಪೂರ್ಣವಾಗಿ ಸಹಾಯ ಮಾಡಿದ್ದಾನೆ. ಆದರೆ ಪೊಲೀಸರ ತನಿಖೆ ವೇಳೆ ಇವರಿಬ್ಬರ ಪಾಪದ ಕೃತ್ಯ ಬಯಲಾಗಿದೆ.

ಈ ಘಟನೆಯ ಮಾಹಿತಿ ತಿಳಿದ ತಕ್ಷಣ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮನೆಯ ಹಿಂದೆ ರಕ್ತಸಿಕ್ತವಾಗಿ ಬಿದ್ದಿದ್ದ ಶಿವಪ್ಪ ಅವರ ಶವವನ್ನು ಕಂಡು ಪೊಲೀಸರು ಆಘಾತಗೊಂಡರು. ಸ್ಥಳಕ್ಕೆ ಸುಕೋ ಟೀಮ್, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಲಾಯಿತು.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ತನಿಖೆಯ ವೇಳೆ ಪತ್ನಿ ಮತ್ತು ಪುತ್ರ ಸೇರಿ ಕೊಲೆಗೈದಿರುವುದು ಪತ್ತೆಯಾಗಿದೆ. ಪೊಲೀಸರು ಸಾವಿತ್ರಿ ಮತ್ತು ಹನುಮೇಗೌಡ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.