ಫುಜೈರಾದಲ್ಲಿ ಭೀಕರ ರಸ್ತೆ ಅಪಘಾತ: 14 ಮಂದಿ ಸಾವು, 30 ಜನರಿಗೆ ಗಾಯ; 23 ವಾಹನಗಳ ಸರಣಿ ಡಿಕ್ಕಿ; ಟ್ರಕ್‌ಗೆ ಬೆಂಕಿ ತಗುಲಿ ಹಲವು ವಾಹನಗಳಿಗೆ ವ್ಯಾಪಿಸಿದ ಜ್ವಾಲೆ

ಫುಜೈರಾ: ಯುಎಇಯ ಫುಜೈರಾದ ಶೇಖ್ ಖಲೀಫಾ ಬಿನ್ ಝಾಯೆದ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದು, 30 ಜನರು ಗಾಯಗೊಂಡಿದ್ದಾರೆ. 

ನಿಯಂತ್ರಣ ತಪ್ಪಿದ ಟ್ರಕ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಈ ಭೀಕರ ದುರಂತ ಸಂಭವಿಸಿದೆ. ರಾತ್ರಿ ಸಂಭವಿಸಿದ ಅಪಘಾತದ ಬಳಿಕ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡು, ಜ್ವಾಲೆ ಇತರ ವಾಹನಗಳಿಗೂ ವ್ಯಾಪಿಸಿದೆ ಎಂದು ಫುಜೈರಾ ಪೊಲೀಸರು ತಿಳಿಸಿದ್ದಾರೆ.

ಮೊದಲು ಟ್ರಕ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಂಚಾರ ದಟ್ಟಣೆಯಿಂದಾಗಿ ನಿಧಾನವಾಗಿ ಚಲಿಸುತ್ತಿದ್ದ ಅಥವಾ ನಿಂತಿದ್ದ ಹಲವು ಕಾರುಗಳಿಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸಮೀಪದಲ್ಲಿದ್ದ ಹಲವು ವಾಹನಗಳಿಗೂ ಬೆಂಕಿ ವ್ಯಾಪಿಸಿ ಭಾರೀ ಪ್ರಮಾಣದ ಪ್ರಾಣಹಾನಿ ಸಂಭವಿಸಿದೆ.

ಫುಜೈರಾ ನಗರದ ಪ್ರವೇಶ ದ್ವಾರದ ಸಮೀಪ ಈ ಅಪಘಾತ ಸಂಭವಿಸಿದೆ ಎಂದು ಫುಜೈರಾ ಪೊಲೀಸ್ ಜನರಲ್ ಕಮಾಂಡ್ ತಿಳಿಸಿದೆ.

ಸ್ಥಳಕ್ಕೆ ಧಾವಿಸಿದ ತುರ್ತು ರಕ್ಷಣಾ ತಂಡಗಳು

ಅಪಘಾತದ ಕುರಿತು ಪೊಲೀಸ್ ಕಾರ್ಯಾಚರಣೆ ಕೊಠಡಿಗೆ ತುರ್ತು ಮಾಹಿತಿ ಲಭಿಸಿದ ತಕ್ಷಣ ವಿಶೇಷ ಪೊಲೀಸ್ ತಂಡಗಳು, ಆಂಬ್ಯುಲೆನ್ಸ್ ಹಾಗೂ ರಕ್ಷಣಾ ಸಿಬ್ಬಂದಿ ಮತ್ತು ನಾಗರಿಕ ರಕ್ಷಣಾ ಇಲಾಖೆಯ (ಸಿವಿಲ್ ಡಿಫೆನ್ಸ್) ತಂಡಗಳು ಸ್ಥಳಕ್ಕೆ ಧಾವಿಸಿದವು.

ರಕ್ಷಣಾ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವುದರ ಜತೆಗೆ ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ಸಾಗಿಸಿದರು. ಅಪಘಾತದ ಸ್ಥಳವನ್ನು ಭದ್ರಪಡಿಸಿ, ಇತರ ವಾಹನ ಸವಾರರಿಗೆ ತೊಂದರೆಯಾಗದಂತೆ ಸಂಚಾರ ವ್ಯವಸ್ಥೆಯನ್ನೂ ನಿಯಂತ್ರಿಸಲಾಯಿತು.

ದುರಂತದ ಸಂದರ್ಭದಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿದ ತುರ್ತು ರಕ್ಷಣಾ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡಗಳ ಸೇವೆಯನ್ನು ಫುಜೈರಾ ಪೊಲೀಸರು ಶ್ಲಾಘಿಸಿದ್ದಾರೆ.

15 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಅಪಘಾತದಲ್ಲಿ ಗಾಯಗೊಂಡಿದ್ದ 30 ಮಂದಿಯ ಪೈಕಿ 15 ಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 15 ಮಂದಿ ಆರೋಗ್ಯ ಸ್ಥಿತಿಯನ್ನು ಆಧರಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ಮೃತರಲ್ಲಿ ಯುಎಇ ಪ್ರಜೆಗಳೂ ಸೇರಿದ್ದಾರೆ. ಇನ್ನುಳಿದ ಕೆಲವು ಮೃತರ ಗುರುತು ಪತ್ತೆಹಚ್ಚಲು ಅಧಿಕಾರಿಗಳು ಡಿಎನ್‌ಎ ಪರೀಕ್ಷೆಯ ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.