ಅಕ್ರಮ ಜಾನುವಾರು ಸಾಗಾಟ ಪ್ರಕರಣ: ಪಿಕಪ್ ವಾಹನ ಸೇರಿದಂತೆ ನಾಲ್ವರ ಬಂಧನ

 

ಕೋಟ: ಮಾಂಸಕ್ಕಾಗಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದು ಕೋಟ ಪೊಲೀಸರು ನಾಲ್ವರನ್ನು ಬಂಧಿಸಿರುವ ಘಟನೆ ಅ.13ರಂದು ರಾತ್ರಿ 9 ಗಂಟೆಯ ಸುಮಾರಿಗೆ ತೆಕ್ಕಟ್ಟೆ ಜಂಕ್ಷನ್ ಬಳಿ ನಡೆದಿದೆ.

ಬಂಧಿತರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಮೋಟಾಲದ ಪುನಿತ್ (27), ಕೋಲಾರ ಜಿಲ್ಲೆಯ ಬಾಗೇಪಲ್ಲಿಯ ಗಣೇಶ (26), ಚಿಕ್ಕಬಳ್ಳಾಪುರದ ಕೃಷ್ಣಪ್ಪ (40) ಹಾಗೂ ಅದೇ ಜಿಲ್ಲೆಯ ಶ್ರೀನಿವಾಸ (56) ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನದಲ್ಲಿ ಐದು ದನ ಹಾಗೂ ಎರಡು ಕರುಗಳು ಸೇರಿದಂತೆ ಒಟ್ಟು ಏಳು ಜಾನುವಾರುಗಳನ್ನು ಹಿಂಸಾತ್ಮಕ ವಾಗಿ, ಕುತ್ತಿಗೆಗೆ ನೈಲಾನ್ ಹಗ್ಗ ಕಟ್ಟಿ, ಆಹಾರ ಮತ್ತು ನೀರು ನೀಡದೆ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೋಟ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಆರ್. ಅವರಿಗೆ ದೊರೆತ ಖಚಿತ ಮಾಹಿತಿಯಂತೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕೊಟೇಶ್ವರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಬುಲೆರೋ ಪಿಕಪ್ ವಾಹನವನ್ನು ಕಂಡು ಅನುಮಾನಗೊಂಡು ತಪಾಸಣೆಗೆ ಮುಂದಾದಾಗ, ವಾಹನದಲ್ಲಿದ್ದ ನಾಲ್ವರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.ಅವರನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸಿದ್ದಾರೆ.

ಪೊಲೀಸರು 2 ಲಕ್ಷ ರೂ. ಮೌಲ್ಯದ ಪಿಕಪ್ ವಾಹನ, ಒಟ್ಟು 29,000 ರೂ. ಮೌಲ್ಯದ ಏಳು ಜಾನುವಾರುಗಳು, ಎರಡು ಮೊಬೈಲ್‌ಗಳು ಹಾಗೂ 1,850 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 2,33,850 ರೂ.ಗಳಾಗಿವೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ, ಪ್ರಾಣಿ ಹಿಂಸೆ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.