ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಹತ್ಯೆ; ಸಹೋದರ ಅನಿಲ್ ಪ್ರಶಾಂತ್ ಕುಂದರ್ ಹೇಳುವುದೇನು...?

ಕುಂದಾಪುರ: ಕಳೆದ ಡಿಸೆಂಬರ್‌ನಲ್ಲಿ ಪತ್ನಿ, ಮಗನ ಜೊತೆ ರಜೆಯಲ್ಲಿ ಊರಿಗೆ ಬಂದಿದ್ದು ನಮ್ಮ ಕುಟುಂಬದೊಂದಿಗೆ ಸಂಬಂಧಿಕರ ಊರಿಗೆ ಚಿಕ್ಕ ಪ್ರವಾಸ ಮಾಡಿದ್ದೆವು. ಬಿಡುವಾದಾಗ ಕರೆ ಮಾಡಿ ಮಾತನಾಡುತ್ತಿದ್ದರೂ ಕೂಡ ಅವರ ಕೌಟುಂಬಿಕ‌ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಸೌಮ್ಯ ಸ್ವಭಾವದ ತಮ್ಮನ ಭೀಕರ ಕೊಲೆ ಮನಸ್ಸಿಗೆ ಘಾಸಿಯಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಶಾರ್ಜಾದಲ್ಲಿ ಕೊಲೆಯಾದ ಆಲ್ವಿನ್ ಪ್ರಕಾಶ್ ಕುಂದರ್ ಹಿರಿಯ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಹೇಳಿದ್ದಾರೆ.

ಮೂಲತಃ ಉಡುಪಿ ಕೊರಂಗ್ರಪಾಡಿ ನಿವಾಸಿಗಳಾಗಿದ್ದ ದಿವಂಗತ ಶೀಲಾ ಕುಂದರ್ ತೇಜಪಾಲ್ ಕುಂದರ್ ದಂಪತಿಯ ಪುತ್ರರಾಗಿದ್ದಾರೆ ಆಲ್ವಿನ್ ಪ್ರಕಾಶ್. ಶೀಲಾ ಅವರು ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಪ್ ‌ನರ್ಸ್ ಆಗಿದ್ದು ವರ್ಗಾವಣೆ ಗೊಂಡ ಈ ಕುಟುಂಬ ಕುಂದಾಪುರಕ್ಕೆ ಬಂದು ನೆಲೆಸಿತ್ತು. ಆಲ್ವಿನ್ ತಾಯಿ ಕುಂದಾಪುರದ ವಿವಿದೆಡೆಯ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಕುಂದಾಪುರದ ಹೊನ್ನನಕೇರಿ ಎಂಬಲ್ಲಿ ಕುಟುಂಬ ಸ್ವಂತ ಮನೆ ಮಾಡಿದ್ದು ಸದ್ಯ ಆಲ್ವಿನ್ ಸಹೋದರ ಅನಿಲ್ ಪ್ರಶಾಂತ್, ಸಹೋದರಿ, ಸಹೋದರಿ ಪುತ್ರಿ ನೆಲೆಸಿದ್ದಾರೆ.

20 ವರ್ಷಗಳ ಹಿಂದೆ ಉದ್ಯಾವರದ ಬಲಾಯಿಪಾದೆ ಮೂಲದ ಟೀನಾ ಎನ್ನುವರನ್ನು ಆಲ್ವಿನ್ ಪ್ರಕಾಶ್ ಕುಂದರ್ ವಿವಾಹವಾಗಿದ್ದರು. ಇವರ ಇಬ್ಬರು ಪುತ್ರರ ಪೈಕಿ ಓರ್ವ ಪುತ್ರ ಅನಾರೋಗ್ಯದಿಂದ ಮೃತಪಟ್ಟ ಬಳಿಕ ದಂಪತಿ 10ನೇ ತರಗತಿ ಓದುತ್ತಿರುವ ಪುತ್ರನೊಂದಿಗೆ ನೆಲೆಸಿದ್ದರು. ಟೀನಾ ಶಾರ್ಜಾದಲ್ಲಿ ಶಿಕ್ಷಕಿ ವೃತ್ತಿಯಲ್ಲಿದ್ದರು.

50 ವರ್ಷ ಪ್ರಾಯದ ಆಲ್ವಿನ್ ಪ್ರಕಾಶ್ ಕುಂದರ್ ಕುಂದಾಪುರದ ಪ್ರತಿಷ್ಟಿತ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಬಳಿಕ ಮಂಗಳೂರಿನಲ್ಲಿ ಉನ್ನತ ವ್ಯಾಸಂಗ ಪಡೆದು ಗೋವಾದಲ್ಲಿ ಕೆಲಸ ಮಾಡಿ ಅನುಭವ ಪಡೆದು ವಿದೇಶಕ್ಕೆ ತೆರಳಿದ್ದರು.

ಅಮೇರಿಕಾ, ರಷ್ಯಾ ಮೊದಲಾದೆಡೆ ವೃತ್ತಿ ಮಾಡಿ ಕಳೆದ 14 ವರ್ಷದಿಂದ ಶಾರ್ಜಾದಲ್ಲಿ ಸೀಮನ್ಸ್ ಎಂಬ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿ ಇಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್-2 ರಲ್ಲಿ ಸೀನಿಯರ್ ಇಂಜಿನಿಯರ್ ಆಗಿ ಪದೋನ್ನತಿ ಹೊಂದಿದ್ದರು.

ಆಲ್ವಿನ್ ಪ್ರಕಾಶ್ ಅವರ ಸಹೋದರ ಹೇಳುವುದೇನು..?

ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸಹೋದರ ಕುಟುಂಬ ಸಹಿತ ಊರಿಗೆ ಬರುತ್ತಿದ್ದ. ಆದರೆ ಈ ವರ್ಷ ಕ್ರೂರವಾಗಿ ಆತನ ಕೊಲೆಯಾಗಿದೆ. ಆತನ ಪತ್ನಿ, ಮಗ ಕಾಣೆಯಾಗಿದ್ದು ಸಿಕ್ಕ ಮಾಹಿತಿ ಪ್ರಕಾರ ಅವರು ದೆಹಲಿಗೆ ಬಂದಿದ್ದಾರೆ. ಮೇಲ್ನೋಟಕ್ಕೆ ಆಲ್ವಿನ್ ಪತ್ನಿಯ ಮೇಲೆ ಅನುಮಾನಗಳಿದೆ. ಈವರೆಗೆ ಆಕೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಆಕೆಯ ಮೇಲೆ ಅನುಮಾನ‌ ಬಲವಾಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದು ಆರೋಪಿಗಳಿಗೆ ಶಿಕ್ಷೆಯಾಗಬೇಕು. ಅಲ್ಲದೆ ಸಹೋದರನ ಮೃತಶರೀರ ಊರಿಗೆ ತರುವ ವ್ಯವಸ್ಥೆಗೆ ಸರಕಾರ, ಇಲಾಖೆ, ಸಂಬಂದಪಟ್ಟವರು ಸ್ಪಂದನೆ ನೀಡಬೇಕು. ಕುಂದಾಪುರದಲ್ಲಿ ತಂದೆ-ತಾಯಿ ಅಂತಿಮ ವಿಧಿ ನಡೆಸಿದ ಜಾಗದಲ್ಲೇ ಸಹೋದರನ ಅಂತ್ಯಕ್ರಿಯೆ ನಡೆಸುವ ಇರಾದೆಯಿದೆ ಎಂದು ಅನಿಲ್ ಪ್ರಶಾಂತ್ ಕುಂದರ್ (ಆಲ್ವಿನ್ ಪ್ರಕಾಶ್ ಸಹೋದರ) ತಿಳಿಸಿದ್ದಾರೆ.