1 ಸಾವಿರ ಮಂದಿಗೆ ಉಮ್ರಾ ಭಾಗ್ಯ ಘೋಷಿಸಿದ ಸಚಿವ ಝಮೀರ್ ಅಹ್ಮದ್ ಖಾನ್
ಮಂಗಳೂರು ಹಜ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ
ಮಂಗಳೂರು: ಮುಂದಿನ ಒಂದುವರೆ ವರ್ಷದೊಳಗೆ ಹಜ್ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಇದು ದೇಶದಲ್ಲೇ ವಿನೂತನ ಮಾದರಿಯ ಹಜ್ ಭವನವಾಗಲಿದೆ ಎಂದು ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಸೈಯದ್ ಝುಲ್ಫಿಕರ್ ಖಾನ್ ಹೇಳಿದ್ದಾರೆ.
ರಾಜ್ಯ ಹಜ್ ಸಮಿತಿಯ ವತಿಯಿಂದ ಮಂಗಳೂರು ವಿಮಾನ ನಿಲ್ದಾಣ ಸಮೀಪದ ಬಜ್ಪೆಯಲ್ಲಿ ನಿರ್ಮಾಣಗೊಳ್ಳ ಲಿರುವ ಮಂಗಳೂರು ಹಜ್ ಭವನಕ್ಕೆ ಗುರುವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರ 20 ಕೋ.ರೂ. ವೆಚ್ಚದಲ್ಲಿ ಹಜ್ ಭವನ ನಿರ್ಮಿಸಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 10 ಕೋ.ರೂ. ಬಿಡುಗಡೆಗೊಳಿಸಿದ್ದಾರೆ. 60,547 ಚ.ಅ. ವಿಸ್ತೀರ್ಣದ ಈ ಭವನವು ವಿನೂತನ ಮಾದರಿಯಿಂದ ಕೂಡಿರಲಿದೆ. ದೇಶದ ಎಲ್ಲೂ ಕೂಡ ಇಂತಹ ಭವನ ಇಲ್ಲ. ಇದಕ್ಕೆ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಯು.ಟಿ.ಖಾದರ್, ಝಮೀರ್ ಅಹ್ಮದ್ ಖಾನ್ ಮತ್ತು ಉದ್ಯಮಿ ಇನಾಯತ್ ಅಲಿ ಅವರ ಪರಿಶ್ರಮವಿದೆ ಎಂದು ಸೈಯದ್ ಝುಲ್ಫಿಕರ್ ಖಾನ್ ನುಡಿದರು.
ಈ ಬಾರಿ ಮಂಗಳೂರಿನಿಂದ ಹಜ್ ಯಾತ್ರೆಗೆ ಅವಕಾಶವಿಲ್ಲ. ಮುಂದಿನ ಬಾರಿ ಮಂಗಳೂರಿನಿಂದಲೇ ಹಜ್ ಯಾತ್ರೆ ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದ ಅವರು, ಕೆಲವು ಖಾಸಗಿ ಹಜ್ ಟೂರ್ ಸಂಸ್ಥೆಗಳು ಉಮ್ರಾ ಯಾತ್ರಾರ್ಥಿಗಳನ್ನು ವಂಚಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್‌ರ ನಿರ್ದೇಶನದ ಮೇರೆಗೆ ಹಜ್ ಸಮಿತಿಯ ವತಿಯಿಂದಲೇ ಉಮ್ರಾ ಯಾತ್ರೆ ಕೈಗೊಳ್ಳಲು ಸಿದ್ಧತೆ ಮಾಡಲಾಗುವುದು ಎಂದರು.
1 ಸಾವಿರ ಮಂದಿಗೆ ಉಮ್ರಾ ಭಾಗ್ಯ ಘೋಷಿಸಿದ ಸಚಿವ ಝಮೀರ್ ಅಹ್ಮದ್ ಖಾನ್
ಮುಂದಿನ ಜನವರಿಯಲ್ಲಿ 1 ಸಾವಿರ ಮಂದಿಯನ್ನು ಪವಿತ್ರ ಉಮ್ರಾಕ್ಕೆ ಕಳುಹಿಸಬೇಕೆಂದು ಈಗಾಗಲೇ ತೀರ್ಮಾನ ಮಾಡಿದ್ದೇನೆ. ಅದರಲ್ಲಿ 100 ಮಂದಿಯನ್ನು ಇನಾಯತ್ ಅಲಿ ಅವರ ಸುರತ್ಕಲ್ ಕ್ಷೇತ್ರದಿಂದ ಆಯ್ಕೆ ಮಾಡಲಿದ್ದೇನೆ. ಇನಾಯತ್ ಅಲಿಯವರು ನೀಡಿರುವ ಕೊಡುಗೆಯನ್ನು ಗುರುತಿಸಿ ನಾನು ಅವರ ಸುರತ್ಕಲ್ ಕ್ಷೇತ್ರದಿಂದ ಬಡವರ್ಗದ 100 ಮಂದಿ ಮೌಝಿನ್ ಹಾಗು ಇಮಾಮರನ್ನು ಆಯ್ಕೆ ಮಾಡಿ, ಉಮ್ರಾಕ್ಕೆ ಕಳುಹಿಸಲು ಬಯಸಿದ್ದೇನೆ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಘೋಷಿಸಿದರು.
ಮಂಗಳೂರಿನಲ್ಲಿ ಹಜ್ ಭವನ ನಿರ್ಮಿಸಬೇಕು ಎಂಬುದು ನಮ್ಮೆಲ್ಲರ ಕನಸಾಗಿತ್ತು. ಅದಕ್ಕಾಗಿ ಸಚಿವ ಯು.ಟಿ. ಖಾದರ್, ದಾನಿ ಇನಾಯತ್ ಅಲಿ, ಡಾ. ಯೆನೆಪೊಯ ಅಬ್ದುಲ್ಲ ಕುಂಞಿ ಅವರ ಜೊತೆ ತಾನು ಅನೇಕ ಸುತ್ತಿನ ಮಾತುಕತೆ ನಡೆಸಿದ್ದೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೊಡುಗೆಯೂ ಅಪಾರವಿದೆ. ಎಲ್ಲರ ಸಹಕಾರದಿಂದ ಹಜ್ ಭವನ ತಲೆ ಎತ್ತಲಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ದೇಶದ ಜನತೆ ಒಗ್ಗೂಡಿ ಬದುಕಿದರೆ ನೆಮ್ಮದಿ ಕಾಣಲು ಸಾಧ್ಯವಿದೆ. ದೇಶವೂ ಅಭಿವೃದ್ಧಿಗೊಳ್ಳಲಿದೆ. ಬಿಜೆಪಿಗರು ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಕೋಮುಶಕ್ತಿಯನ್ನು ಹಿಮ್ಮೆಟ್ಟಿಸುವ ಕೆಲಸವನ್ನು ನಾಡಿನ ಜನತೆ ಮಾಡಬೇಕು ಎಂದು ಕರೆ ನೀಡಿದರು.
ರಾಜ್ಯ ಹಜ್ ಮತ್ತು ವಕ್ಫ್ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು. ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್ ದುಆಗೈದರು. ದ.ಕ.ಜಿಲ್ಲಾ ಖಾಝಿ ಪಾಣಕ್ಕಾಡ್ ಸೈಯದ್ ನಾಸಿರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ಬಾ-ಅಲವಿ ತಂಙಳ್, ಉಡುಪಿ ಸಂಯುಕ್ತ ಖಾಝಿ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್, ರಾಜ್ಯಸಭೆ ಸದಸ್ಯ ಮನ್ಸೂರ್ ಅಲಿ ಖಾನ್ ಶುಭ ಹಾರೈಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಸೀರ್ ಅಹ್ಮದ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹ್ಮದ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಹುಸೇನಿ, ರಾಜ್ಯ ಅಲ್ಪ ಸಂಖ್ಯಾತರ ನಿಗಮದ ಅಧ್ಯಕ್ಷ ಬಿ.ಕೆ. ಅಲ್ತಾಫ್ ಖಾನ್, ವಿವಿಧ ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಉಳ್ಳಾಲ, ಮೆಸ್ಕಾ ಅಧ್ಯಕ್ಷ ಹರೀಶ್ ಕುಮಾರ್, ಕರ್ನಾಟಕ ರಾಜ್ಯ ಹಜ್ ಸಮಿತಿಯ ಸಿಇಒ ಜೀಲಾನಿ ಎಚ್. ಮೊಕಾಶಿ, ರಾಜ್ಯ ಹಜ್ ಸಮಿತಿಯ ಸದಸ್ಯರಾದ ಸೈಯದ್ ಅಶ್ರಫ್ ತಂಙಳ್ ಆದೂರು, ಮೌಲಾನ ಸೈಯದ್ ಮುಹಮ್ಮದ್ ರಾಝ, ವಸೀದ್ ಅಲಿ ಖಾನ್, ಸಮೀಯುಲ್ಲಾ ಮಡಿವಾಲೆ, ಶೇಖ್ ಮುಹಮ್ಮದ್ ಸೈಯದ್, ಸೈಯದ್ ಮುಜಾಹಿದ್, ಸೈಯದ್ ಶಾಹಿದ್ ಅಹ್ಮದ್, ಸೈಯದ್ ಮನ್ಸೂರ್ ಅಹ್ಮದ್ ಖಾದ್ರಿ, ಸೈಯದ್ ಮುಝಮ್ಮಿಲ್, ರಾಜ್ಯಸಭೆಯ ಮಾಜಿ ಸದಸ್ಯ ಬಿ. ಇಬ್ರಾಹೀಂ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವ, ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷರಾದ ಯೆನೆಪೊಯ ಮುಹಮ್ಮದ್ ಕುಂಞಿ, ಎಸ್.ಎಂ. ರಶೀದ್ ಹಾಜಿ, ಯು.ಕೆ.ಕಣಚೂರು ಮೋನು ಹಾಜಿ, ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಬಿ.ಜಿ. ಹನೀಫ್, ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಪ್ರಮುಖರಾದ ಹಾಜಿ ಸಿ. ಮಹ್ಮೂದ್, ಮುಹಮ್ಮದ್ ಹನೀಫ್ ಹಾಜಿ, ಮಾಜಿ ಮೇಯರ್ ಕೆ. ಅಶ್ರಫ್, ನಿವೃತ್ತ ಡಿಸಿಪಿ ಜಿ.ಎ.ಬಾವ, ದ.ಕ.ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್, ಡಿಸಿಸಿ ಅಧ್ಯಕ್ಷ ಪದ್ಮರಾಜ್ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಸೈಯದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ ಹಾಜಿ.ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ಸ್ವಾಗತಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಉದ್ಯಮಿ ಹಾಗೂ ಹಜ್ ಭವನ ನಿರ್ಮಾಣಕ್ಕೆ ಜಮೀನು ದಾನಗೈದ ಇನಾಯತ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಜ್ಪೆ ಈದ್ಗಾ ಮಸೀದಿಯ ಖತೀಬ್ ಹಾರಿಸ್ ಸಖಾಫಿ ಕಿರಾಅತ್ ಪಠಿಸಿದರು. ನಿಝಾಮ್ ಅನ್ಸಾರಿ ಕಲ್ಲಡ್ಕ ಮತ್ತು ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ದಾನಿ ಇನಾಯತ್ ಅಲಿಗೆ ಸನ್ಮಾನ
ಈ ಸಂದರ್ಭ ಹಜ್ ಭವನ ನಿರ್ಮಾಣಕ್ಕೆ ಜಮೀನು ದಾನ ಮಾಡಿದ ಉದ್ಯಮಿ ಇನಾಯತ್ ಅಲಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಮಂಗಳೂರಿನಲ್ಲಿ ಹಜ್ ಭವನ ನಿರ್ಮಿಸಬೇಕು ಎಂಬುದು ನಮ್ಮೆಲ್ಲರ ಕನಸಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಝಮೀರ್ ಅಹ್ಮದ್ ಖಾನ್, ಯು.ಟಿ.ಖಾದರ್ ಮತ್ತು ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಯೆನೆಪೊಯ ಅಬ್ದುಲ್ಲ ಕುಂಞಿ ವಿಶೇಷ ಅಸ್ಥೆ ವಹಿಸಿದ್ದರು. ಅವರ ಸಹಕಾರಕ್ಕೆ ನಾವೆಲ್ಲ ಅಭಾರಿಯಾಗಿದ್ದೇವೆ ಎಂದರು.







