ತುಮಕೂರು: ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಮಾಡಿಕೊಂಡ ದಯಾಮರಣ ಕೋರಿದ್ದ ಮಹಿಳೆ!

ತುಮಕೂರು: ದಯಾಮರಣ ಕೋರಿದ್ದ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು  ಜಿಲ್ಲೆ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ.

ತಾಯಿ ರಾಬಿಯಾ ಪಾಷಾ (39), ಮಗಳು ತಮನ್ನಾ (9), ಮಗ ಸಿಮ್ರಾನ್ (5) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಘಟನೆ ಸಂಬಂಧ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಸ್ಪಿ ಅಶೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

2025ರಲ್ಲಿ ತುಮಕೂರಿನಲ್ಲಿ ನಡೆದ ಸರ್ಕಾರದ ವಿವಿಧ ಸವಲತ್ತು ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದ ಅಂದಿನ ಸಿಎಂ ಸಿದ್ದರಾಮಯ್ಯರ ಬಳಿ ರಾಬಿಯಾ ತನ್ನ ಮನವಿ ಆಲಿಸುವಂತೆ ಹೋರಾಟ ನಡೆಸಿದ್ದರು. ರಾಬಿಯಾ ಮನವಿಗೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ 20/30 ನಿವೇಶನ ಮಂಜೂರು ಮಾಡಿದ್ದರು. 

ಸಿಎಂ ಆದೇಶ ನೀಡಿ ಒಂದೂವರೆ ವರ್ಷ ಕಳೆದಿದ್ದರು ನಿವೇಶನ ನೀಡದೆ ಅಧಿಕಾರಿಗಳು ಸತಾಯಿಸಿದ್ದರು. ಇದರಿಂದ ರೋಸಿಹೋದ ರಾಬಿಯಾ ಅಂದಿನ ಗೃಹಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ಜನಸ್ಪಂದನ ಸಭೆಯಲ್ಲೂ ರಂಪಾಟ ಮಾಡಿದ್ದರು. ಸಿಎಂ ಆದೇಶ ಮಾಡಿದ್ರೂ ನನಗೆ ನಿವೇಶನ ಕೊಟ್ಟಿಲ್ಲ ಎಂದು ದಯಾಮರಣ ಕೋರಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಳು. 

ಆಗ ಮಹಿಳೆ ಕರೆಸಿ ಸಮಸ್ಯೆ ಆಲಿಸಿದ್ದ ಅಂದಿನ ಗೃಹಸಚಿವ ಡಾ.ಜಿ ಪರಮೇಶ್ವರ್ ಶಿರಾ ನಗರದ ಹೊರವಲಯದಲ್ಲಿ ಸರ್ಕಾರದಿಂದ ಒಂದು ನೀವೇಶನ ನೀಡಿದ್ದರು. ಸರ್ಕಾರ ಜಾಗ ಕೊಟ್ಟು ಮನೆ ಕಟ್ಟಿಸಿ ಕೊಡುತಿದ್ದರೂ, ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇನ್ನು ಸ್ಪಷ್ಟಗೊಂಡಿಲ್ಲ.