ಡೇವಿಡ್ ಡಿ'ಸೋಜಾ ಹತ್ಯೆಯ ಬಗ್ಗೆ ಪತ್ನಿ ಪ್ರಿಯಾ ಡೇವಿಡ್ ಹೇಳಿದ್ದೇನು...?

ಉಡುಪಿ: ಮುದರಂಗಡಿಯಲ್ಲಿ ಶೂಟೌಟ್ ನಿಂದ ಹತ್ಯೆಗೀಡಾದ ಕಾಂಗ್ರೆಸ್ ಮುಖಂಡ ಮತ್ತು ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿ'ಸೋಜಾ ಅವರ ಪತ್ನಿ ಪ್ರಿಯಾ ಡೇವಿಡ್, ತಮ್ಮ ಪತಿಯ ಹಠಾತ್‌ ಸಾವಿನಿಂದ ಆಘಾತಕ್ಕೊಳಗಾಗಿದ್ದು, ಕೊಲೆಯಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ಆಗಬೇಕು  ಎಂದು  ಒತ್ತಾಯಿಸಿದ್ದಾರೆ.

‘ಪತಿಯ ಸಾವು ನಮಗೆ ಆಕಸ್ಮಿಕ ಆಘಾತವಾಗಿದೆ. ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಅವರು ನಮ್ಮೊಂದಿಗೆ ಹೇಳಿಕೊಂಡಿರಲಿಲ್ಲ’ ಎಂದು ಹತ್ಯೆಗೀಡಾದ ಡೇವಿಡ್ ಡಿಸೋಜ ಅವರ ಪತ್ನಿ ಪ್ರಿಯಾ ಡೇವಿಡ್ ಹೇಳಿದರು.

‘ಪ್ರತಿದಿನದಂತೆ ಶುಕ್ರವಾರ ಊಟ ಮುಗಿಸಿ ಕಚೇರಿಗೆ ತೆರಳಿದ್ದರು. ಗುಂಡಿನ ದಾಳಿ ನಡೆದಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಪತಿ ಕುಟುಂಬಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ’ ಎಂದು ಅವರು ಹೇಳಿದರು.

‘ಪತಿಯ ಮೇಲೆ ಗುಂಡು ಹಾರಿಸಿ ರಕ್ತ ಚೆಲ್ಲಿದವರಿಗೂ ಅದೇ ರೀತಿಯ ಶಿಕ್ಷೆಯಾಗಬೇಕು. ಪೊಲೀಸರು ಶೀಘ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದು ಸ್ವಲ್ಪ ನೆಮ್ಮದಿ ತಂದಿದೆ. ಆರೋಪಿಗಳು ಹಾಗೂ ಈ ಸಂಚಿನಲ್ಲಿ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು’ ಎಂದು ಅವರು ಆಗ್ರಹಿಸಿದರು.

‘ಉದ್ಯಮಿಯಾಗಿ ಹಾಗೂ ರಾಜಕಾರಣಿಯಾಗಿ ಡೇವಿಡ್ ಅವರು ಊರಿನ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದರು. ಅವರ ಹಠಾತ್ ಸಾವಿನಿಂದ ಕುಟುಂಬಕ್ಕೆ ತೀವ್ರ ಆಘಾತವಾಗಿದೆ’ ಎಂದು ಪ್ರಿಯಾ ಡೇವಿಡ್ ತಿಳಿಸಿದ್ದಾರೆ. 

ಆಗಸ್ಟ್ 9 ರಂದು ಬೆಳಿಗ್ಗೆ 10.45 ಕ್ಕೆ ಕಾಪುವಿನ ರಾಜೀವ್ ಭವನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ 

ಆಗಸ್ಟ್ 9 ರ ಭಾನುವಾರ ಸಾರ್ವಜನಿಕ ದರ್ಶನ ಮತ್ತು ಅಂತ್ಯಕ್ರಿಯೆ ನಡೆಯಲಿದೆ. ಆಗಸ್ಟ್ 9 ರ ಭಾನುವಾರ ಬೆಳಿಗ್ಗೆ 10.45 ಕ್ಕೆ ಕಾಪುವಿನ ರಾಜೀವ್ ಭವನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು, ನಂತರ ಬೆಳಿಗ್ಗೆ 11.15 ಕ್ಕೆ ಮುದರಂಗಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಲಾಗುವುದು. ನಂತರ ಮಧ್ಯಾಹ್ನ 12 ಗಂಟೆಗೆ ಪಿಲಾರ್‌ನ ಕುಂಜಿಗುಡ್ಡೆ ಕಾಲೋನಿಗೆ ಮತ್ತು ಮಧ್ಯಾಹ್ನ 12.30 ಕ್ಕೆ ಪಿಲಾರ್‌ನ ಪ್ರಿನ್ಸ್ ಪಾಯಿಂಟ್ ಹೌಸ್‌ಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು.

ಅಂತ್ಯಕ್ರಿಯೆಯ ಮೆರವಣಿಗೆ ಮಧ್ಯಾಹ್ನ 2.45 ಕ್ಕೆ ನಿವಾಸದಿಂದ ಪಿಲಾರ್‌ನ ಇನ್ಫೆಂಟ್ ಜೀಸಸ್ ಚರ್ಚ್‌ಗೆ ಹೊರಡಲಿದೆ. ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ ಚರ್ಚ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ. ನಂತರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ಮತ್ತು ಅಂತಿಮ ಗೌರವ ಸಲ್ಲಿಸಲಾಗುವುದು.