ಬಿ.ಸಿ.ರೋಡ್‌ ನಲ್ಲಿ ನಡೆದ ಯುವತಿಯ ಹತ್ಯೆಗೆ ಕಾರಣ ಇಲ್ಲಿದೆ....ಬಸ್ ನಿಲ್ದಾಣದಲ್ಲಿ ನಡೆದಿದ್ದೇನು...?

ಬಿ.ಸಿ.ರೋಡ್‌(ಮಂಗಳೂರು): ಬಿ.ಸಿ.ರೋಡ್‌ KSRTC ಬಸ್‌ ನಿಲ್ದಾಣದ ಬಳಿ ಗುರುವಾರ ಸಂಜೆ ಸಾರ್ವಜನಿಕರ ಮುಂದೆಯೇ ನಡೆದ ಯುವತಿ ಲಾವಣ್ಯ ಹತ್ಯೆಯ ಆರೋಪಿಯನ್ನು ಗುರುತಿಸಲಾಗಿದೆ.

ಈ ರಾಕ್ಷಸಿ ಕೃತ್ಯವನ್ನು ಎಸಗಿದ ಆರೋಪಿಯನ್ನು ಚೇತನ್​ ಎಂದು ಗುರುತಿಸಲಾಗಿದ್ದು, ಆರೋಪಿ ಚೇತನ್​ ಮೃತ ಲಾವಣ್ಯಗೆ ಸಂಬಂಧಿ ಎಂಬ ಮಾಹಿತಿ ಲಭ್ಯವಾಗಿದೆ. 

ಒನ್​ ಸೈಡ್​​ ಪ್ರೀತಿಯಿಂದಾಗಿ (One Side Love) ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಚೇತನ್ ಪತ್ತೆಗೆ ಪೊಲೀಸರು ಈಗಾಗಲೇ ಬಲೆ ಬೀಸಿದ್ದಾರೆ.

ಕಕ್ಕೆ ಪದವು ಸಮೀಪದ ಕೊಡಂಗೆಯ ನಿವಾಸಿ ಬಾಳಪ್ಪ ಅವರ ಪುತ್ರಿ ಲಾವಣ್ಯ (25) ಕಲ್ಲಡ್ಕದ ನರ್ಸಿಂಗ್ ಹೋಮ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಗುರುವಾರ ಸಂಜೆ  ಬಿಸಿರೋಡ್ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ.

ಈ ಕೃತ್ಯ ನಡೆಯುವ ಮುನ್ನ ಯುವತಿ ತನ್ನ ಸಂಬಂಧಿಕರೊಬ್ಬರಿಗೆ ಮೊಬೈಲ್ ಕರೆ ಮಾಡಿ, ತನ್ನ ಪಕ್ಕದಲ್ಲಿಯೊಬ್ಬ ಯುವಕನಿದ್ದಾನೆ, ಆತ ನನ್ನನ್ನೇ ದುರ್ಗುಟ್ಟಿ ನೋಡುತ್ತಿದ್ದಾನೆ ಎಂದು ಹೇಳಿ ಕರೆ ಕಟ್ ಮಾಡಿದ್ದಾಳೆ ಎನ್ನಲಾಗಿದೆ.

ಇನ್ನೊಂದು ಕಡೆ ಬಸ್ ನಿಲ್ದಾಣದಲ್ಲಿದ್ದವರ ಪ್ರಕಾರ, ಹಂತಕ ಯುವತಿಗಾಗಿ ಬಸ್ ನಿಲ್ದಾಣದಲ್ಲಿಯೇ ಕಾರಿನಲ್ಲಿ ಬಂದು ಕಾಯುತ್ತಿದ್ದ. ಆಕೆ ಬಸ್ ಹತ್ತುವುದನ್ನೇ ಕಾಯುತ್ತಿದ್ದ ಆರೋಪಿ ಚೇತನ್​, ಬಸ್ಸಿನೊಳಗೆ ನುಗ್ಗಿದ್ದಾನೆ. ಈ ವೇಳೆ ಲಾವಣ್ಯ ತಪ್ಪಿಸಿಕೊಳ್ಳಲು ಬಸ್ಸಿನಿಂದ ಇಳಿದು ಓಡಿ ಹೋಗುವಿಕೆ ವೇಳೆ ಬೆನ್ನಟ್ಟಿ ತಾನು ತಂದಿದ್ದ ಮಾರಾಕಾಸ್ತ್ರದಿಂದ ದಾಳಿ ನಡೆಸಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಹಲ್ಲೆ ನಡೆಸುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ಬೆಚ್ಚಿ ಬೀಳಿಸುವಂತಿದ್ದು, ಘಟನೆ ಸಂಬಂಧ ಪೊಲೀಸರು ಕೇಸ್​ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

SP ಡಾ.ಅರುಣ್ ಕುಮಾರ್ ಹೇಳಿದ್ದೇನು...?

ಸ್ಥಳಕ್ಕೆ ಭೇಟಿ ನೀಡಿದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಪರಿಶೀಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ, ಯುವತಿಯೊಬ್ಬಳು ಬಸ್‌ ಗೆ ಕಾಯುತ್ತಿದ್ದಾಗ ಯಾರೋ ಒಬ್ಬ ಯುವಕ ಬಂದು ಚಾಕುವಿನಿಂದ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಬಂದಿದೆ. ತಕ್ಷಣ ಇಲ್ಲಿದ್ದವರು ಯುವತಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಹಿನ್ನಲೆ ವಿಶೇಷ ತಂಡಗಳನ್ನು ನೇಮಿಸಿ ಆರೋಪಿಯನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.