ವರದಕ್ಷಿಣೆಗಾಗಿ ಪತ್ನಿ, ಮಾವನ ಮೇಲೆ ಹಲ್ಲೆಗೆ ಯತ್ನ: ಪೊಲೀಸ್‌ ಅಧಿಕಾರಿ ಅರೆಸ್ಟ್‌

ಬೆಂಗಳೂರು: ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬ ಪತ್ನಿಯ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಪೊಲೀಸಪ್ಪನನ್ನು ಈಗ ಬಂಧಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಭೈರಪ್ಪನನ್ನು ಪತ್ನಿಯ ಮೇಲೆ ಮಚ್ಚಿನಿಂದ ಭೀಕರ ಹಲ್ಲೆ ನಡೆಸಲು ಮುಂದಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿಯೊಬ್ಬರಿಗೆ 50 ಲಕ್ಷ ರೂ. ಬೇಡಿಕೆಯಿಟ್ಟು ಲೋಕಾಯುಕ್ತ ಟ್ರ‍್ಯಾಪ್‌ಗೆ ಒಳಗಾಗಿ ಸಸ್ಪೆಂಡ್ ಆಗಿದ್ದ ಪಿಎಸ್‌ಐ (PSI) ಇದೀಗ ಪತ್ನಿ ಮತ್ತು ಮಾವನ ಮೇಲೆಯೇ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ.

ಪಿಎಸ್‌ಐ ಬೈರಪ್ಪ ವಿರುದ್ಧ ವಕೀಲೆಯಾಗಿರುವ ಪತ್ನಿ ಗಂಭೀರ ಆರೋಪಗಳನ್ನು ಮಾಡಿದ್ದು, ನಗರ ಪೊಲೀಸ್ ಆಯುಕ್ತರು ಹಾಗೂ ಡಿಜಿಗೆ ದೂರು ನೀಡಲು ಮುಂದಾಗಿದ್ದಾರೆ. 

ಕಳೆದ ಕೆಲವು ಸಮಯದಿಂದ ಪಿಎಸ್ಐ ಭೈರಪ್ಪ ತಮ್ಮ ಪತ್ನಿಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕೌಟುಂಬಿಕ ಕಲಹ ತಾರಕಕ್ಕೇರಿದಾಗ, ಪಿಎಸ್ಐ ಭೈರಪ್ಪ ಮನೆಯಲ್ಲಿದ್ದ ಮಚ್ಚನ್ನು ಹಿಡಿದು ಪತ್ನಿ ಮತ್ತು ಮಾವನ ಮೇಲೆ ಹಲ್ಲೆಗೆ ಮುಂದಾಗಿದ್ದನು. ಹಲ್ಲೆಯ ಬೆನ್ನಲ್ಲೇ ಸಂತ್ರಸ್ತೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಆರಂಭದಲ್ಲಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಇನ್ನು ಪ್ರಾಥಮಿಕ ತನಿಖೆಯಲ್ಲಿ ಕಿರುಕುಳ, ಹಲ್ಲೆ ನಡೆಸಿದ್ದು ಬಯಲಾಗುತ್ತಿದ್ದಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಭೈರಪ್ಪನನ್ನು ಬಂಧಿಸಿದ್ದಾರೆ.