ನಾಸಿಕ್: ಟಿಸಿಎಸ್ ಲೈಂಗಿಕ ಕಿರುಕುಳ ಹಾಗೂ ಬಲವಂತದ ಮತಾಂತರ ಆರೋಪ ಪ್ರಕರಣದಲ್ಲಿ ಆರೋಪಿ ಹಾಗೂ ಗರ್ಭಿಣಿ ನಿದಾ ಖಾನ್‌ಗೆ ಸ್ಥಳೀಯ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಂಸ್ಥೆಗೆ ಸಂಬಂಧಿಸಿದ ಲೈಂಗಿಕ ಕಿರುಕುಳ ಹಾಗೂ ಆರೋಪಿತ ಧರ್ಮಾಂತರ ಪ್ರಕರಣದಲ್ಲಿ ಆರೋಪಿ ನಿದಾ ಖಾನ್ ಅವರಿಗೆ ನಾಸಿಕ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯ ನಿದಾ ಖಾನ್ ಅವರಿಗೆ 75,000 ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಒಬ್ಬ ಶ್ಯೂರಿಟಿ ಷರತ್ತಿನೊಂದಿಗೆ ಜಾಮೀನು ನೀಡಿತು.
ಆರೋಪಿ ಗರ್ಭಿಣಿ ಎಂಬ ಕಾರಣ ನೀಡಿ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಜೈಲಿನಲ್ಲಿ ಹೆರಿಗೆ ಯಾವುದೇ ಮಹಿಳೆಗೆ ಅಸಹನೀಯ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಇದೇ ವೇಳೆ ಕೋರ್ಟ್ ಭಗವಾನ್ ಶ್ರೀಕೃಷ್ಣನ ಜನನದ ಸಂದರ್ಭವನ್ನು ಉಲ್ಲೇಖಿಸಿ ನ್ಯಾಯಾಲಯ ಹೋಲಿಕೆ ಮಾಡಿದ್ದು, "ಭಗವಾನ್ ಶ್ರೀಕೃಷ್ಣನ ಜನನದ ಸಂದರ್ಭದಂತೆ ಜೈಲಿನಲ್ಲಿ ಮಗುವಿಗೆ ಜನ್ಮ ನೀಡಬೇಕಾಗುವ ನೋವು ಹಾಗೂ ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಯಾವುದೇ ಮಹಿಳೆ ಸಹಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ.ಜಿ. ಜೋಶಿ ತಮ್ಮ ಆದೇಶದಲ್ಲಿ, ತನಿಖೆಯ ಒಟ್ಟಾರೆ ವರದಿಯ ಪ್ರಕಾರ ನಿದಾ ಖಾನ್ ಸಹ-ಆರೋಪಿಗಳ ನೆರವಿನಿಂದ ಸಂತ್ರಸ್ತರ ಬ್ರೇನ್‌ವಾಶ್ ಗೆ ಪ್ರಯತ್ನಿಸಿದ್ದಾಳೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಸಂತ್ರಸ್ತೆಯ ವೈಚಾರಿಕ ನಿಲುವು ಹಾಗೂ ಧರ್ಮವನ್ನು ಬದಲಾಯಿಸಲು ಯತ್ನಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಲೈಂಗಿಕ ಕಿರುಕುಳ ಹಾಗೂ ಆರೋಪಿತ ಧರ್ಮಾಂತರ ಪ್ರಕರಣದ ತನಿಖೆಯನ್ನು ಉಲ್ಲೇಖಿಸಿರುವ ನ್ಯಾಯಾಲಯ, "ಹಿಂದೂ ಧರ್ಮದಲ್ಲಿ ಆಕ್ಷೇಪಾರ್ಹ ಕಥೆಗಳಿವೆ" ಎಂದು ಸಂತ್ರಸ್ತರಿಗೆ ಮನವರಿಕೆ ಮಾಡಲು ಪ್ರಯತ್ನಿಸಲಾಗಿತ್ತು ಎಂದು ಆದೇಶದಲ್ಲಿ ದಾಖಲಿಸಿದೆ.
