'ಮುಲ್ಲಾಗಳಿಗೆ ಎದೆ ಸೀಳಿದ್ರೆ 3 ಅಕ್ಷರ ಬರಲ್ಲ' ; ಅವಹೇಳನಕಾರಿ ಹೇಳಿಕೆ ಸಿಟಿ ರವಿ ವಿರುದ್ಧ ಪೊಲೀಸ್‌ ಕೇಸ್‌: ನೋಟಿಸ್ ನೀಡಲು ಬಂದ ಪೊಲೀಸರ ವಿರುದ್ಧವೇ ಆಕ್ರೋಶ!

ಚಿಕ್ಕಮಗಳೂರು: ಅವಹೇಳನಕಾರಿ ಹೇಳಿಕೆ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿವಾರ ಪೊಲೀಸರು, ಚಿಕ್ಕಮಗಳೂರಿನ ಸಿಟಿ ರವಿ ಅವರ ಮನೆಗೆ ನೋಟಿಸ್ ನೀಡಲು ಬಂದ ವೇಳೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಚಿಕ್ಕಮಗಳೂರು ನಗರ ಠಾಣೆಯ ಇನ್ಸ್​ಪೆಕ್ಟರ್​ ಅಭಯ್ ಪ್ರಕಾಶ್ ಅವರು ಸಿಟಿ ರವಿ ಅವರಿಗೆ ನೋಟಿಸ್ ನೀಡಲು​ ಮುಂದಾಗಿದ್ದಾರೆ. ಆದರೆ ಸಿಟಿ ರವಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದು, ಬಳಿಕ 27 ರಂದು 11 ಗಂಟೆಗೆ ತನಿಖೆಗೆ ಬರುವಂತೆ ನೋಟಿಸ್​ ಅನ್ನು ಮನೆಯ ಗೋಡೆಗೆ ಅಂಟಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು, ನೋಟಿಸ್ ಕಿತ್ತೆಸೆದು ಪೊಲೀಸರಿಗೆ ಧಿಕ್ಕಾರ ಕೂಗಿದರು.

ಸಿ.ಟಿ. ರವಿ ಹೇಳಿದ್ದೇನು?

ಈ ವೇಳೆ ಪೊಲೀಸರ ಜತೆ ಮಾತನಾಡಿದ ಸಿ.ಟಿ. ರವಿ, ತಾವು ಮಾಡಿದ ಭಾಷಣದಲ್ಲಿ ಯಾವುದೇ ಸಮುದಾಯದ ವಿರುದ್ಧ ದ್ವೇಷ ಅಥವಾ ಅವಹೇಳನಕಾರಿ ಅಂಶಗಳಿಲ್ಲ. ನಾನು ಬೆಂಕಿ ಹಚ್ಚಲು ಬಂದ ವ್ಯಕ್ತಿಯ ಬಗ್ಗೆ ಮಾತನಾಡಿದ್ದೇನೆ. ಎಫ್‌ಐಆರ್‌ನಲ್ಲಿ ಮುಸ್ಲಿಂ ಸಮುದಾಯದ ಅವಹೇಳನ ಎಲ್ಲಿದೆ? ಎಂದು ಪ್ರಶ್ನಿಸಿದರು.

ಯಾರೇ ದೂರು ನೀಡಿದರೂ ತಕ್ಷಣ ಎಫ್‌ಐಆರ್‌ ದಾಖಲಿಸಿ ಬಂಧನ ಮಾಡುತ್ತೀರಾ? ದೂರು ನೀಡಿದವರು ಯಾರು, ದೂರಿನ ಸ್ವರೂಪ ಏನು ಎಂಬುದನ್ನು ಪರಿಶೀಲಿಸಬೇಕಲ್ಲವೇ? ನನ್ನ ಭಾಷಣದಲ್ಲಿ ‘ಧರ್ಮ’ ಎಂಬ ಪದವೇ ಇಲ್ಲ. ‘ಮುಲ್ಲಾ’ ಎಂದರೆ ‘ಮುಸ್ಲಿಂ’ ಎಂಬ ಅರ್ಥವೇ? ಬೆಂಕಿ ಹಚ್ಚಲು ಬಂದ ವ್ಯಕ್ತಿಯನ್ನು ಉಲ್ಲೇಖಿಸಿ ಮಾತನಾಡಿದ್ದೇನೆ. ನಾಳೆಯೂ ಅದನ್ನೇ ಹೇಳುತ್ತೇನೆ ಎಂದರು.

ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, “ನಾವು ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ದೂರು ನೀಡಿದ್ದೇವೆ. ಆ ಪ್ರಕರಣದಲ್ಲಿ ಎಷ್ಟು ಕ್ರಮ ಕೈಗೊಂಡಿದ್ದೀರಿ? ನಮ್ಮ ದೂರಿನ ಬಗ್ಗೆ ಏನು ಕ್ರಮವಾಗಿದೆ?” ಎಂದು ಪೊಲೀಸರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್, ನೋಟಿಸ್​ ನೀಡಲು ಬಂದಿದ್ದೇವೆ, ನಾವು ಬಂಧನ ಮಾಡಲು ಬಂದಿಲ್ಲ. ತನಿಖೆ ಮಾಡುತ್ತೇವೆ ಅಷ್ಟೇ ಎಂದರು. ಆದರೂ ಸುಮ್ಮನಾಗದ ಕಾರ್ಯಕರ್ತರು, ಪೊಲೀಸರನ್ನು ಸುತ್ತುವರೆದು ಪ್ರತಿಭಟನೆ ಮಾಡುತ್ತ ಧಿಕ್ಕಾರ ಕೂಗಿದ್ದಾರೆ. ಇದರಿಂದ ಕೋಪಗೊಂಡ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್, ಇಲ್ಲಿಯವರೆಗೆ ಯಾರು ಈ ತರಹ ಮಾಡಿಲ್ಲ. ಇದು ತಪ್ಪು. ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದೀರಿ ಎಂದು ಹೇಳಿ ಅಲ್ಲಿಂದ ತೆರಳಿದರು.

ದೇಶಾದ್ಯಂತ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ನೀಟ್ ಪತ್ರಿಕೆ ಸೋರಿಕೆ ಪ್ರತಿಭಟನೆಗಳ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಕರ್ನಾಟಕ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ. ಕೋಮು ವಿಷಯಗಳನ್ನು ನೀಟ್ ವಿವಾದಕ್ಕೆ ಎಳೆದು ತಂದಿದ್ದಕ್ಕಾಗಿ ರವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಫೆಡರೇಶನ್ ಸರ್ಕಾರವನ್ನು ಒತ್ತಾಯಿಸಿದೆ.  ಚಿಕ್ಕಮಗಳೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದ ನಿರ್ದೇಶನದ ಮೇರೆಗೆ ಚಿಕ್ಕಮಗಳೂರು ಪಟ್ಟಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 353(2) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಚಿಕ್ಕಮಗಳೂರಿನ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಾಸೀರ್ ಪಾಷಾ ಅವರು ದೂರು ದಾಖಲಿಸಿದ್ದಾರೆ.