ಬಿ.ಸಿ.ರೋಡ್(ಮಂಗಳೂರು): ಇಲ್ಲಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಯುವತಿ ಕಕ್ಕೆಪದವು ನಿವಾಸಿ ಲಾವಣ್ಯ (21) ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಆರೋಪಿ ಈ ಹೇಯ ಕೃತ್ಯ ಎಸಗಿದ್ದು, ಮಂಗಳೂರು ಹೊರವಲಯದ ವಾಮಂಜೂರು ಪಚ್ಚನಾಡಿ ಬಳಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮೃತ ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆ ಮತ್ತು ಆರೋಪಿ ಚೇತನ್ ಇಬ್ಬರೂ ದೂರದ ಸಂಬಂಧಿಗಳಾಗಿದ್ದು, ಯುವತಿಯನ್ನು ಆರೋಪಿ ಚೇತನ್ ಏಕಮುಖವಾಗಿ ಇಷ್ಟಪಡುತ್ತಿದ್ದ (One sided Love) ಎಂದು ಹೇಳಲಾಗಿತ್ತಿದೆ.
ಗುರುವಾರ (ಜು.16) ಸಂಜೆ ಸುಮಾರು 5.45 ಗಂಟೆಗೆ ಲಾವಣ್ಯ ಬಂಟ್ವಾಳದಿಂದ ಕಕ್ಕೆಪದವುಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ನಲ್ಲಿ ಕುಳಿತಿದ್ದಳು. ಈ ವೇಳೆ ಆರೋಪಿ ಆಕೆಯ ಪಕ್ಕದಲ್ಲಿ ಬಂದು ಕುಳಿತಿದ್ದ. ಇದನ್ನು ಗಮನಿಸಿದ ಯುವತಿ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, ತನಗೆ ನೀಡುತ್ತಿರುವ ಕಿರುಕುಳದ ಬಗ್ಗೆ ತಿಳಿಸಿದ್ದಳು. ಬಳಿಕ ಕರೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಲಾಗಿದೆ.
ಈ ವೇಳೆ ಆರೋಪಿ ಚೇತನ್ ನಿಂದ ತಪ್ಪಿಸಿಕೊಳ್ಳಲು ಲಾವಣ್ಯ ಬಸ್‌ನಿಂದ ಕೆಳಗಿಳಿದು ಓಡಿಹೋಗಲು ಯತ್ನಿಸಿದ್ದಾಳೆ. ತಕ್ಷಣ ಚೇತನ್ ಆಕೆಯನ್ನು ಬೆನ್ನಟ್ಟಿದ್ದಾನೆ. ಆರೋಪಿ ತನ್ನ ಬ್ಯಾಗ್‌ನಿಂದ ತಲ್ವಾರ್ ಹೊರತೆಗೆದು ಲಾವಣ್ಯಳ ಮೇಲೆ ಮಾರಕ ಹಲ್ಲೆ ನಡೆಸಿ, ಆರೋಪಿ ಚೇತನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಲಾವಣ್ಯ ಅವರನ್ನು ತಕ್ಷಣವೇ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೃತ್ಯ ಎಸಗಿದ ನಂತರ ಆರೋಪಿ ಚೇತನ್ ತನ್ನ ಆಲ್ಟೋ ಕಾರಿನಲ್ಲಿ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾನೆ. ಈ ಮಧ್ಯೆ ಆತ ಲಾವಣ್ಯ ತಂದೆಗೆ ಕರೆ ಮಾಡಿ, “ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ, ಈಗ ನಾನೂ ಸಹ ಜೀವನ ಕೊನೆಗೊಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದ ಎನ್ನಲಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಲರ್ಟ್ ಆದ ಬಂಟ್ವಾಳ ಉಪವಿಭಾಗದ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಮೊಬೈಲ್ ನೆಟ್‌ವರ್ಕ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಾಮಂಜೂರು ಪಚ್ಚನಾಡಿ ಬಳಿ ಆರೋಪಿಯನ್ನು ಕಾರು ಸಮೇತ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಒಂದು ತಿಂಗಳ ಹಿಂದೆಯೂ ಆರೋಪಿ ಚೇತನ್, ಲಾವಣ್ಯ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ್ದ. ಆ ಸಂದರ್ಭದಲ್ಲಿ ಆಸ್ಪತ್ರೆಯ ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದರು. ಆದರೆ, ಆ ಸಮಯದಲ್ಲಿ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗದೆ ಇರುವುದು ಈ ದುರಂತಕ್ಕೆ ಕಾರಣವಾಯಿತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
