ಹೆಜಮಾಡಿ: ಹೆಜಮಾಡಿ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಆಧಾರ್ ಕಾರ್ಡ್ ಆಧಾರಿತ ಟೋಲ್ ಶುಲ್ಕ ವಿನಾಯಿತಿಯನ್ನು ಮುಂದುವರಿಸುವಂತೆ ಹಾಗೂ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೂ ಟೋಲ್ ಶುಲ್ಕ ವಿನಾಯಿತಿ ನೀಡುವಂತೆ ಒತ್ತಾಯಿಸಿ ಆಗಸ್ಟ್ 1ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಗುರುವಾರ ಹೆಜಮಾಡಿಯ ನ್ಯೂ ಕೋಟೆ ಬಿಲ್ಡಿಂಗ್‌ನ ಮಹಾಲಕ್ಷ್ಮಿ ಬ್ಯಾಂಕ್ ಕೆಳಭಾಗದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಪ್ರತಿಭಟನೆಯನ್ನು ಸಾವಿರಕ್ಕೂ ಹೆಚ್ಚು ಜನರನ್ನು ಒಗ್ಗೂಡಿಸಿ ವ್ಯವಸ್ಥಿತವಾಗಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಂಘ-ಸಂಸ್ಥೆಗಳು, ನಾಗರಿಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಹೆಜಮಾಡಿ ಮತ್ತು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಪ್ರತಿಭಟನೆಯ ಸಿದ್ಧತೆ ಮತ್ತು ಸಮನ್ವಯಕ್ಕಾಗಿ 15 ಸದಸ್ಯರ ಕಾರ್ಯಕಾರಿ ಸಮಿತಿ (ವರ್ಕಿಂಗ್ ಕಮಿಟಿ) ರಚಿಸಿ ಹೋರಾಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಆಗಸ್ಟ್ 1ರಂದು ಬೆಳಿಗ್ಗೆ 10 ಗಂಟೆಗೆ ಹೆಜಮಾಡಿ ಬೈಪಾಸ್ ಸಮೀಪದ ಪಿಡಬ್ಲ್ಯುಡಿ ರಸ್ತೆಯ ಟೋಲ್ ಪ್ಲಾಜಾ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಭೆಯಲ್ಲಿ ಘೋಷಿಸಲಾಯಿತು.
ಸಭೆಯಲ್ಲಿ ಪ್ರಮುಖರಾದ ವ್ಯೆ ಸುಕುಮಾರ್, ನವೀನ್ ಎನ್ .ಶೆಟ್ಟಿ , ಅಬ್ದುಲ್ ಅಜೀಜ್ ಹೆಜ್ಮಾಡಿ,ಸುಧೀರ್ ಕರ್ಕೇರ,ಪ್ರಬೋಚಂದ್ರ ಹೆಜ್ಮಾಡಿ, ರಮೀಜ್ ಹುಸೇನ್ ,ಕೇಶವ್ ಸಾಲ್ಯಾನ್, ಶೇಕಬ್ಬ ಕೋಟೆ, ಕರುಣಾಕರ್ ಪೂಜಾರಿ, ಸಂತೋಷ್ ಪಡುಬಿದ್ರಿ, ವಿಶಾಲ್ ಬಂಗೇರ ,ಸೌಮ್ಯ ರಿತೇಶ್ ,ಹಸನ್ ಕೋಡಿ, ಮಜೀದ್ ಕನ್ನಾಂಗರ್ ,ಶರೀಫ್ ಬೋರುಗುಡ್ಡೆ , ಮಹಮ್ಮದ್ ಇಕ್ಬಾಲ್ ,ಹಮೀದ್ ಹಾಜಿ,ಅಬ್ದುಲ್ ರಝಾಕ್ , ಸಫ್ವಾನ್ ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.


