ಕಾರವಾರ: ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕರಾವಳಿ ಅಭಿವೃದ್ಧಿ ಮಂಡಳಿಯಿಂದ ಹೆಚ್ಚಿನ ಪರಿಣಾಮಕಾರಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕನಿಷ್ಟ 100 ಕೋ.ಟಿ ರೂ. ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ತಿಳಿಸಿದ್ದಾರೆ.
ಶನಿವಾರ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಕರಾವಳಿ ಅಭಿವೃದ್ಧಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಪ್ರಸ್ತುತ ಮಂಡಳಿಗೆ 10 ಕೋಟಿ ಅನುದಾನ ನೀಡಲಾಗಿದ್ದು, ಈ ಅನುದಾನವನ್ನು 3 ಜಿಲ್ಲೆಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಶಾಸಕರು ಮತ್ತು ಸಂಸದರ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವಿನಿಯೋಗಿಸಲಾಗುತ್ತಿದ್ದು, ಈ ಅನುದಾನದಲ್ಲಿ ಸಾರ್ವಜನಿಕರ ಬೇಡಿಕೆಯ ಅತ್ಯಂತ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲು ಕಷ್ಟಸಾಧ್ಯವಾಗಿದ್ದು, ಮಂಡಳಿಗೆ ಕನಿಷ್ಠ 100 ಕೋ.ರೂ. ಅನುದಾನ ಒದಗಿಸುವಂತೆ ಮಂಡಳಿ ಸದಸ್ಯರು ತಿಳಿಸಿದರು. ಸದಸ್ಯರ ಈ ಅಭಿಪ್ರಾಯವನ್ನು ಮತ್ತು ಅನುದಾನದ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ರಾಜ್ಯದ ಕರಾವಳಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಕೊಚ್ಚಿ ಮತ್ತು ತಮಿಳುನಾಡಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಕೊಚ್ಚಿಯಲ್ಲಿ ಜಾರಿಯಲ್ಲಿರುವ ವಾಟರ್ ಮೆಟ್ರೋ ಸಂಚಾರವನ್ನು ರಾಜ್ಯದಲ್ಲಿ ಆರಂಭಿಸಲು ಮತ್ತು ರಾಜ್ಯದಲ್ಲಿನ ಹಡಗು ನಿರ್ಮಾಣದ ಸ್ಥಳಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಹೊನ್ನಾವರದಲ್ಲಿ ಹೊಸದಾಗಿ ಹಡಗು ನಿರ್ಮಾಣ ಕೇಂದ್ರವನ್ನು ಆರಂಭಿಸಲು ಪ್ರಯತಿಸಲಾಗುತ್ತಿದೆ. ರಾಜ್ಯದ ಕರಾವಳಿಯಲ್ಲಿನ ಹವಾಮಾನ ವೈಪರೀತ್ಯ ಅಧ್ಯಯನ ಮಾಡಿ, ಇದನ್ನು ತಡೆಯಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ತಜ್ಞರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಸೀ ಪ್ಲೇನ್ ಯೋಜನೆ ಬಗ್ಗೆ ಹೇಳಿದ್ದು ಹೀಗೆ....
ಉಡಾನ್ ಯೋಜನೆಯಡಿ 'ಸೀ ಪ್ಲೇನ್'ಗೆ ಅನುಮತಿ ನೀಡಿ ಅದನ್ನು ಜಾರಿಗೊಳಿಸಿದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದ್ದು, ಈ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು. ಕರಾವಳಿ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಅನುಷ್ಠಾನ ಇಲಾಖೆಗಳು ಗುಣಮಟ್ಟದೊಂದಿಗೆ, ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಗಫೂರ್ ತಿಳಿಸಿದರು.
ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿರಸಿ ಭಾಗದಲ್ಲಿ ಕಾಲುಸಂಕಗಳು ಮತ್ತು ಸಂಪರ್ಕ ರಸ್ತೆ ಕಾಮಗಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನಗೊಳಿಸಬೇಕು. ಮಳೆಗಾಲ ಸಂದರ್ಭದಲ್ಲಿ ಶಾಲಾ ಮಕ್ಕಳು ಅನುಭವಿಸುವ ತೊಂದರೆಗಳನ್ನು ವಿವರಿಸಿದರು. ಈ ಭಾಗದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡುವಂತೆ ಮತ್ತು ಜಲಪಾತಗಳ ಬಳಿ ನಿಷೇಧ ಹೇರದೆ ಗರಿಷ್ಠ ಸುರಕ್ಷತಾ ಕ್ರಮ ಕೈಗೊಂಡು ಪ್ರವಾಸೋದ್ಯಮ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ತಲವಾಡಿಯಿಂದ ಕಾರವಾರದವರೆಗೆ ಕಡಲೊರೆತ ತಡೆಗೂ ಸಹಕಾರಿ ಆಗುವಂತೆ ರಿಂಗ್ ರೋಡ್ ನಿರ್ಮಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಬುಡ್ಡ ಸಿದ್ದಿ, ಕರಾವಳಿ ಜಿಲ್ಲೆಗಳಲ್ಲಿನ ಬುಡಕಟ್ಟು ಸಮುದಾಯದ ಜನತೆ ವಾಸ ಮಾಡುವ ಪ್ರದೇಶಗಳಿಗೆ ರಸ್ತೆ ಸಂಪರ್ಕ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು. ಗಣಪತಿ ಉಲ್ವೇಕರ್ ಮಾತನಾಡಿ, ಮೀನುಗಾರರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ, ಜಿಪಂ ಸಿಇಒ ಡಾ.ದಿಲೀಪ್ ಶಶಿ, ಎಡಿಸಿ ಸಾಜಿದ್ ಮುಲ್ಲಾ, ಕರಾವಳಿ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪ್ರದೀಪ್ ಡಿಸೋಜಾ ಈ ವೇಳೆ ಉಪಸ್ಥಿತರಿದ್ದರು.
ಕರಾವಳಿಯಲ್ಲಿ 'ಕೋಸ್ಟಲ್ ಟೂರಿಸಂ'ಗೆ ಆದ್ಯತೆ: ಗಫೂರ್
ಕಾರವಾರ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕೋಸ್ಟಲ್ ಟೂರಿಸಂ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕಾಳಿ, ಶರಾವತಿ ನದಿಗಳ ಹಿನ್ನೀರಿನಲ್ಲಿ ಕೇರಳ ಮಾದರಿ ರಿವರ್‌ಟೂರಿಸಂ ಅಭಿವೃದ್ಧಿ ಮಾಡಲಾಗುವುದು ಎಂದು ಕರಾವಳಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದ್ದಾರೆ.
ಕಾರವಾರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಈಗ ಮಂಡಳಿಯಾಗಿ ಬದಲಾಗಿದೆ. ಇದರ ಸದಸ್ಯರ ಸಂಖ್ಯೆ ಸಹ ಹೆಚ್ಚಾಗಿದೆ. ಕರಾವಳಿ ಜಿಲ್ಲೆಗಳ ಸಂಸದರು ಸೇರಿದಂತೆ ಮೂರು ಜಿಲ್ಲೆಗಳ ಶಾಸಕರು ಸಹ ಸದಸ್ಯರಾಗಿದ್ದು, ಸಭೆಯಲ್ಲಿ ಹಲವು ಸಲಹೆಗಳನ್ನು ನೀಡಿದ್ದಾರೆ. ಕೆಲ ನದಿಗಳ ವಾಟರ್‌ುಟ್ರೋ ಸರ್ವೇ ನಡೆದಿದೆ. ನದಿಯ ಆಳ ಮತ್ತು ಬೋಟ್ ಹೌಸ್ ಚಲನೆಗೆ ಸಾಧ್ಯತಾ ಅಧ್ಯಯನ ಸಹ ನಡೆದಿದ್ದು, ವರದಿ ಕೈಸೇರುವ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಬೋಟ್ ಟ್ರಾಫಿಕ್ ಕಂಟ್ರೋಲ್ ಸರ್ವೇ ಬಾಕಿಯಿದೆ. ಈ ರಿಪೋರ್ಟ್ ಬಂದ ನಂತರ ಮುಂದಿನ ಹೆಜ್ಜೆ ಇಡಲಾಗುವುದು. ಶರಾವತಿ, ಕಾಳಿ, ಅಘನಾಶಿನಿಯಲ್ಲಿ ಬ್ಯಾಕ್ ವಾಟರ್‌ಬೋಟ್ ಟೂರಿಸಂ ಬಗ್ಗೆ ಸಾಧ್ಯತಾ ಅಧ್ಯಯನ ಮಾಡಲಾಗುವುದು ಎಂದರು.


