'ಲವ್ ಜಿಹಾದ್'ಗಾಗಿ ಆಮಿರ್ ಖಾನ್ ಗೆ ಶೀಘ್ರದಲ್ಲೇ ತಕ್ಕ ಉತ್ತರ ನೀಡಲಿದ್ದೇವೆ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆ!

ಮುಂಬೈ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ನಂತರ ಇದೀಗ ಬಾಲಿವುಡ್ ನಟ ಆಮೀರ್ ಖಾನ್ ಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಆ ಗ್ಯಾಂಗ್ ನ ಸದಸ್ಯರೆಂದು ಹೇಳಿಕೊಂಡ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಗೂ ಆಡಿಯೋ ಕ್ಲಿಪ್ ವೊಂದನ್ನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ಪೋಸ್ಟ್ ಮತ್ತು ಆಡಿಯೋ ಎರಡರ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಅವುಗಳ ಮೂಲದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಪೋಸ್ಟ್ ನಲ್ಲಿ ಏನಿದೆ? "ಜೈ ಶ್ರೀ ರಾಮ್! ಜೈ ಸೀತಾ ರಾಮ್! ನಾನು, ಆರ್ಜೂ ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ (ಲಾರೆನ್ಸ್ ಬಿಷ್ಣೋಯ್ ಗುಂಪು) ಈ ದೇಶದಲ್ಲಿ ನಮ್ಮ ಸಂಸ್ಕೃತಿಯ ವಿರುದ್ಧ 'ಲವ್ ಜಿಹಾದ್' ಪ್ರೋತ್ಸಾಹಿಸುವ ಆಮೀರ್ ಖಾನ್ ಅವರಂತಹ ವ್ಯಕ್ತಿಗಳನ್ನು ಸಹಿಸುವುದಿಲ್ಲ. ಶೀಘ್ರದಲ್ಲೇ ಅವರಿಗೆ ತಕ್ಕ ಉತ್ತರ ನೀಡಲಿದ್ದೇವೆ. ಇದು ಸನಾತನ ಧರ್ಮ ಮತ್ತು ರಾಷ್ಟ್ರದ ವಿರುದ್ಧವಾಗಿದೆ ಎಂದು ಬೆದರಿಕೆ ಹಾಕಲಾಗಿದೆ.

ಇಂತಹ ಕೃತ್ಯಗಳನ್ನು ಪ್ರೋತ್ಸಾಹಿಸುವವರಿಗೆ ನಮ್ಮದೇ ಆದ ರೀತಿಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ನಮ್ಮ ಸಹೋದರ-ಸಹೋದರಿಯರು ಹಾಗೂ ನಾಗರಿಕರಿಗೆ ಭರವಸೆ ನೀಡುತ್ತೇವೆ. ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಲವ್ ಜಿಹಾದ್ ನಂತಹ ಪದ್ಧತಿ ಪ್ರೋತ್ಸಾಹಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಲಾಗಿದೆ.

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ನಡೆದ ಅಮಾಯಕ ಯುವತಿಯೊಬ್ಬಳಿಗೆ ಸಂಬಂಧಿಸಿದ ಘಟನೆಯ ಬಗ್ಗೆಯೂ ನಾವು ಪ್ರಸ್ತಾಪಿಸಲು ಬಯಸುತ್ತೇವೆ. ಆಡಳಿತವು ಈ ಪ್ರಕರಣದಲ್ಲಿ ಶ್ಲಾಘನೀಯ ಕೆಲಸ ಮಾಡಿದೆ, ಆದರೆ ಕೆಲವು ರಾಜಕೀಯ ನಾಯಕರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದು ನಮ್ಮ ಮೊದಲ ಮತ್ತು ಅಂತಿಮ ಎಚ್ಚರಿಕೆ. ಆ ಮುಗ್ಧ ಯುವತಿಗೆ ನಡೆದ ಘಟನೆಯಲ್ಲಿ ಭಾಗಿಯಾದವರಿಗೆ ನಾವೇ ಶಿಕ್ಷೆ ವಿಧಿಸುತ್ತೇವೆ. ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ರಾಜಕೀಯ ನಾಯಕರಿಗೂ ಎಚ್ಚರಿಕೆ ನೀಡುತ್ತೇವೆ. ತಕ್ಷಣವೇ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ. ಇಲ್ಲದಿದ್ದರೆ, ಅವರಿಗಾದ ಗತಿಯೂ ನಿಮಗೂ ಆಗಲಿದೆ. ಸ್ವಲ್ಪ ಮಾನವೀಯತೆಯನ್ನು ತೋರಿ ಎನ್ನಲಾಗಿದೆ.

ಸಾವಿಗೀಡಾದ ನಮ್ಮ ಇಬ್ಬರು ಸಹೋದರರಾದ ಪರ್ವೇಶ್ ಮತ್ತು ಹಿಮಾಂಶು ಸದಾ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ. ಅವರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ಸಿಗಲಿದೆ. ದೇವರು ಅವರ ಆತ್ಮಗಳಿಗೆ ಶಾಂತಿ ನೀಡಲಿ ಜೈ ಶ್ರೀ ರಾಮ್! ಎಂದು ಬರೆಯಲಾಗಿದೆ.