ಹುಡುಗಿಯ ಆಸೆ ತೋರಿಸಿ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಸುಲಿಗೆ: 11 ಮಂದಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ Locanto ಆ್ಯಪ್ ಮೂಲಕ ಹುಡುಗಿಯನ್ನು ಭೇಟಿ ಮಾಡಿಸುವ ಆಸೆ ತೋರಿಸಿ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಸುಲಿಗೆ ಮಾಡಿದ ಆರೋಪದ ಮೇಲೆ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಚೇತನ್ ಮನು, ಶಾಬು, ಮಂಜುನಾಥ, ಜಯಕುಮಾರ್, ಅರುಣ ಕೀರ್ತಿ, ಕಾಂತ ರಾಜು, ಸಂದೀಪ್ ಎಂದು ಗುರುತಿಸಲಾಗಿದೆ. ಇನ್ನು ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಬಂಧನ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳಿಂದ ಎರಡು ಆಟೋ, 4 ಬೈಕ್, 13 ಮೊಬೈಲ್ ಫೋನ್ ಗಳು ನಗದು ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು, ಆ್ಯಪ್ ಒಂದರಲ್ಲಿ ಹುಡುಗಿಯರು ಮಾಹಿತಿ ಪ್ರಕಟಿಸಿ, ಅವರನ್ನು ಭೇಟಿ ಮಾಡಿಸುವುದಾಗಿ ಪುರುಷರನ್ನು ಸಂಪರ್ಕಿಸುತ್ತಿದ್ದರು. ಇದನ್ನು ನಂಬಿ ಹುಡುಗಿಯನ್ನು ಭೇಟಿಯಾಗಲು ಹೋಗಿದ್ದ ವ್ಯಕ್ತಿಯನ್ನು ಆರೋಪಿಗಳು ಸುಲಿಗೆ ಮಾಡಿದ್ದರು.

ಆರೋಪಿಗಳ ಜೊತೆ ಹುಡುಗಿಯರನ್ನು ಭೇಟಿಯಾಗಲು ಕೆಜಿ ಹಳ್ಳಿಯ ಎಚ್‌ಆರ್‌ಬಿಆರ್ ಲೇಔಟ್‌ ಬಳಿ ಸಂತ್ರಸ್ತ ವ್ಯಕ್ತಿ ತೆರಳಿದ್ದ. ಈ ವೇಳೆ ಆಟೋದಲ್ಲಿ ಯುವತಿಯರು ಕುಳಿತಿದ್ದರು. ಅವರನ್ನು ಭೇಟಿಯಾಗುವ ಮುನ್ನವೇ ಆರೋಪಿಗಳು ವ್ಯಕ್ತಿಯನ್ನು ಅಪಹರಿಸಿದ್ದರು.

ಬಳಿಕ ಆಟೋದಲ್ಲಿ ನಗರದ ವಿವಿಧ ಭಾಗದಲ್ಲಿ ಸುತ್ತಾಡಿಸಿ, ಹಣ ಮೊಬೈಲ್, ಚೈನ್ ಕಿತ್ತುಕೊಂಡು ಪರಾರಿಯಾಗಿದ್ದರು. ಘಟನೆ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿತ್ತು. ಮಾಹಿತಿ ಮೇರೆಗೆ ದೂರು ಪಡೆದು ಕೇಸ್ ದಾಖಲಿಸಿಕೊಂಡ ಸಿಸಿಬಿ ಮಹಿಳಾ ರಕ್ಷಣಾ ಪಡೆ, ಆರೋಪಿಗಳನ್ನು ಬಂಧಿಸಿದೆ.