ಪ್ರಾಂಶುಪಾಲೆಯನ್ನು 27 ಬಾರಿ ಇರಿದು ಹತ್ಯೆ; ಇಬ್ಬರು ವಿದ್ಯಾರ್ಥಿಗಳ ಬಂಧನ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ !

ಹೈದರಾಬಾದ್: ಕೇವಲ ಪೋಷಕರಿಗೆ ದೂರು ಕೊಟ್ಟಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗಳು ಪ್ರಾಂಶುಪಾಲೆಯನ್ನು  ಹತ್ಯೆ(Murder) ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯಲ್ಲಿಯ ಖಾಸಗಿ ಶಾಲೆಯಲ್ಲಿ ನಡೆದಿದೆ. 

ದುಬಾರಿ ಜೀವನಶೈಲಿ ಮತ್ತು ದುಂದುವೆಚ್ಚವನ್ನು ಪ್ರಶ್ನಿಸಿ ಪೋಷಕರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಕ್ಕೆ, ಅದೇ ಶಾಲೆಯ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಶಿಕ್ಷಕಿಯ ಮನೆಗೆ ನುಗ್ಗಿ ಬರೋಬ್ಬರಿ 27 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ನಂತರ ಮನೆಯಲ್ಲಿದ್ದ ನಗದು ಮತ್ತು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದ ಇಬ್ಬರೂ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಂಡಮಲ್ಲೇಪಲ್ಲಿಯಲ್ಲಿರುವ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಮತ್ತು ನಿರ್ದೇಶಕಿ ಕಲ್ಲು ರೂಪಾ ರೆಡ್ಡಿಯವರನ್ನು ( Kallu Roopa Reddy) ಆ.11 ರಂದು ಹತ್ಯೆ ಮಾಡಲಾಗಿತ್ತು. ಹೈದರಾಬಾದ್‌ನಲ್ಲಿದ್ದ ಅವರ ಪತಿ ಕರೆ ಮಾಡಿದಾಗ ಪ್ರತಿಕ್ರಿಯಿಸದೇ ಇದ್ದಾಗ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು. ಆಗ ನೆರೆಹೊರೆಯವರು ಮನೆ ಬಳಿ ನೋಡಿದಾಗ ಅವರ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. 

ಪೊಲೀಸರು ಈ ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಬೆರಳಚ್ಚುಗಳು, ತಾಂತ್ರಿಕ ದತ್ತಾಂಶ ಮತ್ತು ಶಂಕಿತರ ಚಲನವಲನಗಳನ್ನು ಪರಿಶೀಲಿಸಿ, 80 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದರು.

‘ಬಾಬು’ ಎಂಬ ಪದದಿಂದ ಪತ್ತೆಯಾದ ಹಂತಕರ ಜಾಡು

ರೂಪಾ ರೆಡ್ಡಿ ತನ್ನ ಚಿಕ್ಕಮ್ಮನೊಂದಿಗೆ ಮಾತನಾಡುವಾಗ ‘ಬಾಬು’ ಎಂಬ ಪದವನ್ನು ಬಳಸಿದ್ದರು. ನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಪದದಿಂದ ಯಾರನ್ನು ಉಲ್ಲೇಖಿಸಿರಬಹುದು ಎಂದು ಜಾಡು ಹಿಡಿದು ಹೊರಟ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು.

ಈ ಪದವನ್ನೇ ಆಧರಿಸಿ ತನಿಖಾ ತಂಡ ಶಾಲೆಯ ಅಂಗಳ ತಲುಪಿತ್ತು. ಅಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆಯಾದ ದಿನ ಶಾಲೆಗೆ ಗೈರಾಗಿದ್ದ ಐದು ವಿದ್ಯಾರ್ಥಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಅದರಲ್ಲಿ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ಬಹಳ ಹಣ ಖರ್ಚು ಮಾಡುವುದು, ಪಾರ್ಟಿಗಳನ್ನು ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ಇಬ್ಬರನ್ನು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿತ್ತು.

ಕೊಲೆ ಆರೋಪ ಹೊತ್ತ ಈ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಹಿಂದೆ ನಗದು ಮತ್ತು ಮೊಬೈಲ್ ಫೋನ್ ಪತ್ತೆಯಾಗಿದ್ದವು. ಈ ಬಗ್ಗೆ ರೂಪಾ ರೆಡ್ಡಿಯವರು ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಅವರನ್ನು ಹಾಸ್ಟೆಲ್‌ನಿಂದ ಮನೆಗೆ ಕಳುಹಿಸಲಾಗಿತ್ತು. ಇದು ಪ್ರಾಂಶುಪಾಲರ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಿನ್ಸಿಪಾಲ್‌ ಮನೆಯನ್ನು ಪತ್ತೆ ಮಾಡಿ, ಆರೋಪಿಗಳು ಐದು ದಿನಗಳ ಕಾಲ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಇದಕ್ಕಾಗಿ ಚಾಕು ಮತ್ತು ಗುರುತನ್ನು ಮರೆಮಾಡಲು ಕೈಗವಸುಗಳನ್ನು ಸಹ ಖರೀದಿಸಿದ್ದರು.

ಕೊಲೆಯಾದ ದಿನ, ವಿದ್ಯಾರ್ಥಿಗಳಲ್ಲಿ ಒಬ್ಬ ಮಂಕಿ ಕ್ಯಾಪ್ ಮತ್ತು ಕೈಗವಸುಗಳನ್ನು ಧರಿಸಿ ಮನೆಗೆ ಪ್ರವೇಶಿಸಿದ್ದನು. ಮಲಗುವ ಕೋಣೆಯಲ್ಲಿ ಇಟ್ಟಿದ್ದ 2.50 ಲಕ್ಷ ರೂ.ಗಳನ್ನು ಕದ್ದು ಓಡಿಹೋಗಲು ಯತ್ನಿಸಿದ್ದ. ಈ ವೇಳೆ ಮಂಕಿ ಕ್ಯಾಪ್ ಜಾರಿದ್ದು, ರೂಪಾ ರೆಡ್ಡಿಯವರು ತನ್ನನ್ನು ಗುರುತಿಸುತ್ತಾರೆ ಎಂಬ ಭಯದಲ್ಲಿ ಚಾಕುವಿನಿಂದ 27 ಬಾರಿ ಇರಿದಿದ್ದಾನೆ.

ಕೊಲೆಯ ನಂತರ, ಆರೋಪಿಗಳು ಹಣವನ್ನು ತೆಗೆದುಕೊಂಡು ರಕ್ತಸಿಕ್ತ ಬಟ್ಟೆ ಮತ್ತು ಮಂಕಿ ಕ್ಯಾಪ್ ಅನ್ನು ಹೂತುಹಾಕುವ ಮೂಲಕ ಸಾಕ್ಷ್ಯವನ್ನು ಮರೆಮಾಡಲು ಪ್ರಯತ್ನಿಸಿದರು. ಅಲ್ಲಿಂದ ಗೋವಾಕ್ಕೆ ಪ್ರವಾಸಕ್ಕೆ ಹೋಗಿದ್ದರು ಎಂದು ವರದಿಯಾಗಿದೆ. ಕೊಲೆಗೂ ಮುನ್ನ ಬೇಗ ಹಣ ಗಳಿಸುವುದು ಹೇಗೆ ಎಂಬ ವಿಡಿಯೋ ಒಂದನ್ನು ಸರ್ಚ್‌ ಮಾಡಿ ನೋಡಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳ ಬಳಿ ರಕ್ತದ ಕಲೆಗಳಿರುವ ಕೆಲವು ನೋಟುಗಳು, ಆರೋಪಿಗಳು ಖರೀದಿಸಿದ ಐಫೋನ್ ಮತ್ತು ರೂಪಾ ರೆಡ್ಡಿ ಅವರ ಫೋನ್ ಸೇರಿದಂತೆ 1.54 ಲಕ್ಷ ರೂ.ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.