ಬಿಜೆಪಿಯ ಹೊಸ ತಂಡದಿಂದ ಅಮಿತ್ ಮಾಳವೀಯ, ತೇಜಸ್ವಿ ಸೂರ್ಯ ಔಟ್ !

 

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಪಕ್ಷದ ಹೊಸ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ಇಬ್ಬರು ಪ್ರಮುಖ ನಾಯಕರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅದರಲ್ಲಿ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಹಾಗು ಉತ್ತರ ಪ್ರದೇಶದ ಅಮಿತ್ ಮಾಳವೀಯ.

ತೇಜಸ್ವಿ ಸೂರ್ಯ ಅವರ ಭಾಷಣ ಶೈಲಿ, ಕಾರ್ಯತಂತ್ರವನ್ನು ನೋಡಿದ ಹೈಕಮಾಂಡ್‌ ಅವರಿಗೆ 6 ವರ್ಷಗಳ ಹಿಂದೆ ಯುವಮೋರ್ಚಾದ ಜವಾಬ್ದಾರಿಯನ್ನು ನೀಡಿತ್ತು. ಸದ್ಯ ಕೈಬಿಟ್ಟಿದ್ದು, ಆ ಜಾಗಕ್ಕೆ ಗುಜರಾತ್‌ನ ಡಾ. ಹೇಮಾಂಗ್ ಜೋಶಿ ಅವರನ್ನು ನೇಮಕ ಮಾಡಿದೆ. ತೇಜಸ್ವಿಗೆ ಹುದ್ದೆ ಕೈತಪ್ಪಿದೆಯಾದರೂ ಅದಕ್ಕೆ ಪ್ರಬಲ ಕಾರಣಗಳಿವೆ.

ಯುವ ಮೋರ್ಚಾ ಮುನ್ನಡೆಸಿದ ತೇಜಸ್ವಿ ಸೂರ್ಯ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ದೊಡ್ಡ ಲಾಬಿ ನಡೆಸಿದ್ದಾರೆ. ಮುಂದಿನ ಕೆಲ ದಿನಗಳಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಂಭಾವ್ಯರ ಪಟ್ಟಿಯಲ್ಲಿ ಹೆಸರಿದೆ ಎನ್ನಲಾಗಿದೆ. ಹೀಗಾಗಿ, ಯುವ ಮೋರ್ಚಾ ಜವಾಬ್ದಾರಿಯಿಂದ ಕೆಳಗಿಳಿಸಲಾಗಿದೆ. ಮತ್ತೊಂದು ಕಾರಣವೆಂದರೆ, ಆ ಹುದ್ದೆಗೆ ಮೀಡಿಯಾ ಫೇಸ್‌ ಬೇಡ ಎಂದು ಹೈಕಮಾಂಡ್‌ ನಿರ್ಧರಿಸಿದೆಯಂತೆ. ತೇಜಸ್ವಿ ಸದ್ಯ ತಮ್ಮ ಮಾತುಗಾರಿಕೆಯಿಂದ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರನ್ನು ಯುವ ಮೋರ್ಚಾಕ್ಕಿಂತ ಮೇಲಿನ ಹಂತದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯ ಅವರ ಸ್ಥಾನಕ್ಕೆ ದೀಪಕ್ ಎಂಬುವರನ್ನು ನೇಮಿಸಲಾಗಿದೆ. ಜತೆಗೆ ಹಲವು ರಾಜ್ಯಗಳಿಂದ ಸಹಸಂಚಾಲಕರನ್ನು ನೀಡಲಾಗಿದೆ. ಇನ್ನೂ ಇತ್ತೀಚೆಗೆ ದೇಶಾದ್ಯಂತ ಸಂಚಲನ ಸೃಷ್ಠಿ ಮಾಡಿದ್ದ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯೇ ಮಾಳವೀಯ ಅವರನ್ನು ಐಟಿ ಸೆಲ್‌ನಿಂದ ಹೊರಗಿಡಲು ಕಾರಣ ಎನ್ನಲಾಗುತ್ತಿದೆ. ಸಿಜೆಪಿ ಸಾಮಾಜಿಕ ಜಾಲತಾಣಗಳನ್ನೇ ಪ್ರಮುಖ ದಾಳವಾಗಿಸಿಕೊಂಡು ಗೆದ್ದಿತು. ಆ ಸಂದರ್ಭದಲ್ಲಿ ಬಿಜೆಪಿಯ ಐಟಿ ಸೆಲ್‌ ಸೂಕ್ತ ತಂತ್ರಗಾರಿ ಮಾಡಿ ಯುವಜನರನ್ನು ಸೆಳೆಯುವುದರಲ್ಲಿ ವಿಫಲವಾಯಿತು. ಬಿಜೆಪಿ ಐಟಿ ಸೆಲ್ ವೈಫಲ್ಯವೂ ಸಿಜೆಪಿ ಪ್ರತಿಭನೆಯ ಗೆಲುವಿಗೆ ಕಾರಣವಾಯಿತು ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ, ಐಟಿ ಸೆಲ್‌ನ ಸಂಪೂರ್ಣ ಬದಲಾವಣೆ ಮಾಡಲಾಗಿದೆ.