ವಾಷಿಂಗ್ಟನ್: ಅಮೆರಿಕದ ಮ್ಯಾಸಚುಸೆಟ್ಸ್‌ನ ಮನೆಯಲ್ಲಿ ಭಾರತೀಯ ಮೂಲದ ಯುವಕನೋರ್ವ ಎಐ (AI) ಬಳಸಿ ತನ್ನ ತಾಯಿ ಹಾಗೂ ತಮ್ಮನನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಆ.11ರಂದು ಬೋಸ್ಟನ್‌ನಿಂದ ಸುಮಾರು 48 ಕಿ.ಮೀ ದೂರದಲ್ಲಿರುವ ಆಕ್ಟನ್‌ನ ಮಾರ್ತಾ ಲೇನ್‌ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಆಕ್ಟನ್ ನಿವಾಸಿ ಅರ್ಜುನ್ ಅರವಿಂದ್ ಆರೋಪಿ. ತಾಯಿ ಸುಧಾ ವೆಂಕಟೇಶನ್ (45) ಹಾಗೂ ತಮ್ಮ ಸಿದ್ಧಾರ್ಥ್ ಅರವಿಂದ್ (14) ಅವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಆಕ್ಟನ್‌ನ ಶಾಲೆಯೊಂದರಲ್ಲಿ ವಿದ್ಯಾರ್ಥಿಯಾಗಿದ್ದ ಆರೋಪಿ ಅರ್ಜುನ್ ಅರವಿಂದ್, ಮನೆಯಲ್ಲಿ ತನ್ನ ತಾಯಿ ಮತ್ತು ತಮ್ಮನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಬಳಿಕ ತನ್ನ ತಾಯಿಯ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಕೊಲೆ ನಡೆದ ದಿನ ಸಂಜೆ 6:30ರ ಸುಮಾರಿಗೆ ಟ್ಯೂಷನ್ ಮಾಸ್ಟರ್ ಒಬ್ಬರು ಮನೆಗೆ ಬಂದಾಗ ಯಾರೂ ಬಾಗಿಲು ತೆಗೆಯಲಿಲ್ಲ. ಹೀಗಾಗಿ ಆರೋಪಿಯ ತಂದೆಗೆ ಕರೆ ಮಾಡಿ, ವಿಷಯ ಮುಟ್ಟಿಸಿದ್ದಾರೆ. ಕೂಡಲೇ ತಾವು ಕುಟುಂಬಸ್ಥರಿಗೆ ಕರೆ ಮಾಡಿದಾಗ ಯಾರೂ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಕೊನೆಗೆ ಆಕ್ಟನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಯೋಗಕ್ಷೇಮ ಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಂಡರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ನೆಲಮಾಳಿಗೆಯಲ್ಲಿ ಸುಧಾ ವೆಂಕಟೇಶನ್ ಅವರ ಮೃತದೇಹ ಹಾಗೂ ಮೊದಲನೇ ಮಹಡಿಯಲ್ಲಿ ಸಿದ್ಧಾರ್ಥ್ ಮೃತದೇಹ ಪತ್ತೆಹಚ್ಚಿದ್ದಾರೆ. ಇಬ್ಬರ ಮೃತದೇಹಗಳ ಮೇಲೂ ಗಾಯದ ಗುರುತುಗಳು ಕಂಡುಬಂದಿವೆ.
ಘಟನೆಯ ನಂತರ ನಾಪತ್ತೆಯಾಗಿದ್ದ ಆರೋಪಿ ಅರ್ಜುನ್ ಹಾಗೂ ಕಾರಿನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಬುಧವಾರ (ಆ.14) ಮುಂಜಾನೆ ವೇಲ್ಯಾಂಡ್‌ನಲ್ಲಿರುವ ಪಾರ್ಕಿಂಗ್ ಲಾಟ್‌ನಲ್ಲಿ ಪೊಲೀಸರಿಗೆ ಕಾರು ಹಾಗೂ ಅದರೊಳಗೆ ಅರ್ಜುನ್ ಪತ್ತೆಯಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.
ತನಿಖೆಯ ವೇಳೆ ಅರ್ಜುನ್ ತನ್ನ ಕುಟುಂಬವನ್ನು ಕೊಲೆ ಮಾಡಲು ಇಂಟರ್ನೆಟ್ ಮತ್ತು ಚಾಟ್‌ಜಿಪಿಟಿ ಬಳಸಿರುವುದು ಪತ್ತೆಯಾಗಿದೆ. ಸದ್ಯ ಆರೋಪಿ ವಿರುದ್ಧ ಎರಡು ಕೊಲೆ ಆರೋಪಗಳು ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಸ್ಥಳೀಯ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಲಿದ್ದಾರೆ.
