ಪುರುಷರೊಂದಿಗೆ ಸ್ನೇಹ; ಫೋಟೋ-ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್: ಮಹಿಳೆಯಿಂದ ₹6 ಕೋಟಿ ವಂಚನೆ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಯುವತಿಯೊಬ್ಬರು ಡೇಟಿಂಗ್ ಆ್ಯಪ್‌ ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪುರುಷರೊಂದಿಗೆ ಸ್ನೇಹ ಬೆಳೆಸಿ, ಅವರೊಂದಿಗೆ ಆತ್ಮೀಯವಾಗಿರುವ ಫೋಟೋಗಳು ಹಾಗೂ ವಿಡಿಯೋಗಳನ್ನು ಬಳಸಿಕೊಂಡು ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ, ಬರೋಬ್ಬರಿ 6 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಯುವತಿಯ ವಂಚನೆ ಜಾಲವೊಂದು ಬೆಳಕಿಗೆ ಬಂದಿದ್ದು, ಯುವತಿ, ಡೇಟಿಂಗ್ ಅಪ್ಲಿಕೇಶನ್, ಟಿಂಡರ್ ಮೂಲಕ ಪುರುಷರೊಂದಿಗೆ ಸ್ನೇಹ ಬೆಳೆಸಿ, ನಂತರ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿ ಯುವತಿಯನ್ನು ಪಲ್ಲವಿ ಸಿಂಗ್ ರಜಪೂತ್ ಎಂದು ಗುರುತಿಸಲಾಗಿದ್ದು, ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪುರುಷರನ್ನು ಗುರಿಯಾಗಿಸಿಕೊಂಡು, ಡೇಟಿಂಗ್ ಆ್ಯಪ್‌ಗಳಲ್ಲಿ 'ಹಾಯ್, ಹಲೋ...' ಎಂದು ಚೆಂದದ ಮಾತಿನಿಂದ ಸ್ನೇಹ ಬೆಳೆಸಿ, ನಂತರ ಅದನ್ನೇ ಪ್ರೀತಿಯೆಂದು ಹೇಳಿಕೊಂಡು ಯುವಕರಿಂದ ಕೋಟಿಗಟ್ಟಲೇ ಹಣ ಲೂಟಿ ಮಾಡಿದ ಆರೋಪ ಕೇಳಿಬಂದಿದೆ.

ಟಿಂಡರ್ ಎಂಬ ಡೇಟಿಂಗ್ ಆ್ಯಪ್​ ಹಾಗೂ ಸೋಶಿಯಲ್ ಮೀಡಿಯಾಗಳ ಮೂಲಕ ಯುವಕರನ್ನು ಸೆಳೆದು, ಅವರೊಂದಿಗೆ ಖಾಸಗಿ ಕ್ಷಣಗಳ ಫೋಟೋ, ವಿಡಿಯೋ ತೆಗೆಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುವುದೇ ಈ ಖತರ್ನಾಕ್ ಸುಂದರಿಯ ಕೆಲಸ.

ಈಕೆಯಿಂದ ಮೋಸ ಹೋದವರು ಎಷ್ಟು ಜನ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ ವಕೀಲರೊಬ್ಬರು ದೂರು ನೀಡಿದ ಬಳಿಕವೇ ಈ ಕರಾಳ ದಂಧೆ ಭಾರಿ ಸಂಚಲನ ಹುಟ್ಟುಹಾಕಿದೆ.

ಅಲಹಾಬಾದ್ ಹೈಕೋರ್ಟ್‌ನ ವಕೀಲರೊಬ್ಬರು ಈಕೆಯ ಮಾಯಾಬಲೆಗೆ ಬಿದ್ದು ಹಣ ಕಳೆದುಕೊಂಡ ನಂತರ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಮೊದಲು ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ ಮಾಡಿಕೊಳ್ಳುವ ಈ ಸುಂದರಿ, ಚೆಂದದ ಯುವಕರನ್ನೇ ಟಾರ್ಗೆಟ್​ ಮಾಡಿಕೊಂಡು ಬ್ಲ್ಯಾಕ್​ಮೇಲ್​ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ದೋಚುತ್ತಾಳೆ ಎಂದು ವಿವರಿಸಿದ್ದಾರೆ. ಭೇಟಿಯಲ್ಲಿ, ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು, ಅದನ್ನೇ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರ ವಕೀಲ, ಆಕೆ ಬರೋಬ್ಬರಿ 6 ಕೋಟಿ ರೂ.ಗೂ ಹೆಚ್ಚು ಹಣವನ್ನು ವಿವಿಧ ವ್ಯಕ್ತಿಗಳಿಂದ ವಸೂಲಿ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಹಣ ನೀಡಲು ನಿರಾಕರಿಸಿದರೆ, ಅತ್ಯಾಚಾರ, ಕೊಲೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು. ಇದಲ್ಲದೆ, ಪಲ್ಲವಿ ನೀಡಿದ ಸುಳ್ಳು ದೂರುಗಳ ಹಿನ್ನೆಲೆಯಲ್ಲಿ ಐವರು ಜೈಲು ಪಾಲಾಗಿದ್ದಾರೆ. ಕೇಸ್​ನ ಭಯ, ಕಾನೂನು ಹೋರಾಟ ಹಾಗೂ ಎಲ್ಲರೆದುರು ಅವಮಾನ ಆಗುತ್ತದೆ ಎಂಬ ಆತಂಕದಿಂದ ಹಣ ಕೊಟ್ಟಿರುವವರೇ ಹೆಚ್ಚು ಎಂಬ ಆರೋಪವೂ ಕೇಳಿಬಂದಿದೆ.