ಬಿಜೆಪಿ ಹೊಸ ತಂಡ ಪ್ರಕಟ: ವಸುಂಧರಾ ರಾಜೆ, ರಾಮ್ ಮಾಧವ್, ಬಿ.ಎಲ್.ಸಂತೋಷ್, ಸ್ಮೃತಿ ಇರಾನಿಗೆ ಪ್ರಮುಖ ಹೊಣೆಗಾರಿಕೆ; ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ!

ನವದೆಹಲಿ: ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿಯಲ್ಲಿ ಭರ್ಜರಿ ಸರ್ಜರಿ ನಡೆದಿದೆ. ನಿತಿನ್‌ ನಬಿನ್‌ ನೇತೃತ್ವದ ಬಿಜೆಪಿ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದೆ. 

ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಹುದ್ದೆಗಳಿಗೆ ಹಲವು ಪ್ರಮುಖ ನಾಯಕರನ್ನು ನೇಮಕ ಮಾಡಲಾಗಿದೆ. ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ನಿತಿನ್ ನಬಿನ್ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ನೂತನ ರಾಷ್ಟ್ರೀಯ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸ್ಮೃತಿ ಇರಾನಿ, ರಾಮ್ ಮಾಧವ್ ಅವರು ಪಕ್ಷ ಸಂಘಟನೆಗೆ ಮರಳಿದ್ದಾರೆ.

ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಪ್ರಮುಖ ಜವಾಬ್ದಾರಿಗಳ ಪಟ್ಟಿಯನ್ನು ಪಕ್ಷದ ಕೇಂದ್ರ ಕಚೇರಿಯಿಂದ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಹೊಸ ರಾಷ್ಟ್ರೀಯ ಪಟ್ಟಿಯಲ್ಲಿ ಒಟ್ಟು 13 ರಾಷ್ಟ್ರೀಯ ಉಪಾಧ್ಯಕ್ಷರು, 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, 16 ರಾಷ್ಟ್ರೀಯ ಕಾರ್ಯದರ್ಶಿಗಳು, ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.

ರಾಮ್ ಮಾಧವ್, ಲೋಕಸಭಾ ಸಂಸದರಾದ ಡಿ ಪುರಂದೇಶ್ವರಿ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರು ನಿತಿನ್ ನಬಿನ್ ಟೀಂ ನಲ್ಲಿರಲಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಖಜಾಂಚಿಯನ್ನಾಗಿ ಮಾಡಲಾಗಿದೆ.

ಪಕ್ಷ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಪಕ್ಷವು ಬಿ.ಎಲ್. ಸಂತೋಷ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಉಳಿಸಿಕೊಂಡಿದೆ ಮತ್ತು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ತ್ರಿಪುರದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ತಂಡಕ್ಕೆ ಸೇರಿಸಿಕೊಂಡಿದೆ.

ವಿನೋದ್ ತಾವ್ಡೆ ಮತ್ತು ಸುನಿಲ್ ಬನ್ಸಾಲ್ ಮಾತ್ರ ಬಿಜೆಪಿ ತನ್ನ ಹೊಸ ತಂಡದಲ್ಲಿ ಉಳಿಸಿಕೊಂಡಿರುವ ಇಬ್ಬರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು. ಬಿಜೆಪಿ ವಿವಿಧ ರಾಜ್ಯಗಳ 16 ರಾಷ್ಟ್ರೀಯ ಕಾರ್ಯದರ್ಶಿಗಳ ತಂಡದಲ್ಲಿ ಕವಿತಾ ಪಾಟಿದಾರ್, ಕೆ. ಸುರೇಂದ್ರನ್, ಸಂದೀಪ್ ಪಾಠಕ್ ಮತ್ತು ಮನೋಜ್ ಟಿಗ್ಗಾ ಸೇರಿದಂತೆ ಹಲವು ಹೊಸಬರನ್ನು ಸೇರಿಸಿಕೊಂಡಿದೆ.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಬೈಜಯಂತ್ ಜಯ್ ಪಾಂಡಾ ಮತ್ತು ರೇಖಾ ವರ್ಮಾ ಅವರನ್ನು ಉಪಾಧ್ಯಕ್ಷರನ್ನಾಗಿ ಉಳಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಉಪಾಧ್ಯಕ್ಷರ ಪಟ್ಟಿಯಲ್ಲಿ ಶಿಕ್ಷಣ ತಜ್ಞ, ಒಬಿಸಿ ನಾಯಕ ಮತ್ತು ಬಿಜೆಪಿ ಹಿರಿಯ ಮುಖಂಡರಾದ ಕರ್ನಾಟಕದ ಪ್ರೊ. ಎಂ. ನಾಗರಾಜ ( Prof. (Dr.) M. Nagaraja) ಅವರಿಗೆ ಸ್ಥಾನ ನೀಡಲಾಗಿದೆ. ಪ್ರೊ. ಎಂ. ನಾಗರಾಜ ಅವರು ಪ್ರಸ್ತುತ ಸಂಸತ್ತಿನಲ್ಲಿ (ರಾಜ್ಯಸಭೆ) ಕರ್ನಾಟಕದಿಂದ ಬಿಜೆಪಿಯನ್ನು ಪ್ರತಿನಿಧಿಸುತ್ತಿರುವ ಕುರುಬ ಸಮುದಾಯದ ಏಕೈಕ ಸದಸ್ಯರಾಗಿದ್ದಾರೆ.