ಮಂಗಳೂರು: ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ದುಬೈ, ಯುಎಇ ಹಾಗೂ ಬ್ಯಾರೀಸ್ ಕಲ್ಚರಲ್ ಫೋರಂ ಟ್ರಸ್ಟ್ ಮಂಗಳೂರು ಇದರ ವತಿಯಿಂದ ರವಿವಾರ ನಗರದ ಕುದ್ಮುಲ್ ರಂಗರಾವ್ ಸಭಾಂಗಣದಲ್ಲಿ ವಿದ್ಯಾರ್ಥಿವೇತನ ವಿತರಣೆ ಹಾಗೂ ಮಹಿಳೆಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಉಚಿತವಾಗಿ ಹೊಲಿಗೆಯಂತ್ರಗಳ ವಿತರಣೆ ಕಾರ್ಯಕ್ರಮ ಬಹಳ ಯಶವಾಸಿಯಾಗಿ ನಡೆಯಿತು.
ಪ್ರಯತ್ನ ಪಡದೆ ಯಾವ ಸಾಧನೆಯೂ ಸಾಧ್ಯವಿಲ್ಲ: ಖಾದರ್
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಹಾಗು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಬಡತನ ಎಂಬುದು ಇನ್ನು ಶಿಕ್ಷಣಕ್ಕೆ ಅಡ್ಡಿಯಾಗಿಲ್ಲ. ಬಿಸಿಎಫ್‌ನಂತಹ ಸಂಘಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ಸಾವಿರಾರು ವಿದ್ಯಾರ್ಥಿಗಳಿಗೆ ಆಥಿಕವಾಗಿ ಸದಾ ಪ್ರೋತ್ಸಾಹ ನೀಡುತ್ತಾ ಬಂದಿವೆ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಸದುಪಯೋಗಿಸಬೇಕು. ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವುದರ ಜೊತೆಗೆ ನಾಯಕತ್ವದ ಗುಣವನ್ನೂ ಬೆಳೆಸಿಕೊಳ್ಳಬೇಕು ಎಂದರು.
ಬಡತನ ಯಾವತ್ತೂ ಶಾಶ್ವತವಲ್ಲ, ಅದನ್ನು ಮೆಟ್ಟಿ ನಿಲ್ಲಲೇಬೇಕು. ಸ್ವಾಭಿಮಾನದ ಬದುಕು ಸಾಗಿಸಲು ಪ್ರಯತ್ನಿಸ ಬೇಕು. ಪ್ರಯತ್ನ ಪಡದೆ ಯಾವ ಸಾಧನೆಯನ್ನೂ ಮಾಡಲು ಯಾರಿಗೂ ಸಾಧ್ಯವಿಲ್ಲ. ತರಗತಿಯೊಳಗೆ ಸ್ಮಾರ್ಟ್ ಆಗುವುದರ ಜೊತೆಗೆ ಸಮಾಜದ ಆಗುಹೋಗುಗಳ ಬಗ್ಗೆಯೂ ಅರಿತುಕೊಂಡು ಸಕಾಲಕ್ಕೆ ಸ್ಪಂದಿಸಲು ಮುಂದಾಗಬೇಕು. ಸಾಧಕರ ಯಶೋಗಾಥೆಯನ್ನು ಸ್ಫೂರ್ತಿಯಾಗಿಸಿಕೊಳ್ಳಬೇಕು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಸಮಾಜಮುಖಿ ಸೇವೆ ನೀಡುತ್ತಿರುವ ಬಿಸಿಫ್: ಡಾ. ಬಿ.ಕೆ.ಯೂಸುಫ್
ಬಿಸಿಎಫ್ ಅಧ್ಯಕ್ಷ ಡಾ. ಬಿ.ಕೆ.ಯೂಸುಫ್ ಮಾತನಾಡಿ, ಬಿಸಿಎಫ್ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಯಾವೊಬ್ಬ ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಮಹಿಳೆಯರು ಪರಾವಲಂಬಿಗಳಾಗಬಾರದು. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬಿಸಿಎಫ್ ಸಮಾಜಮುಖಿ ಸೇವೆ ಮಾಡುತ್ತಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದರೆ ಅದು ದೇಶಕ್ಕೆ, ಸಮಾಜಕ್ಕೆ, ಸಮುದಾಯಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ. ಹಾಗಾಗಿ ಅರ್ಹರು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.
13 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಿಸಿಎಫ್ ನಿಂದ ವಿದ್ಯಾರ್ಥಿ ವೇತನ: ಎಂ.ಇ.ಮೂಳೂರು
ವಿದ್ಯಾರ್ಥಿ ವೇತನ ಸಮಿತಿಯ ಅಧ್ಯಕ್ಷ ಎಂ.ಇ. ಮೂಳೂರು ಮಾತನಾಡಿ, ಕಳೆದ 25 ವರ್ಷಗಳಿಂದ ಪ್ರತಿಭಾವಂತ ಹಾಗೂ ಅರ್ಥಿಕವಾಗಿ ಹಿಂದುಳಿದ ಸುಮಾರು 13 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಿಸಿಎಫ್ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಬ್ಯಾರಿ ವಿದ್ಯಾರ್ಥಿಗಳಿಗೆ ನಾವು ಮೊದಲ ಆದ್ಯತೆಯನ್ನು ನೀಡುತ್ತೇವೆ. ಜೊತೆಗೆ ಬ್ಯಾರಿಯೇತರ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ನೀಡುತ್ತಿರುವುದು ನಮ್ಮ ವಿಶೇಷತೆಯಾಗಿದೆ. ಇಂತಹ ಉತ್ತಮ ಕೆಲಸದಿಂದ ಸೌಹಾರ್ದ ಪರಂಪರೆ ಉಳಿಸಲು ಮತ್ತು ಮುಂದುವರಿಸಲು ಸಾಧ್ಯವಿದೆ. ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದಲ್ಲದೆ ಶಿಕ್ಷಣಕ್ಕಾಗಿ ಸ್ಫೂರ್ತಿದಾಯಕ ಕಾರ್ಯದಲ್ಲಿ ಬಿಸಿಎಫ್ ಸದಾ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಪೊಲೀಸ್ ಉಪಾಯುಕ್ತ ಮಿಥುನ್ ಎಚ್.ಎನ್., ಬಿಸಿಎಫ್ ಸಂಸ್ಥಾಪಕ ಪೋಷಕ ಹಾಗೂ ಅಜ್ಮಾನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್, ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಪತಿ ನಿಸಾರ್ ಅಹ್ಮದ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಶಾಸಕ ಐವನ್ ಡಿಸೋಜ, ಮಾಜಿ ಶಾಸಕ ಮೊಯ್ದಿನ್ ಬಾವ, ಬಿಸಿಎಫ್ ಗೌರವ ಸಲಹೆಗಾರರಾದ ಗಡಿಯಾರ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಇಬ್ರಾಹೀಂ ಗಡಿಯಾರ್ ಮತ್ತು ನಫೀಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅಬೂ ಸಾಲಿಹ್ ಹುಸೈನ್, ಕೆಸಿಸಿಐ ಅಧ್ಯಕ್ಷ ಪಿ.ಬಿ. ಮುದಸ್ಸರ್ ಅಹ್ಮದ್, ಕೆಸಿಸಿಐ ಮಾಜಿ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ವೈಟ್‌ಮಾರ್ಸ್ ಇಲೆಕ್ಟ್ರಾನಿಕ್ಸ್ ಎಲ್‌ಎಲ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ರಹ್ಮಾನ್, ಉದ್ಯಮಿ ಅಬ್ದುಲ್ಲಾ ಮಾದುಮೂಲೆ, ಬಿಸಿಸಿಐ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಮಿಸ್ಬಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಹೈದರ್ ಅಲಿ, ಮಿಸ್ಬಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಝಾಹಿದಾ ಜಲೀಲ್, ಆದಾಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಝಿಯಾವುಲ್ಲಾ ಖಾನ್, ಉದ್ಯಮಿಗಳಾದ ಜೋಸೆಫ್ ಮಥಾಯಸ್, ಸಾದಿಕ್ ಯುಎಇ, ಅಬ್ದುಸ್ಸಮದ್ ಬೆಂಗಳೂರು, ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ, ಕೆ.ಎಂ. ಅಶ್ರಫ್, ಅಬ್ದುಲ್ಲಾ ಉಸ್ತಾದ್ ಮತ್ತಿತರರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಬಿಸಿಎಫ್ ಉಪಾಧ್ಯಕ್ಷ ಅಬ್ದುಲ್ ರೆಹ್ಮಾನ್, ಅಬ್ದುಲ್ ಲತೀಫ್ ಮುಲ್ಕಿ, ಅಫೀಖ್ ಹುಸೈನ್, ಅಮೀರುದ್ದೀನ್ ಎಸ್.ಐ., ಕೋಶಾಧಿಕಾರಿ ಅಸ್ಲಂ ಕಾರಾಜೆ, ಸಮಿತಿಯ ಸದಸ್ಯ ಅಬ್ದುಲ್ ರಹ್ಮಾನ್ ಸಜಿಪ ಮತ್ತಿತರರು ಉಪಸ್ಥಿತರಿದ್ದರು.
ಚೊಕ್ಕಬೆಟ್ಟು ಜುಮಾ ಮಸ್ಜಿದ್‌ನ ಖತೀಬ್ ಮೌಲಾನಾ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ದುಆಗೈದರು. ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯ ಯಾಕೂಬ್ ದೇವ ವಂದಿಸಿದರು.
ಸಾಧಕರಿಗೆ ಸನ್ಮಾನ
ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಸಚಿವ ಯು.ಟಿ.ಖಾದರ್, ಅಜ್ಮಾನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್, ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಪತಿ ನಿಸಾರ್ ಅಹ್ಮದ್ ಮತ್ತು ಪ್ರೆಸಿಡೆನ್ಸಿ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಕೌಸರ್ ನಿಸಾರ್, ಶಾಸಕ ಐವನ್ ಡಿಸೋಜ, ಕೆಸಿಸಿಐ ಅಧ್ಯಕ್ಷ ಪಿ.ಬಿ. ಮುದಸ್ಸರ್ ಅಹ್ಮದ್, ವೈಟ್‌ಮಾರ್ಸ್ ಇಲೆಕ್ಟ್ರಾನಿಕ್ಸ್ ಎಲ್‌ಎಲ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ರಹ್ಮಾನ್, ತರಬೇತುದಾರೆ ಮನಾಲ್ ಕಾಪು ಮತ್ತಿತರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಸಗಾಥೆಯ ವೀಡಿಯೋ ಪ್ರದರ್ಶನ
ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಮತ್ತು ಗಡಿಯಾರ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಇಬ್ರಾಹೀಂ ಗಡಿಯಾರ್ ಸಾಹಸಗಾಥೆಯ ವೀಡಿಯೋ ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ವಿಶೇಷತೆ...
►►ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗಿನ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
►►ಎಸೆಸೆಲ್ಸಿ, ಪಿಯುಸಿ ಹಾಗೂ ಮದ್ರಸ ಪಬ್ಲಿಕ್ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
►►ದ.ಕ.ಮತ್ತು ಉಡುಪಿ ಜಿಲ್ಲೆಯ ಸುಮಾರು 100 ಮಹಿಳೆಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಉಚಿತವಾಗಿ ಹೊಲಿಗೆಯಂತ್ರಗಳನ್ನು ವಿತರಿಸಲಾಯಿತು.
►►ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಹಾಗೂ ಯುಎಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಡಾ.ಪ್ರೊ.ಕಾಪು ಮುಹಮ್ಮದ್ ಹಾಗೂ ಮನಾಲ್ ಕಾಪು ವ್ಯಕ್ತಿತ್ವ ವಿಕಸನ ಶಿಬಿರ ನಡೆಸಿಕೊಟ್ಟರು.
►►ಮರ್ಹೂಂ ಬಿ.ಎಂ. ಮುಮ್ತಾಝ್ ಅಲಿ ಸ್ಮಾರಕ ಐವರು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಿಶೇಷ ವಿದ್ಯಾರ್ಥಿವೇತನ ವಿತರಿಸಲಾಯಿತು.
►►ಅಜ್ಮಾನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ನೀಡಿದ ವಾಗ್ದಾನದಂತೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಅರ್ಹತೆ ಪಡೆದ ವಿದ್ಯಾರ್ಥಿನಿ ಖದೀಜಾ ರಿಫಾ ಅವರಿಗೆ ಕಲಿಕೆಗೆ ಪೂರಕವಾದ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು.











