ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಹೊಸ ಅಧ್ಯಾಯವನ್ನು ಆರಂಭಿಸಿದ್ದು, ಮಂಗಳೂರಿನ ಬೆಂದೂರ್ವೆಲ್‌ನ ಸೆಂಟ್ ತೆರೇಸಾ ಐಸಿಎಸ್ಇ ಶಾಲೆ ಜಿಲ್ಲೆಯಲ್ಲೇ ಮೊದಲ ಬಾರಿಗೆ 'ಐರಿಸ್' (IRIS) ಎಂಬ ಎಐ ರೋಬೋ ಶಿಕ್ಷಕಿಯನ್ನು ಪರಿಚಯಿಸುವ ಮೂಲಕ ವಿನೂತನ ಸಾಧನೆ ಮಾಡಿದೆ.
ಸಾಂಪ್ರದಾಯಿಕ ಬೋಧನಾ ವಿಧಾನಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿರುವ ಶಾಲೆಯು, ವಿದ್ಯಾರ್ಥಿಗಳ ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಈ ಎಐ ಆಧಾರಿತ ರೋಬೋ ಶಿಕ್ಷಕಿಯನ್ನು ಬೋಧನಾ ವ್ಯವಸ್ಥೆಗೆ ಸೇರ್ಪಡೆಗೊಳಿಸಿದೆ.
ಇತ್ತೀಚೆಗೆ ಶಾಲೆಗೆ ಆಗಮಿಸಿರುವ 'ಐರಿಸ್' ಅನ್ನು ಒಂದರಿಂದ 11ನೇ ತರಗತಿವರೆಗಿನ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ವಿಶೇಷವಾಗಿ ಪ್ರೋಗ್ರಾಮ್ ಮಾಡಲಾಗಿದೆ. ಶಾಲೆಯ ಎಐ ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ರೋಬೋ ಶಿಕ್ಷಕಿ, ಪಠ್ಯ ಹಾಗೂ ಪಠ್ಯೇತರ ವಿಷಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತ್ವರಿತ ಮತ್ತು ನಿಖರ ಉತ್ತರಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ.
ತಂತ್ರಜ್ಞಾನ ಆಧಾರಿತ ಕಲಿಕಾ ವಾತಾವರಣವನ್ನು ರೂಪಿಸುವ ನಿಟ್ಟಿನಲ್ಲಿ ಶಾಲೆಯ ಈ ಪ್ರಯತ್ನ ಗಮನ ಸೆಳೆದಿದ್ದು, ಭವಿಷ್ಯದ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
