ಹೆಜಮಾಡಿ ಟೋಲ್ ವಿರುದ್ಧ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ; 15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ, ಅನಿರ್ದಿಷ್ಟಾವಧಿಯ ಹೋರಾಟ: ವಿನಯ್ ಕುಮಾರ್ ಸೊರಕೆ ಎಚ್ಚರಿಕೆ

ಹೆಜಮಾಡಿ: ಹೆಜಮಾಡಿ ಬೈಪಾಸ್ ಟೋಲ್ ಪ್ಲಾಜಾದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ, ಸ್ಥಳೀಯ ನಿವಾಸಿಗಳ ಮೇಲಿನ ಟೋಲ್ ದೌರ್ಜನ್ಯ ಹಾಗೂ ವರ್ಷಗಳಿಂದ ಮುಂದುವರಿದಿರುವ ಸಮಸ್ಯೆಯನ್ನು ಖಂಡಿಸಿ ಶನಿವಾರ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಟಿಭಟನೆ ನಡೆಸಲಾಯಿತು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪ್ರಬೋಧ್ ಚಂದ್ರ ಹೆಜ್ಮಾಡಿ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೀಜ್ ಹುಸೇನ್ ಅವರ ಯಶಸ್ವಿ ನಾಯಕತ್ವದಲ್ಲಿ ಹೆಜಮಾಡಿ ಬೈಪಾಸ್ ಟೋಲ್ ಪ್ಲಾಜಾ ಬಳಿ ಬೃಹತ್ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಹಿಂದುಳಿದ ವರ್ಗಗಳ ಘಟಕ, ಅಲ್ಪಸಂಖ್ಯಾತ ಘಟಕ, ಎಸ್‌.ಸಿ./ಎಸ್‌.ಟಿ. ಘಟಕ, ವಿವಿಧ ಕಾಂಗ್ರೆಸ್ ಘಟಕಗಳ ಪದಾಧಿಕಾರಿಗಳು, ಆಟೋ ಚಾಲಕರ ಸಂಘ, ಟ್ಯಾಕ್ಸಿ ಸಂಘ, ಟೆಂಪೋ ಚಾಲಕರ ಸಂಘ, ವ್ಯಾಪಾರಸ್ಥರು, ಅಂಗಡಿ ಮಾಲೀಕರು, ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಟೋಲ್ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಬಳಿಕ ಟೋಲ್ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯಲ್ಲಿ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು 15 ದಿನಗಳ ಕಾಲಾವಕಾಶ ನೀಡುವಂತೆ ಟೋಲ್ ಆಡಳಿತ ಮನವಿ ಮಾಡಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ಕುಮಾರ್ ಸೊರಕೆ, ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ಇನ್ನು ಮುಂದೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಟೋಲ್ ನಿರ್ವಹಣಾ ಸಂಸ್ಥೆಯ ಮನವಿಯನ್ನು ಗೌರವಿಸಿ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿದ್ದರೆ ಕಾಂಗ್ರೆಸ್ ಪಕ್ಷ ಜನರೊಂದಿಗೆ ಸೇರಿ ಉಗ್ರ ಹಾಗೂ ಅನಿರ್ದಿಷ್ಟಾವಧಿಯ ಹೋರಾಟ ನಡೆಸಲಿದೆ. ಅದರ ಸಂಪೂರ್ಣ ಹೊಣೆಗಾರಿಕೆ ಟೋಲ್ ನಿರ್ವಹಣಾ ಸಂಸ್ಥೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ ಎಂದು ಎಚ್ಚರಿಕೆ ನೀಡಿದರು.










ಪ್ರಬೋಧ್ ಚಂದ್ರ ಹೆಜ್ಮಾಡಿ ಮಾತನಾಡಿ, ಹೆಜಮಾಡಿ ಹಾಗೂ ಪಡುಬಿದ್ರಿ ಭಾಗದ ಜನರು ಹಲವು ವರ್ಷಗಳಿಂದ ಅನ್ಯಾಯ ಅನುಭವಿಸುತ್ತಿದ್ದಾರೆ. ಇದು ರಾಜಕೀಯ ಹೋರಾಟವಲ್ಲ; ಜನರ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ. ನ್ಯಾಯ ದೊರೆಯುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ರಮೀಜ್ ಹುಸೇನ್ ಮಾತನಾಡಿ, ಹೆಜಮಾಡಿ ಮತ್ತು ಪಡುಬಿದ್ರಿ ಭಾಗದ ಜನರು ಇಂದು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿದ್ದಾರೆ. ಜನರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಂಡಿಸಲಾದ ಪ್ರಮುಖ ಬೇಡಿಕೆಗಳು

ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತ ಹಾಗೂ ಟೋಲ್ ನಿರ್ವಹಣಾ ಸಂಸ್ಥೆಯ ಮುಂದೆ ಈ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಮಂಡಿಸಿ, ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

►PWD ರಸ್ತೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಟೋಲ್ ಸಂಗ್ರಹಣೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಅದರ ಕಾನೂನುಬದ್ಧತೆಯ ಕುರಿತು ಸಮಗ್ರ ತನಿಖೆ ನಡೆಸಬೇಕು.

►ಹೆಜಮಾಡಿ ಹಾಗೂ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೆ ಶಾಶ್ವತ ಟೋಲ್ ವಿನಾಯಿತಿ ಅಥವಾ ಉಚಿತ Local Pass ವ್ಯವಸ್ಥೆಯನ್ನು ಜಾರಿಗೊಳಿಸಬೇಕು.

►ಹೆಜಮಾಡಿ ಹಾಗೂ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಾಹನಗಳನ್ನು ಅನಗತ್ಯವಾಗಿ ತಡೆದು ಸಾರ್ವಜನಿಕರಿಗೆ ಮಾನಸಿಕ ಹಾಗೂ ಆರ್ಥಿಕ ತೊಂದರೆ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು.

►ಟೋಲ್ ನಿರ್ವಹಣಾ ಸಂಸ್ಥೆ, ಜಿಲ್ಲಾಡಳಿತ ಹಾಗೂ ಹೆಜಮಾಡಿ–ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಸಮ್ಮುಖದಲ್ಲಿ ಮುಕ್ತ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

►ಟೋಲ್ ಸಂಗ್ರಹಣೆಯ ಒಪ್ಪಂದ, ಕಾನೂನುಬದ್ಧತೆ ಹಾಗೂ ಸಾರ್ವಜನಿಕರಿಗೆ ದೊರೆಯಬೇಕಾದ ಹಕ್ಕುಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕು.

►ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಜಾರಿಯಲ್ಲಿರುವ ವ್ಯವಸ್ಥೆಯಂತೆಯೇ, ಹೆಜಮಾಡಿ ಹಾಗೂ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೂ ಯಾವುದೇ ತಾರತಮ್ಯವಿಲ್ಲದೆ ಶಾಶ್ವತ ಟೋಲ್ ವಿನಾಯಿತಿ ಹಾಗೂ Local Pass ವ್ಯವಸ್ಥೆಯನ್ನು ಜಾರಿಗೊಳಿಸಬೇಕು.

►ಹೆಜಮಾಡಿ ಹಾಗೂ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೆ ವಾಹನದ ನೋಂದಣಿ ಪ್ರಮಾಣಪತ್ರ (RC) ಕಡ್ಡಾಯಗೊಳಿಸುವ ಪದ್ಧತಿಯನ್ನು ತಕ್ಷಣವೇ ರದ್ದುಪಡಿಸಿ, ಆಧಾರ್ ಕಾರ್ಡ್ ಅಥವಾ ಸರ್ಕಾರದಿಂದ ನೀಡಲಾದ ಯಾವುದೇ ಮಾನ್ಯ ಗುರುತಿನ ಚೀಟಿಯ ಆಧಾರದ ಮೇಲೆ ಗುರುತಿಸಿ, ಟೋಲ್ ವಿನಾಯಿತಿ ಹಾಗೂ Local Pass ಸೌಲಭ್ಯವನ್ನು ಒದಗಿಸುವಂತೆ ಸಂಬಂಧಪಟ್ಟ ಟೋಲ್ ಸಂಸ್ಥೆಗೆ ಜಿಲ್ಲಾಡಳಿತವು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು.











ಪ್ರತಿಭಟನೆಯಲ್ಲಿ  ವೈ.ಸುಕುಮಾರ್, ಅಶೋಕ್ ಕುಮಾರ್ ಕೊಡವೂರು, ನವೀನ್ ಚಂದ್ರ ಜೆ. ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೃಷ್ಣ ಶೆಟ್ಟಿ, ಗುಲಾಮ್ ಅಹಮದ್, ನವೀನ್ ಎನ್. ಶೆಟ್ಟಿ,  ಅಶ್ವಿನ್ ಕೋಟ್ಯಾನ್, ಸುಧೀರ್ ಕರ್ಕೇರ, ಮಹಮ್ಮದ್ ನಿಜಾಮುದ್ದೀನ್, ಶಾಂತಲತಾ ಶೆಟ್ಟಿ, ಅಬ್ದುಲ್ ಅಜೀಜ್ ಹೆಜ್ಮಾಡಿ, ಫರ್ಜಾನ, ಅಶ್ವಿನಿ ಬಂಗೇರ, ಜೀನರಾಜ್ ಬಂಗೇರ, ದಯಾನಂದ್ ಹೆಜ್ಮಾಡಿ, ಮೋಹನ್ ದಾಸ್ ಹೆಜಮಾಡಿ, ವಿಶಾಲ್ ಬಂಗೇರ, ದೀಕ್ಷಾ ಕೆ., ಸಂತೋಷ್ ಪಡುಬಿದ್ರಿ, ಕೇಶವ್ ಸಾಲ್ಯಾನ್, ಹಾಜಿ ಶೇಕಬ್ಬ ಕೋಟೆ, ಪ್ರಜ್ವಲ್ ಸಾಲ್ಯಾನ್, ತಸೀನ್ ಅರಾ, ಕೀರ್ತಿ ಕುಮಾರ್, ಹಸನ್‌ ಕೋಡಿ, ಜ್ಯೋತಿ ಮೆನನ್, ಸುಚರಿತಾ ಅಮೀನ್, ಮಹಮ್ಮದ್ ಶರೀಫ್, ವಿಠಲ್ ಮಾಸ್ಟರ್, ಹಮೀದ್ ಹಾಜಿ, ಸನಾ ಇಬ್ರಾಹಿಂ, ಶಿವರಾಮ್ ಶೆಟ್ಟಿ, ಸೌಮ್ಯ ರಿತೇಶ್, ರೋಶಾನ್ ಕಾಂಚನ್, ಶಾಫಿ ಎಂ.ಎಸ್., ಸಯ್ಯದ್ ನಿಜಾಮುದ್ದೀನ್, ಲೋಕೇಶ್ ಅಮೀನ್, ಅಬ್ದುಲ್ ರಜಕ್, ಅಬ್ದುಲ್ ಹಮೀದ್, ಶೇಖರ್ ಕಿಟ್ಟ ಸುವರ್ಣ, ವಿಕ್ರಮ್ ರಾಜ್ ಸುವರ್ಣ, ನಿರ್ಮಲ ಹಾಗೂ ಕಬೀರ್ ಹೆಜ್ಮಾಡಿ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

15 ದಿನಗಳೊಳಗೆ ನ್ಯಾಯಯುತ ಹಾಗೂ ಶಾಶ್ವತ ಪರಿಹಾರ ದೊರೆಯದಿದ್ದರೆ ಜಿಲ್ಲಾಮಟ್ಟದ ಬೃಹತ್ ಜನಾಂದೋಲನ, ಉಗ್ರ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿಯ ಹೋರಾಟದ ಮುಂದಿನ ಹಂತವನ್ನು ಕಾಂಗ್ರೆಸ್ ಪಕ್ಷ ಘೋಷಿಸಲಿದೆ ಎಂದು ನಾಯಕರು ಎಚ್ಚರಿಕೆ ನೀಡಿದರು.