ಪಂಜಾಬಿನ 'ಕ್ಯಾನ್ಸರ್ ರೈಲು'; ನೋವಿನ ಜೊತೆಗಿನ ಆಶಾಕಿರಣ!

ನಾನು ಕುಳಿತುಕೊಂಡ ರೈಲು ದಿಲ್ಲಿಯಿಂದ ಪಂಜಾಬಿನತ್ತ ಹೊರಟಾಗ ಮುಂಜಾನೆಯ ಎಂಟು ಗಂಟೆ, ಕಛೇರಿ, ನಗರ, ಊರಿಗೆಂದು ಹೊರಟವರ ನೂಕು ನುಗ್ಗಲು, ಅವಸರ ಎಲ್ಲೆಡೆ ಕಾಣುತ್ತಿತ್ತು.

ರೈಲು ಪಂಜಾಬಿನ ಗಡಿಯತ್ತ ಬಂದಾಗ ಜನವಸತಿಗಳೇ ಮಾಯವಾಗಿ ಹೋಯಿತು. ಎಲ್ಲೆಡೆ ಹಸಿರು ತುಂಬಿದ ಹೊಲಗದ್ದೆ, ಕೃಷಿಭೂಮಿ, ಹಸಿರು ಚಾದರ ಹೊದ್ದ ಪ್ರಕೃತಿಯ ತೋಟವೇ ಕಾಣ ಲಾರಂಭಿಸಿತು. ನಾವು ಸಾಗುವ ಹಾದಿಯು ಅದರ ನಡುವೆ ಇದ್ದು, ನೆತ್ತಿಯ ಮೇಲಿನ ಬೈತಲೆಯಂತೆ ತೋರುತ್ತಿತ್ತು. ನಮ್ಮಂತೆ ಇಲ್ಲಿಯ ಹೊಲಗದ್ದೆಗಳಲ್ಲಿ ಬಲವಾದ ಬೇಲಿಗಳಿರಲಿಲ್ಲ. ಅವು ನೂರಾರು ಎಕರೆ ಗಳಿಗೆ ಹಬ್ಬಿಕೊಂಡು ವಿಶಾಲ ಸಾಗರದಂತೆ ಕಾಣುತ್ತಿತ್ತು. ಅಲ್ಲಿ ಉಳುಮೆ, ಬಿತ್ತನೆ, ಕಟಾವಿಗೆ ಕೆಲಸದಾಳುಗಳು ಗೋಚರಿಸುತಿದ್ದದ್ದು ಬಲು ಅಪರೂಪ. ಯಂತ್ರಗಳೇ ಇಲ್ಲಿಯ ಜೀವಾಳ. ಅವರೇ ದುಡಿಯುವ ನಿಜವಾದ ರೈತರು!

ಅಂದಹಾಗೆ, ಪಂಜಾಬ್ ಭಾರತಕ್ಕೆ ಆಹಾರದ ಬಟ್ಟಲು. ಅದು ದೇಶದ ಹಸಿರು ಕ್ರಾಂತಿಗೆ ಅತ್ಯುತ್ತಮ ಉದಾಹರಣೆ. ಪಂಚ ನದಿಗಳ ಬೀಡಾದ ಅದು ಗುರು ನಾನಕ್, ಉದಯ್ ಸಿಂಗ್, ರಾಜಗುರು ಮತ್ತು ಭಗತ್ಸಿಂಗ್‌ರಂತಹ ಕ್ರಾಂತಿಕಾರರ ಜನ್ಮ ನಾಡು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಿಂದ ದೇಶಕ್ಕೆ ಸ್ವಾತಂತ್ರ್ಯದ ಕಿಡಿಯನ್ನು ಹತ್ತಿಸಿದ ರಾಜ್ಯ ಇವತ್ತಿಗೂ ದೆಹಲಿಯ ಗದ್ದುಗೆಯ ಆಸುಪಾಸಿನ ಸರಕಾರಿ ಅಧಿಕಾರಿಗಳಿಂದ ಹಿಡಿದು, ಗಡಿ ಕಾಯುವ ಮಿಲಿಟರಿ ಯೋಧರವರೆಗೂ ಇವರದ್ದೇ ಚಹರೆಗಳು. ಸಾಹಿತ್ಯ, ಕ್ರೀಡೆ, ರಾಜಕೀಯ, ಸಿನಿಮಾ, ನಾಟಕ, ಗಾಯನ ಅನ್ನುತ್ತ ಇವರದ್ದೇ ಹೆಚ್ಚಿನ ಕಾರುಬಾರು. ಇವರ ಸರಕಿನ ಟ್ರಕ್ಕುಗಳು ಓಡಾಡದ ರಸ್ತೆಗಳಿಲ್ಲ. ದುಬ್ಬಾ ಯಿಂದ ಹಿಡಿದು ಕೆನಡದವರೆಗೂ ಇವರ ಗುರುದ್ವಾರ್' ಹಾಗೂ 'ಪೇಟ'ಗಳು ಎದ್ದು ಕಾಣುತ್ತವೆ. ನಮ್ಮ ದೇಶದಲ್ಲಿ ಎಲ್ಲಿ ಹೋದರೂ ಭಿಕ್ಷುಕರ ಕಾಟ ತಪ್ಪದು. ಆದರೆ ಇವರಲ್ಲಿ ಭಿಕ್ಷೆ ಬೇಡುವವರೇ ಇಲ್ಲ. ಇದ್ದರೆ ಅದು ಅವರ ಧರ್ಮಕ್ಕೆ ದೊಡ್ಡ ಕಳಂಕ. ಧೈರ್ಯ, ತ್ಯಾಗ ಮತ್ತು ನಿಷ್ಠೆಗೆ ಖ್ಯಾತಿಯನ್ನು ಹೊಂದಿರುವ ಸರ್ದಾ‌ರ್ಗಗಳು, ದಾನದಲ್ಲೂ ಎತ್ತಿದ ಕೈ.

ಐದು ದಿನ ಪಂಜಾಬಿನಲ್ಲಿ ಕಳೆದ ನಾನು ಆ ನಾಡಿನ ಹಲವು ಹಳ್ಳಿಗೆ ಭೇಟಿ ನೀಡಿದೆ. ರೈತರ ಕೈ ಕುಲುಕಿದೆ. ಎತ್ತಿನ ಬಂಡಿಗಳಲ್ಲಿ ಸುತ್ತಾಡಿದೆ. ಟ್ರ್ಯಾಕ್ಟರ್ ಹತ್ತಿ ಓಡಾಡಿದೆ. ಸಿಹಿ ಕಬ್ಬು ಜಗಿದೆ, ಜೋಳದ ತೆನೆಗಳನ್ನು ಸುಟ್ಟು ತಿಂದೆ. ಅವರ ಹಸಿರು ಕ್ರಾಂತಿಗೆ ತುಂಬಾ ಸಂತೋಷಗೊಂಡೆ. ಆದರೆ ಪಂಜಾಬಿನ ನಗರವಲಯದ ಹಳ್ಳಿಗಳನ್ನು ತೊರೆದು ಒಳ ಹೊಕ್ಕಾಗ ಆ ಆನಂದವೇ ಮಾಯ ವಾಗುತ್ತಾ ಬಂತು. ಏಕೆಂದರೆ ಅವರು ಉತ್ಸಾಹಿತರಾಗಿರಲಿಲ್ಲ, ಅವರ ಮಕ್ಕಳು ಸುಖವಾಗಿರಲಿಲ್ಲ. ಹೆತ್ತವರು ಸಂತೋಷ ವಾಗಿರಲಿಲ್ಲ, ಹೊಟ್ಟೆ, ಬಟ್ಟೆ ಶ್ರೀಮಂತಿಕೆಗೆ ಕೊರತೆ ಇಲ್ಲದಿದ್ದರೂ, ಅವರ ಮುಖ ಗಳಲ್ಲಿ ವಿಷಾದದ ಛಾಯೆಗಳಿದ್ದವು. ನಾಳೆಯ ಭವಿಷ್ಯದ ಕುರಿತು ಚಿಂತೆಗಳಿ ದ್ದವು. ಅವರ ಈ ದುರ್ಬಲದ ಬದುಕಿಗೆ ಇವರು ಮಾತ್ರವಲ್ಲ, ಇವರ ಹಿರಿಯರು ಕೂಡ ಕಾರಣಕರ್ತರಾಗಿದ್ದರು.

ಇವತ್ತಿಗೂ ನಾವು ಪಂಜಾಬ್ 'ಹತ್ತಿಯ ಕಣಜ' ಅನ್ನುತ್ತೇವೆ. ಏಕೆಂದರೆ ಅಲ್ಲಿ ಅತೀ ಹೆಚ್ಚು ಹತ್ತಿ ಬೆಳೆಯುತ್ತದೆ. ಅಕ್ಕಿ, ಗೋಧಿ, ಬಾಸ್ಮತಿ ಅಕ್ಕಿಗೂ ಅದು ತುಂಬಾ ಪ್ರಸಿದ್ಧ. ಅದರ ರಫ್ತು ಜಗತ್ತಿನಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಭಾರತದಲ್ಲಿ ಉತ್ಪಾದನೆಯಾಗುವ ಶೇಕಡ 67ರಷ್ಟು ಹತ್ತಿ ಪಂಜಾಬಿನ ಕೊಡುಗೆ.

ಆದರೆ ಅವರು ಈ ಸ್ಥಾನಮಾನಗಳನ್ನು ಗಳಿಸುವ, ಉಳಿಸುವ ಅವಸರದಲ್ಲಿ ಕೃಷಿಯ ನೀತಿ-ನಿಯಮಗಳನ್ನು ಗಾಳಿಗೆ ತೂರಿದರು. ಹೊಲ ಗದ್ದೆಗಳ ಇಳವರಿಯ ಹೆಚ್ಚಳಕ್ಕೆ, ಲಾಭದ ಆಸೆಗೆ, ಹಣ ಸಂಪಾದಿಸುವ ಮೋಹಕ್ಕೆ ಬೇಕಾಬಿಟ್ಟಿ ರಾಸಾಯನಿಕವನ್ನು ಉಪಯೋಗಿಸಿದರು. ಕೃತಕ ಗೊಬ್ಬರ, ಕಳೆನಾಶಕ, ಕ್ರಿಮಿನಾಶಕ ಔಷಧಿ ಇತ್ಯಾದಿಗಳನ್ನು ಧಾರಾಳವಾಗಿ ಸಿಂಪಡಿಸಿದರು. ಉಳಿದ ರಾಜ್ಯಗಳಲ್ಲಿ ಈ ಅಂಶವು ಐದಾರು ಶೇಕಡಾ ಆದರೆ, ಇಲ್ಲಿ 16-18 ಪಟ್ಟು ಹೆಚ್ಚಿತ್ತು. ಪರಿಣಾಮವಾಗಿ ಬೆಳೆ, ನೀರು, ಗಾಳಿಯೂ ಕಲು ಷಿತಗೊಂಡು ಇಡೀ ವಾತಾವರಣವನ್ನೇ ಅದು ಹಾಳು ಮಾಡಿತು. ಈ ರಾಸಾಯನಿಕ ಆಹಾರದ ಮೂಲಕ ಹೊಟ್ಟೆಯನ್ನು ಸೇರಿಕೊಂಡಾಗ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿತು. ಇಲ್ಲಿ ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು ಕೂಡ ಚಡಪಡಿಸಿದವು.

ಈಗ ಮುಖ್ಯವಾಗಿ ಕಾಣಿಸಿದ್ದು ಗರ್ಭಕೋಶ, ಸ್ತನ ಮತ್ತು ಅನ್ನನಾಳದ ಕ್ಯಾನ್ಸರ್ ಕಾಯಿಲೆ. ಗಂಡಸರಿಗೆ ಸಂತಾನ ಹೀನತೆ ಮತ್ತು ಮೂತ್ರಪಿಂಡದ ತೊಂದರೆ ಗರ್ಭಪಾತ ಹಾಗೂ ಅಕಾಲ ಪ್ರಸವಗಳು ಸಾಮಾನ್ಯ ಅನಿಸಿದವು. ಹುಟ್ಟಿದ ಮಕ್ಕಳಿಗೆ ಗಳು, ಮಹಿಳೆಯರಿಗೂ ಪದೇ ಪದೇ ಕಾಡಿದ ಮುಖ್ಯ ಸಮಸ್ಯೆಯೆಂದರೆ, ಕುರುಡುತನ, ಅಂಗವಿಕಲತೆ ಮತ್ತು ಬುದ್ದಿಮಾಂದ್ಯತೆ. ಹಲವು ತಾಯಿ-ತಂದೆ ಯರಿಗೆ ಇಂತಹ ಮಕ್ಕಳು ಹುಟ್ಟದೇ ಇರುತ್ತಿದ್ದರೆ ಚೆನ್ನಾಗಿತ್ತು ಅನ್ನುವ ಜಿಗುಪ್ಪೆ ಗಳು ಮೂಡಲಾರಂಭಿಸಿತು. ಕೆಲವು ನವ ದಂಪತಿಗಳು ಇದಕ್ಕೆ ಭಯಪಟ್ಟು ಮಕ್ಕಳೇ ಬೇಡವೆಂಬ ನಿರ್ಧಾರಕ್ಕೆ ಬಂದರು.

ಪಂಜಾಬ್ ಸರಕಾರದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಾಗ ಈ ವಿಷ ಅಲ್ಲಿಯ ಮಣ್ಣಿನಲ್ಲಿ ಮತ್ತು ಹೊಟ್ಟೆಯೊಳಗೆ ಸೇರಿಯಾಗಿತ್ತು. ಇದನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರೂ, ಅದು ಪೂರ್ಣ ಮಟ್ಟಿಗೆ ಯಶಸ್ವಿಯಾಗಲಿಲ್ಲ. ಸರಕಾರಿ ವರದಿಯ ಪ್ರಕಾರ ಕಳೆದ ಐದು ವರುಷ ಗಳಲ್ಲಿ ಸಂಭವಿಸಿದ ಮರಣಗಳಲ್ಲಿ ಕ್ಯಾನ್ಸರಿನ ಸಾವುಗಳೇ ಅತ್ಯಧಿಕ.

ಇವತ್ತು ಭಟಿಂಡಾ, ಫರಿದ ಕೋಟ್, ಮೋಗಾ, ಮುಕ್ತಸರ್, ಫಿರೋಝ್ ಪುರ್, ಬರ್ನಾಲಾ, ಸಂಗ್ರೂರ್, ಮಾನ್ಸಾ, ಲುಧಿಯಾನ ಮುಂತಾದ ಹಳ್ಳಿಗಳಲ್ಲಿ ಸುತ್ತಾಡಿದರೆ ರೋಗಿಗಳಿಲ್ಲದ ಮನೆಗಳೇ ಇಲ್ಲ. ಎಲ್ಲರಿಗೂ ಒಂದೊಂದು ರೀತಿಯ ಕಾಯಿಲೆಗಳು. ಬಡ ರೈತರು ತಮ್ಮ ಮನೆಯ ಆಧಾರಸ್ತಂಭವನ್ನು ಉಳಿಸಿ ಕೊಳ್ಳಲು ಇರುವ ಸಾಕಷ್ಟು ಹೊಲಗದ್ದೆ ಗಳನ್ನು ಮಾರಿದ ಉದಾಹರಣೆಗಳಿವೆ. ಕೆಲವರು ತಮ್ಮ ಮನೆಯನ್ನೇ ಒತ್ತೆ ಇಟ್ಟ ಘಟನೆಗಳಿವೆ.

ಇಂದು ಈ ಹಳ್ಳಿಗಳಿಗೆ ಆಗಮಿಸುವ ಪ್ರವಾಸಿಗರು ಅಥವಾ ಸರಕಾರಿ ಅಧಿಕಾರಿಗಳು ಅಲ್ಲಿಯ ಮನೆಗಳ ಮಜ್ಜಿಗೆ ಬಿಡಿ, ಒಂದು ಲೋಟ ನಿರನ್ನೂ ಕುಡಿಯುವು ದಿಲ್ಲ. ನೀರನ್ನು ಅವರು ಚಾಟಲಿಯಲ್ಲಿಯೇ ತುಂಬಿ ತರುತ್ತಾರೆ. ಊಟವನ್ನು ಬುತ್ತಿ ಯಲ್ಲೇ ಕಟ್ಟಿ ತರುತ್ತಾರೆ.

ಪಂಜಾಬಿನಲ್ಲಿ ಈ ಸಮಸ್ಯೆಗಳು ತೀವ್ರವಾಗಿ ಕಾಣಿಸಿಕೊಂಡಿದ್ದು, 1997-98ರ ಆಸುಪಾಸಿನಲ್ಲಿ. ಇಲ್ಲಿಯ ಬೆಳೆ ಬಾಳುವ ಹತ್ತಿಯ ಗಿಡಗಳಿಗೆ ವಿಚಿತ್ರವಾದ ಹುಳಗಳು ದಾಳಿ ಮಾಡಿದಾಗ ಇವರು ಬೆಳೆಗಳಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿ ದರು. ರೈತರಿಗೆ ಈ 'ಬೋಲ್ ವರ್ಮ್'

ಎಂಬ ಕೀಟಗಳು ಸವಾಲಾಗಿ ನಿಂತಾಗ, ಅವರು ಪರಿಣಾಮಕಾರಿಯಾದ ಔಷಧಿ ಗಾಗಿ ಕಾಯುತ್ತಿದ್ದರು. ಇದನ್ನೇ ಬಂಡ ವಾಳ ಮಾಡಿಕೊಂಡ ವಿದೇಶಿ ಕಂಪೆನಿಗಳು ದೊಡ್ಡ ದೊಡ್ಡ ಕ್ಯಾನುಗಳಲ್ಲಿ ಅದನ್ನು ಹೊತ್ತು ತಂದರು. ಅದನ್ನು ಬೇಕಾಬಿಟ್ಟೆ ಸಿಂಪಡಿಸಿದರು. ಜೊತೆಗೆ ಖಾಲಿಯಾದ ಕ್ಯಾನುಗಳನ್ನು ಗೃಹ ಬಳಕೆಯ ನೀರಿಗಾಗಿ ಉಪಯೋಗಿಸಿದರು. ಇದೇ ಅವರು ಮಾಡಿದ ದೊಡ್ಡ ತಪ್ಪು!

ಈ ವಿಷವನ್ನು ಸಿಂಪಡಿಸಿದ ಬಳಿಕ ಅವರ ಹೊಲಗದ್ದೆಗಳಿಂದ ನವಿಲು, ಸಣ್ಣ ಸಣ್ಣ ಗುಬ್ಬಚ್ಚಿ ಹಕ್ಕಿಗಳು, ಹದ್ದು, ಗೂಬೆ ಮುಂತಾದವುಗಳು ಊರನ್ನೇ ತೊರೆದು ದೂರಕ್ಕೆ ಹಾರಿ ಹೋದವು. ಇದರಿಂದಲೇ ಈ ರೈತರು ಪಾಠವನ್ನು ಕಲಿಯಬೇಕಿತ್ತು. ಆದರೆ ಅವರು ಮೂರು ತಿಂಗಳಿಗೆ ಬರೇ ಮೂರು ಬಾರಿ ಸಿಂಪಡಿಸಬೇಕಾದ ರಾಸಾಯನಿಕವನ್ನು ಮನಸಾರೆ ಸಿಂಪಡಿಸಿ ದರು. ಅವರಿಗೆ ತಿಳಿ ಹೇಳಲು ಅಲ್ಲಿ ಕಂಪೆನಿಯ ಯಾವ ಅಧಿಕಾರಿಯಾಗಲಿ, ರೈತ ಮುಖಂಡರಾಗಲಿ ಇರಲಿಲ್ಲ. ಹೆಚ್ಚಿನ ರೈತರಿಗೆ ಅಲ್ಲಿ ಬರೆದಿದ್ದ ಆಂಗ್ಲ ಭಾಷೆಯೇ ಓದಲು ಬರುತ್ತಿರಲಿಲ್ಲ.

ಆದರೆ ಇಂದು ಸರಕಾರ ಅವರನ್ನು ಜಾಗೃತಗೊಳಿಸಿದೆ. ಅದರ ಕೆಟ್ಟ ಪರಿಣಾಮ ಗಳನ್ನು ತಿಳಿಸಿಕೊಟ್ಟಿದೆ. ಈ ಕಾರಣ ದಿಂದಲೇ ಈಗೀಗ ಆರೋಗ್ಯ ಸುಧಾರಿಸಿ ಕೊಳ್ಳುತ್ತಿದೆ. ರೈತರ ಉಗುರಿನ ಬಣ್ಣ ಬದಲಾಗುವುದು, ತುರಿಕೆ, ತಲೆ ಸುತ್ತುವಿಕೆ, ವಾಕರಿಕೆ, ತಲೆನೋವು, ಕಣ್ಣು ಉರಿ, ಸಂದು ನೋವು, ಮಂದ ಕಣ್ಣು ಮತ್ತು ಮೂತ್ರದ ನಿಂತಿದೆ. ಹಾಗೆ ಅನಾರೋಗ್ಯಗೊಂಡು ಸಾಯುತ್ತಿದ್ದ ದನ- ಕರು-ಎತ್ತುಗಳ ಸಾವಿನ ಸಂಖ್ಯೆಯೂ ಕಡಿಮೆಯಾಗಿವೆ.

ಅಮೃತಸರ ಮತ್ತು ಜಲಂಧರ ಪಟ್ಟಣ ಗಳಲ್ಲಿ ಉಷ್ಣ ವಿದ್ಯುತ್ ಮತ್ತು ಕಾರ್ಖಾನೆ ಗಳು ಹೆಚ್ಚಿವೆ. ಇಲ್ಲಿಂದ ಹೊರಡುವ ಕಲುಷಿತ ಗಾಳಿ ಮತ್ತು ಹೊಗೆ ಇಡೀ ವಾತಾವರಣವನ್ನೇ ಹಾನಿ ಮಾಡುತ್ತವೆ. ಜೊತೆಗೆ ಪ್ರತಿ ವರುಷ 20 ಮಿಲಿಯನ್ ಟನ್ ಭತ್ತದ ಹೊಟ್ಟನ್ನು ಸುಡುತ್ತಾರೆ. ಈ ವಿಷಪೂರಿತ ಅನಿಲ ಇಡೀ ಪರಿಸರವನ್ನೇ ಮಲಿನ ಮಾಡುತ್ತದೆ. ಇದರ ಪರಿಣಾಮ ವಾಗಿ ಮಕ್ಕಳಲ್ಲಿ ಟಿ.ಬಿ., ಆಸ್ತಮಾ, ಚರ್ಮರೋಗ ಮತ್ತು ಫಿಟ್ಸ್ನಂತಹ ಕಾಯಿಲೆಗಳು ತೀವ್ರವಾಗಿ ಕಾಡುತ್ತದೆ. ಸರಕಾರವು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ.

ದುರಂತವೆಂದರೆ ಪಂಜಾಬಿನಿಂದ ರಾಜಸ್ತಾನಕ್ಕೆ ಹೊರಡುವ ರೈಲಿನಲ್ಲಿ 'ಕ್ಯಾನ್ಸರ್ ಎಕ್ಸ್‌ಪ್ರೆಸ್' ಅನ್ನುವ ಪ್ರತ್ಯೇಕ ಭೋಗಿಯೇ ಇದೆ. ಅದರಲ್ಲಿ ಈ ಕಾಯಿಲೆಗಳಿಂದ ಬಳಲುವ ರೋಗಿಗಳ ದಂಡೇ ಇರುತ್ತವೆ. ಅವುಗಳಲ್ಲಿ ಮಕ್ಕಳ ಸಂಖ್ಯೆಗಳೇ ಹೆಚ್ಚು ಪಂಜಾಬಿನಲ್ಲಿ ಹಲವು ಆಸ್ಪತ್ರೆಗಳಿದ್ದರೂ ಅವುಗಳ ಚಿಕಿತ್ಸೆ ತುಂಬಾ ದುಬಾರಿ. ಹೀಗಾಗಿ ಬಡ ರೈತರು ರಾಜಸ್ತಾನದ ಬಿಕಾನೇರ್‌ಗೆ ತೆರಳುತ್ತಾರೆ. ಅಲ್ಲಿ ಕಡಿಮೆ ದರದ ಔಷಧಿ ಹಾಗೂ ಉಚಿತ ಚಿಕಿತ್ಸೆ ದೊರೆಯುತ್ತದೆ. ಅಲ್ಲಿಯ ಧರ್ಮಶಾಲಾ ಅನ್ನುವ ಸಂಸ್ಥೆಯು ರೋಗಿಗಳಿಗೆ ಮತ್ತು ಜೊತೆಗಾರರಿಗೆ ಕಡಿಮೆ ಬೆಲೆಯ ಊಟ-ತಿಂಡಿಗಳನ್ನೂ ಒದಗಿಸುತ್ತದೆ.

ಈ ರೈಲಿನಲ್ಲಿ ಸಾಗುವ ಪ್ರಯಾಣಿಕರಿಗೆ ಇಲಾಖೆಯು ಉಚಿತ ಪ್ರಯಾಣ ನೀಡುತ್ತಾ ಬಂದಿದೆ. ರೋಗಿಗಳಿಗೆ ಅಲ್ಲಿ ಮಲಗುವ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಆದರೆ ಇಲ್ಲಿ ಗದ್ದಲವಿಲ್ಲ, ಗಲಾಟೆ ಇಲ್ಲ, ಎಲ್ಲರ ಮುಖದಲ್ಲೂ ದುಃಖದ ಛಾಯೆಯೇ ಹಬ್ಬಿಕೊಂಡಿದೆ. ರೋಗಿಯ ಚಹರೆಗಳಲ್ಲಿ ಸಾವು-ಬದುಕಿನ ರೇಖೆಗಳೇ ಕಾಣಿಸುತ್ತವೆ. ಕೆಲವರು ಈ ಭೋಗಿಗಳಿಗೆ ಬಂದು ಧನ ಸಹಾಯ ನೀಡುವವರು ಇದ್ದಾರೆ. ಇನ್ನೂ ಕೆಲವರು ಹಣ್ಣು-ಹಂಪಲು-ಪಾನೀಯಗಳನ್ನು ನೀಡುತ್ತಾರೆ. ದಿನನಿತ್ಯ ನೂರಾರು ರೋಗಿಗಳನ್ನು ಹೊತ್ತು ಸಾಗುವ ಈ ಭೋಗಿಗಳನ್ನು ಕಂಡಾಗ ದುಃಖ-ಅನುಕಂಪವಾಗುತ್ತದೆ.

ಪಂಜಾಬಿನ ಹಳ್ಳಿಯ ಪ್ರವಾಸ ಮುಗಿಸಿದ ನನಗೆ ಒಂದು ರೀತಿಯ ವಿಷಾದದ ವ್ಯಾಕುಲತೆ ಹುಟ್ಟಿತು. ಇವತ್ತು ಪ್ರಪಂಚದ ಅನೇಕ ದೇಶದ ರೈತರು ರಾಸಾಯನಿಕ ಬಳಸದೆ ಕೃಷಿ ಮಾಡುತ್ತಾರೆ. ಅವರ ಉತ್ಪಾದನೆಯಾದ 'ಆರ್ಗೆನಿಕ್'ಗೆ ಬಹು ಬೇಡಿಕೆಯೂ ಇದೆ. ಕೃತಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸದೆ ಮಾಡುವ ಈ ವ್ಯವಸಾಯಕ್ಕೆ ಸರಕಾರವು ಬೆಂಬಲ ನೀಡುತ್ತವೆ.

ನಮ್ಮ ಅಜ್ಜಂದಿರು ಹಿಂದೆ ಮನೆಗಳಲ್ಲಿ ಸೆಗಣಿ ಗೊಬ್ಬರ ಮತ್ತು ಎಲೆಗಳ ಗೊಬ್ಬರ ದಿಂದಲೇ ಹೊಲಗದ್ದೆ ಮತ್ತು ತರಕಾರಿ ಗಳನ್ನು ಬೆಳೆಸುತ್ತಿದ್ದರು. ಅವು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಹಿತಕರವಾಗಿತ್ತು. ಆಗ ಇಂತಹ ಅಪರೂಪದ ಕಾಯಿಲೆಗಳಿರಲಿಲ್ಲ. ಎಲ್ಲರೂ ಸುಖಿಯಾಗಿದ್ದರು. 

ಪಂಜಾಬಿನ ಲಕ್ಷಗಟ್ಟಲೆ ಎಕರೆ ಭೂಮಿಗೆ ಇದು ಸಾಧ್ಯವೋ ಅಸಾಧ್ಯವೋ ನನಗೆ ತಿಳಿಯದು. ಆದರೆ ನಾವು ತಿನ್ನುವ ಆಹಾರವು ವಿಷದ ಬಟ್ಟಲು ಆಗ ಕೂಡದು. ಶುದ್ಧವಾದ ನೀರು, ಗಾಳಿ ಮತ್ತು ಮಣ್ಣು ನಮ್ಮೆಲ್ಲರ ಹಕ್ಕು. ಹೀಗಾಗಿ ಆರೋಗ್ಯಪೂರ್ಣವಾದ ಜೀವನ ಸರ್ವರಿಗೂ ದೊರೆಯಬೇಕು. ಹಸಿರು ಕ್ರಾಂತಿಯ ಬೆನ್ನು ಹತ್ತಿ ಕೊನೆಗೆ ಕ್ಯಾನ್ಸರ್‌ನ ರೈಲಿ ಭೋಗಿ ಹತ್ತಿ ಕುಳಿತರೆ ಬದುಕಿಗೆ ಯಾವ ಅರ್ಥವೂ ಇಲ್ಲ! "

ಇರ್ಷಾದ್ ಮೂಡಬಿದ್ರಿ(ಪ್ರವಾಸಾನುಭವ)