ಊಟ ಬಡಿಸಲು ತಡವಾಯಿತೆಂದು ಅತ್ತಿಗೆಯ ಶಿರಚ್ಛೇದ ಮಾಡಿದ ವ್ಯಕ್ತಿ! ಕತ್ತರಿಸಿದ ರುಂಡವನ್ನು ಮರವೊಂದಕ್ಕೆ ನೇತುಹಾಕಿದ!

ಜೆಹಾನಾಬಾದ್: ಊಟ ಬಡಿಸುವುದಕ್ಕೆ ವಿಳಂಬ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ಕೊಡಲಿಯಿಂದ ತನ್ನ ಅತ್ತಿಗೆಯ ಕತ್ತನ್ನು ಕತ್ತರಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದ ಜೆಹಾನಾಬಾದ್‌ನಲ್ಲಿ ನಡೆದಿದೆ.

ಪಾರ್ಸ್ ಬಿಘಾ ಪೊಲೀಸ್ ಠಾಣಾ ವ್ಯಾಪ್ತಿಯ ಇಮಾದ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯ ನಂತರ ಆರೋಪಿಯು ಕತ್ತರಿಸಿದ ರುಂಡವನ್ನು ಮನೆಯ ಮುಂದಿದ್ದ ಮರವೊಂದಕ್ಕೆ ನೇತುಹಾಕಿದನು. ಮೃತರನ್ನು ಇಮಾದ್‌ಪುರ ಗ್ರಾಮದ ನಿವಾಸಿ ಧರ್ಮೇಂದ್ರ ಕುಮಾರ್ ಅವರ ಪತ್ನಿ, 25 ವರ್ಷದ ಅಂಶು ದೇವಿ ಎಂದು ಗುರುತಿಸಲಾಗಿದೆ.

ಗ್ರಾಮಸ್ಥರ ಪ್ರಕಾರ, ಆರೋಪಿ ಕುನಾಲ್ ಕುಮಾರ್ ಮಾದಕ ವ್ಯಸನಿಯಾಗಿದ್ದಾನೆ. ಘಟನೆ ನಡೆದಾಗ ಅಂಶು ದೇವಿ ಮನೆಯಲ್ಲಿ ಒಬ್ಬರೇ ಇದ್ದರು ಮತ್ತು ಕುಟುಂಬದ ಸದಸ್ಯರು ಹೊಲಕ್ಕೆ ಹೋಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹೊಲದಿಂದ ಮನೆಗೆ ಬಂದ ಕುಮಾರ್ ಊಟ ಕೇಳಿದ್ದಾನೆ. ಊಟ ಬಡಿಸುವಲ್ಲಿ ವಿಳಂಬವಾದ್ದರಿಂದ ಕುಪಿತಗೊಂಡ ಆತ, ಕೊಡಲಿಯನ್ನು ತೆಗೆದುಕೊಂಡು ತನ್ನ ಅತ್ತಿಗೆಯ ಮೇಲೆ ದಾಳಿ ಮಾಡಿದ್ದಾನೆ.

ಕೃತ್ಯ ಎಸಗಿದ ನಂತರ ಆರೋಪಿ ಪರಾರಿಯಾಗದೆ ಮನೆಯ ಸಮೀಪವೇ ಕುಳಿತಿದ್ದನು. ಈ ಭೀಕರ ಹತ್ಯೆಯ ಬಗ್ಗೆ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಬಳಸಲಾದ ಹರಿತವಾದ ಕೊಡಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.